ಚಿಕ್ಕಮಗಳೂರು: ಕೋವಿಡ್ ಸೋಂಕು ತಗುಲಿ ಕೋವಿಡ್-19 ಆಸ್ಪತ್ರೆಯಲ್ಲಿ ಮೃತಪಟ್ಟ ಅಜ್ಜಂಪುರ ತಾಲೂಕಿನ ಡಣಾಯಕಾಪುರ ಗ್ರಾಮದ 72 ವರ್ಷದ ವೃದ್ಧೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 36 ಮಂದಿಯನ್ನು ಗುರುತಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ| ಕೆ. ಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತ ವೃದ್ಧೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿರುವ ಮಗಳ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಕೋವಿಡ್ ಸೋಂಕು ತಗುಲಿರುವ ಸಾಧ್ಯತೆ ಇದೆ. ವೃದ್ಧೆಯ ಸಂಪರ್ಕಕ್ಕೆ ಬಂದಿದ್ದ 36 ಮಂದಿಯಲ್ಲಿ 12 ಮಂದಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನವರೆಂದು ಗುರುತಿಸಲಾಗಿದೆ. ಇವರ ವಿವರವನ್ನು ದಾವಣಗೆರೆ ಜಿಲ್ಲಾಡಳಿತಕ್ಕೆ ಈಗಾಗಲೇ ಕಳಿಸಿಕೊಡಲಾಗಿದೆ. ಉಳಿದಂತೆ 24 ಮಂದಿ ಜಿಲ್ಲೆಯವರಾಗಿದ್ದು, ಬೀರೂರಿನ 12 ಮಂದಿ, ಅಜ್ಜಂಪುರದವರು 8 ಮಂದಿ ಇದ್ದಾರೆ. ನಾಲ್ಕು ಮಂದಿ ವೃದ್ಧೆಯ ಮಕ್ಕಳು ಸೊಸೆಯಂದಿರಾಗಿದ್ದಾರೆ ಎಂದರು.
ಕೋವಿಡ್ ಸೋಂಕಿನಿಂದ ಮೃತಪಟ್ಟ ವೃದ್ಧೆ ಚನ್ನಗಿರಿ ತಾಲೂಕಿನ ಮಗಳ ಮನೆಯಿಂದ ಅಜ್ಜಂಪುರ ತಾಲೂಕು ಡಣಾಯಕಪುರ ಗ್ರಾಮಕ್ಕೆ ಬಂದ ಬಳಿಕ ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಂಡಿತ್ತು. ಕುಟುಂಬದವರು ವೃದ್ಧೆಯನ್ನು ಬೀರೂರು, ಅಜ್ಜಂಪುರ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಮೃತ ವೃದ್ಧೆಯ ಪ್ರಾಥಮಿಕ ಸಂಪರ್ಕಗಳಲ್ಲಿ 20 ಮಂದಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯಾಗಿದ್ದಾರೆಂದು ತಿಳಿಸಿದರು.
ಈಗಾಗಲೇ 24 ಮಂದಿಯ ಪ್ರಾಥಮಿಕ ಸಂಪರ್ಕಿತರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಮೃತ ವೃದ್ಧೆಯ ಮಗನಲ್ಲಿ ಕೋವಿಡ್ ಸೋಂಕಿರುವುದು ಗುರುವಾರ ಪ್ರಯೋಗಾಲಯದಿಂದ ಬಂದ ವರದಿಯಿಂದ ಬೆಳಕಿಗೆ ಬಂದಿದೆ. ಆತನನ್ನು ನಗರದಲ್ಲಿ ತೆರೆಯಲಾಗಿರುವ ಕೋವಿಡ್ -19 ಚಿಕಿತ್ಸಾ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ವೃದ್ಧೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ವೃದ್ಧೆಯ ಮಗನಲ್ಲಿ ಕೊರೊನಾ ಸೋಂಕಿರುವುದು ಪ್ರಯೋಗಾಲಯ ವರದಿಯಿಂದ ದೃಢಪಟ್ಟಿದೆ. ಆತನ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಮೃತಪಟ್ಟ ವೃದ್ಧೆ ವಾಸವಿರುವ ಗ್ರಾಮವನ್ನು ಸೀಲ್‌ಡೌನ್ ಮಾಡಿಲ್ಲವೆಂದು ಅಪರ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.