ಚಿಕ್ಕಮಗಳೂರು: ಕೋವಿಡ್ ಸೋಂಕು ತಡೆಗೆ ವಿ ಧಿಸಿರುವ ನಾಲ್ಕನೇ ಹಂತದ ಲಾಕ್‌ಡೌನ್ ನಿರ್ಬಂಧ ಸಡಲಿಸಿ ಅಂತರ್ ಜಿಲ್ಲಾ ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಿಂದ ಬೆಂಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳಿಗೆ ಬಸ್ ಸಂಚಾರ ಆರಂಭಿಸಿದವು.
ಮಂಗಳವಾರ ನಗರದ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣದಿಂದ 33 ಕೆಎಸ್‌ಆರ್ ಟಿಸಿ ಬಸ್‌ಗಳು ಅಂತರ್ ಜಿಲ್ಲಾ ಸಂಚಾರ ನಡೆಸಿದವು. ಈಶಾನ್ಯ, ವಾಯುವ್ಯ ವಿಭಾಗ ಹಾಗೂ ಕೆಂಪು ವಲಯವೆಂದು ಘೋಷಿಸಿರುವ ಜಿಲ್ಲೆಗಳಿಗೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಬೆಂಗಳೂರಿಗೆ 11 ಕೆಎಸ್‌ಆರ್ ಟಿಸಿ ಬಸ್ ಸಂಚರಿಸಿದ್ದು, ಹೆಚ್ಚಿನ ಪ್ರಯಾಣಿಕರು ಬೆಂಗಳೂರು ನಗರವನ್ನು ತಲುಪಿದರು. ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿಗೆ ಕೊನೆಯ ಬಸ್ ಸಂಚಾರ ನಡೆಸಿತು.
ಮಂಗಳೂರು, ಉಡುಪಿ, ಕಲಬುರಗಿ, ರಾಯಚೂರು ಜಿಲ್ಲೆಗಳಿಗೆ ಬಸ್ ಸಂಚಾರ ನಡೆಸಲಿಲ್ಲ. ಶಿವಮೊಗ್ಗ ಜಿಲ್ಲೆಗೆ ಮಧ್ಯಾಹ್ನ 3 ಗಂಟೆಗೆ ಕೊನೆ ಬಸ್ ಕೊನೆ ಬಸ್ ಸಂಚಾರ ನಡೆಸಿದ್ದು, 4 ಬಸ್ ಗಳು ಸಂಚಾರ ನಡೆಸಿದವು. ಹಾಸನ ಜಿಲ್ಲೆಗೆ ಮಂಗಳವಾರ ಸಂಜೆ 5:30ಕ್ಕೆ ಕೊನೆಯ ಬಸ್ ಸಂಚಾರ ನಡೆಸಿದ್ದು, 8 ಬಸ್ ಸಂಚಾರ ನಡೆಸಿದವು. ಉಳಿದಂತೆ ಕಡೂರು, ಶೃಂಗೇರಿ, ಕೊಪ್ಪ, ಮೂಡಿಗೆರೆ ತಾಲೂಕುಗಳಿಗೆ ಜಿಲ್ಲಾ ಕೇಂದ್ರದಿಂದ 20ಕ್ಕೂ ಹೆಚ್ಚು ಬಸ್‌ಗಳು ಸಂಚಾರ ನಡೆಸಿದವು ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಲ್ದಾಣಾಧಿಕಾರಿ ಜಗದೀಶ್ ಮಾಹಿತಿ ನೀಡಿದರು.
ವಿವಿಧ ಮಾರ್ಗಗಳಿಗೆ ಬಸ್ ಸಂಚಾರಕ್ಕೂ ಮುನ್ನ ಸ್ಯಾನಿಟೈಸರ್ ನಿಂದ ಸ್ವಚ್ಛಗೊಳಿಸಲಾಗಿದೆ. ಹಾಸನ, ಶಿವಮೊಗ್ಗ, ಕಡೂರು, ಶೃಂಗೇರಿ, ಕೊಪ್ಪ, ಮೂಡಿಗೆರೆಗೆ ಎಂದಿನಂತೆ ಪ್ರಯಾಣಿಕರಿದ್ದರು. ಒಂದು ಬಸ್‌ನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿತ್ತು ಎಂದರು.
ಬೆಂಗಳೂರಿಗೆ ತೆರಳಲು ಬುಕ್ಕಿಂಗ್ ಗೆ ಅವಕಾಶವಿದೆ. ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ತಿಳಿಸಿದ ಅವರು, ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ನಿಲ್ದಾಣದ ಪ್ರವೇಶದ್ವಾರದಲ್ಲೇ ತಡೆದು ಸ್ಯಾನಿಟೈಸರ್ ಹಾಗೂ ಮಾಸ್ಕ್ ಧರಿಸಿ ನಂತರವೇ ಬಸ್‌ನಲ್ಲಿ ಪ್ರಯಾಣ ಬೆಳೆಸಲು ಅವಕಾಶ ನೀಡಲಾಗಿದೆ ಎಂದರು.
ಸಾಮಾಜಿಕ ಅಂತರ ಕಾಪಾಡಿಕೊಂಡು ಟಿಕೆಟ್ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಪ್ರಯಾಣಿಕರ ವಿಳಾಸವನ್ನು ಕಡ್ಡಾಯವಾಗಿ ಪಡೆದುಕೊಳ್ಳಲಾಗುತ್ತಿದೆ. ಪ್ರಯಾಣಿಕರು ಆಧಾರ್ ಕಾರ್ಡ್ ಕಡ್ಡಾಯವಾಗಿ ನೀಡಬೇಕು ಎಂದರು. ಸರ್ಕಾರ ಖಾಸಗಿ ಹಾಗೂ ನಗರ ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ನೀಡಿದರೂ ಜಿಲ್ಲೆಯಲ್ಲಿ ಯಾವುದೇ ಖಾಸಗಿ ಬಸ್‌ಗಳು ರಸ್ತೆಗಿಳಿಯದಿರುವುದು ವಿಶೇಷವಾಗಿತ್ತು. ಲಾಕ್‌ಡೌನ್‌ನಿಂದ ಕಳೆದ 55 ದಿನಗಳಿಂದ ಹೊರ ಜಿಲ್ಲೆಗಳಿಗೆ ಯಾವುದೇ ಸಾರಿಗೆ ಸಂಪರ್ಕವಿಲ್ಲದೆ ಕಂಗೆಟ್ಟಿದ್ದ ಜನರು ನಿಟ್ಟುಸಿರು ಬಿಟ್ಟರು.