ಚಿಕ್ಕಮಗಳೂರು: ಮೂಡಿಗೆರೆ ತಾಲೂಕು ಕಳಸ ಪಟ್ಟಣದಲ್ಲಿ ತನ್ನ ಸಂಬಂಧಿಕರ ಮನೆಗೆ ಬಂದಿದ್ದ ವೃದ್ಧೆಯೊಬ್ಬರಲ್ಲಿ ಕೋವಿಡ್ ಸೋಂಕು ಪಾಸಿಟಿವ್ ಇರುವುದು ಶಿವಮೊಗ್ಗದಲ್ಲಿ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಕಳಸ ಪಟ್ಟಣದಲ್ಲಿ ವೃದ್ಧೆ ತಂಗಿದ್ದ ಮನೆ ಹಾಗೂ ಖಾಸಗಿ ಆಸ್ಪತ್ರೆಯೊಂದನ್ನು ಸೀಲ್‌ಡೌನ್ ಮಾಡಲಾಗಿದೆ.
ಮೂಲತಃ ಬಾಳೆಹೊನ್ನೂರು ಸಮೀಪದ ಖಾಂಡ್ಯದವರಾದ 65 ವರ್ಷದ ವೃದ್ಧೆ. ಶಿವಮೊಗ್ಗ ನಗರದಲ್ಲಿರುವ ತನ್ನ ಸಂಬಂಧಿಕರ ಮನೆಗೆ ತೆರಳಿದ್ದರು. ಅಲ್ಲಿಂದ ಎರಡು ತಿಂಗಳ ಹಿಂದೆ ಕಳಸ ಪಟ್ಟಣದಲ್ಲಿರುವ ಮಗಳ ಮನೆಗೆ ಬಂದು ನೆಲೆಸಿದ್ದರು. ಮಗಳ ಮನೆಯಲ್ಲಿ ವಾಸವಿದ್ದ ವೃದ್ಧೆಗೆ ಕೆಲ ದಿನಗಳ ಹಿಂದೆ ತೀವ್ರ ಜ್ವರ ಕಾಣಿಸಿಕೊಂಡಿದ್ದು, ವೃದ್ಧೆಗೆ ಕಳಸ ಪಟ್ಟಣದ ಖಾಸಗಿ ಆಸ್ಪತ್ರೆಯ ವೈದ್ಯರ ಬಳಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ, ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಈ ವೇಳೆ ಶಿವಮೊಗ್ಗದಲ್ಲಿ ವೃದ್ಧೆಯಲ್ಲಿ ಕೋವಿಡ್ ಸೋಂಕು ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ವೃದ್ಧೆಯ ರಕ್ತ, ಗಂಟಲದ್ರವ ಮಾದರಿ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ವೃದ್ಧೆಗೆ ಕೋವಿಡ್ ಪಾಸಿಟಿವ್ ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಸದ್ಯ ವೃದ್ಧೆಯನ್ನು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿರುವ ಕೋವಿಡ್ ಚಿಕಿತ್ಸಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವೃದ್ಧೆಯಲ್ಲಿ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯ ಕಳಸ ಪಟ್ಟಣದಲ್ಲಿ ವೃದ್ಧೆ ತಂಗಿದ್ದ ಮನೆ ಸೀಲ್‌ಡೌನ್ ಮಾಡಿದ್ದು, ವೃದ್ಧೆ ತಪಾಸಣೆಗೊಳಗಾಗಿದ್ದ ಖಾಸಗಿ ಆಸ್ಪತ್ರೆಯೊಂದನ್ನೂ ಸೀಲ್‌ಡೌನ್ ಮಾಡಲಾಗಿದೆ. ಅಲ್ಲದೇ ವೃದ್ಧೆಯ ಮನೆಯಲ್ಲಿದ್ದ 10 ಮಂದಿ ಹಾಗೂ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಸೇರಿ 28 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ವೃದ್ಧೆಯ ಸ್ವಂತ ಊರಾದ ಬಾಳೆಹೊನ್ನೂರು ಸಮೀಪದ ಗ್ರಾಮವೊಂದರಲ್ಲಿರುವ ವೃದ್ಧೆಯ ಮನೆಯನ್ನು ಸೀಲ್ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಆ ಮನೆಯಲ್ಲಿದ್ದ ಸದಸ್ಯರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಕಳಸ ಪಟ್ಟಣದಲ್ಲಿ ವೃದ್ಧೆಯ ಪ್ರಾಥಮಿಕ ಸಂಪರ್ಕಗಳಾದ ಒಟ್ಟು 38 ಮಂದಿಯ ರಕ್ತ ಹಾಗೂ ಗಂಟಲದ್ರವದ ಮಾದರಿಯನ್ನು ಕಳಸ ಸಮೀಪದ ಬಾಳೆಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂಗ್ರಹಿಸಲಾಗಿದ್ದು, ಶಿವಮೊಗ್ಗ ನಗರದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸೋಮವಾರ ಇಲ್ಲವೇ ಮಂಗಳವಾರ ವೃದ್ಧೆಯ ಪ್ರಾಥಮಿಕ ಸಂಪರ್ಕಗಳ ಪ್ರಯೋಗಾಲಯದ ವರದಿ ಬರಲಿದೆ ಎಂದು ತಿಳಿದು ಬಂದಿದೆ. ಕಳಸ ಪಟ್ಟಣದಲ್ಲಿ ಕೋವಿಡ್ ಸೋಂಕಿತ ವೃದ್ಧೆ ಎರಡು ತಿಂಗಳಿನಿಂದ ಸಂಬಂಧಿಗಳ ಮನೆಯಲ್ಲಿ ತಂಗಿದ್ದ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕರು ಭಾರೀ ಆತಂಕಕ್ಕೊಳಗಾಗಿದ್ದಾರೆ.
ಶಿವಮೊಗ್ಗದಿಂದ ಕಳಸ ಪಟ್ಟಣಕ್ಕೆ ಬಂದು ತನ್ನ ಮಗಳ ಮನೆಯಲ್ಲಿ ಕಳೆದ ಎರಡು ತಿಂಗಳಿನಿಂದ ವಾಸವಿದ್ದ ವೃದ್ಧೆಯಲ್ಲಿ ಪಾಸಿಟಿವ್ ಇರುವುದು ಶಿವಮೊಗ್ಗದಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕಳಸ ಪಟ್ಟಣದಲ್ಲಿ ವೃದ್ಧೆಯ ಸಂಬಂಧಿಕರ ಪೈಕಿ 10 ಮಂದಿ ಕ್ವಾರಂಟೈನ್ ಮಾಡಿ ಸ್ವಾಬ್ ಸಂಗ್ರಹ ಮಾಡಲಾಗಿದೆ. ಈ 10 ಮಂದಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ ಇದ್ದು, ಈತ ಇತ್ತೀಚೆಗೆ ಪಟ್ಟಣದ ಪರೀಕ್ಷಾ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನೂ ಬರೆದಿದ್ದಾನೆ. ಪರೀಕ್ಷೆಗೂ ಮುನ್ನ ಈ ವಿದ್ಯಾರ್ಥಿ ಕೆಲ ಶಿಕ್ಷಕರಿಂದ ಟ್ಯೂಶನ್ ಪಡೆದಿದ್ದು, ಈ ವಿದ್ಯಾರ್ಥಿಯ ಸಂಪರ್ಕದಲ್ಲಿದ್ದವರಲ್ಲಿ ಇದೀಗ ಆತಂಕ ಎದುರಾಗಿದೆ.
ಕಳಸ ಪಟ್ಟಣದಲ್ಲಿ ಸಂಬಂಧಿಕರ ಮನೆಯಲ್ಲಿ ಎರಡು ತಿಂಗಳಿಂದ ತಂಗಿದ್ದ ವೃದ್ಧೆಗೆ ಕೋವಿಡ್ ಸೋಂಕಿರುವುದು ಶಿವಮೊಗ್ಗದಲ್ಲಿ ಪತ್ತೆಯಾಗಿದೆ. ಆದ್ದರಿಂದ ಈ ಪ್ರಕರಣ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ ಸೇರಿದ್ದಾಗಿದೆ. ಆದರೆ ವೃದ್ಧೆ ತಂಗಿದ್ದ ಮನೆ ಹಾಗೂ ತಪಾಸಣೆಗೊಳಗಾಗಿದ್ದ ಖಾಸಗಿ ಆಸ್ಪತ್ರೆ ಕಳಸ ಪಟ್ಟಣದಲ್ಲಿದ್ದು, ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಖಾಸಗಿ ಆಸ್ಪತ್ರೆಯನ್ನು ಭಾನುವಾರ, ಸೋಮವಾರ ಮಾತ್ರ ಸೀಲ್‌ಡೌನ್ ಮಾಡಲಾಗುವುದು. ವೃದ್ಧೆ ತಂಗಿದ್ದ ಮನೆಯ ಸದಸ್ಯರ ಸ್ವಾಬ್ ಸಂಗ್ರಹಿಸಿ ಲ್ಯಾಬ್‌ಗ ಕಳುಹಿಸಲಾಗಿದೆ. ಆಸ್ಪತ್ರೆ ಸಿಬ್ಬಂದಿ, ಮನೆಯ ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿದೆ.
ಡಾ|ಪ್ರೇಮ್‌ಕುಮಾರ್,
ಆರೋಗ್ಯಾಧಿಕಾರಿ,
ಸಮುದಾಯ ಆರೋಗ್ಯ ಕೇಂದ್ರ, ಕಳಸ