Advertisement

ಚಿಕ್ಕಮಗಳೂರು ಉದ್ವಿಗ್ನ; ಗಿರಿಯ ಗೋರಿ ಕಲ್ಲು ಕಿತ್ತ ಕಿಡಿಗೇಡಿಗಳು

06:00 AM Dec 04, 2017 | |

ಚಿಕ್ಕಮಗಳೂರು: ದತ್ತಜಯಂತಿ ಆಚರಣೆ ವೇಳೆ ಇನಾಂ ದತ್ತಾತ್ರೇಯ ಬಾಬಾಬುಡನ್‌ಗಿರಿಯ ನಿಷೇಧಿತ ಪ್ರದೇಶದಲ್ಲಿದ್ದ ಗೋರಿಯೊಂದರ ಕಲ್ಲನ್ನು ಕಿಡಿಗೇಡಿಗಳು ಕಿತ್ತು ಹಾಕಿದ ಘಟನೆ ಭಾನುವಾರ ನಡೆದಿದೆ. ಇದಾದ ಕೆಲವೇ ಕ್ಷಣದಲ್ಲಿ ನಗರದಲ್ಲಿ ಕಿಡಿಗೇಡಿಗಳು ಖಾಸಗಿ ಬಸ್ಸುಗಳಿಗೆ, ಅಂಗಡಿಯೊಂದರ ಮೇಲೆ ಕಲ್ಲು ತೂರಿದ್ದಲ್ಲದೆ, ಇಬ್ಬರು ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಹಮ್ಮಿಕೊಂಡಿದ್ದ ದತ್ತ ಜಯಂತಿಯ ಕೊನೆ ದಿನವಾದ ಭಾನುವಾರ ರಾಜ್ಯದ ವಿವಿಧೆಡೆಗಳಿಂದ ಸಹಸ್ರಾರು ದತ್ತಮಾಲಾಧಾರಿಗಳು ದತ್ತಪೀಠಕ್ಕೆ ಆಗಮಿಸಿದ್ದರು. ಸರತಿ ಸಾಲಿನಲ್ಲಿ ನಿಂತು ದತ್ತಪಾದುಕೆಗಳ ದರ್ಶನ ಪಡೆದು ಗುಹೆಯಿಂದ ಹೊರ ಬರುತ್ತಿದ್ದ ವೇಳೆ ಓರ್ವ ದತ್ತಮಾಲಾಧಾರಿ ಪೊಲೀಸರ ಕಣ್ಣು ತಪ್ಪಿಸಿ ನಿಷೇಧಿತ ಪ್ರದೇಶದೊಳಗೆ ನುಗ್ಗಿ ಕೇಸರಿ ಧ್ವಜ ಹಾರಿಸಿದ. ಆತ ಅಲ್ಲಿಂದ ಹೊರ ಬಂದ ನಂತರ ಉಳಿದ ದತ್ತಮಾಲಾಧಾರಿಗಳು ಆತನನ್ನು ಹೊತ್ತು ಹಿಂದೂ ಪರ ಘೋಷಣೆ ಕೂಗಲಾರಂಭಿಸಿದರು. 

ಇದರಿಂದ ಉತ್ತೇಜಿತರಾದ ದತ್ತಮಾಲಾಧಾರಿಗಳು ನಿಷೇಧಿತ ಸ್ಥಳದ ಸುತ್ತಲೂ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ನಿಷೇಧಿತ ಸ್ಥಳದೊಳಗೆ ತೆರಳುವ ಯತ್ನ ಮಾಡತೊಡಗಿದರು.

ಈ ಸಂದರ್ಭದಲ್ಲಿ ದತ್ತಮಾಲಾಧಾರಿಗಳು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಕೂಡಲೆ ಸ್ಥಳಕ್ಕೆ ಧಾವಿಸಿದ ಶಾಸಕ ಸಿ.ಟಿ.ರವಿ ದತ್ತಮಾಲಾಧಾರಿಗಳನ್ನು ಸಮಾಧಾನಪಡಿಸಿದರು. ಇದೇ ವೇಳೆ ಮತ್ತೂಂದು ಕಡೆಯಿಂದ ನಿಷೇಧಿತ ಸ್ಥಳದೊಳಗೆ ನುಗ್ಗಿದ ಕೆಲವರು ಅಲ್ಲಿದ್ದ ಗೋರಿಯೊಂದರ ಕಲ್ಲನ್ನು ಕಿತ್ತೆಸೆದರಲ್ಲದೆ ಕೇಸರಿ ಧ್ವಜಗಳನ್ನು ಹಾರಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ಪೊಲೀಸರು ಲಾಠಿ ಪ್ರಹಾರ ಮಾಡಿ ಎಲ್ಲರನ್ನೂ ಚದುರಿಸಿದರು.

ಕಲ್ಲು ತೂರಾಟ; ಲಾಠಿ ಪ್ರಹಾರ:
ಬಾಬಾಬುಡನ್‌ಗಿರಿ ಪ್ರದೇಶದಲ್ಲಿ ಇಷ್ಟೆಲ್ಲ ನಡೆಯುತ್ತಿದ್ದಂತೆ ಇತ್ತ ಚಿಕ್ಕಮಗಳೂರು ನಗರದಲ್ಲಿ ಕೆಲವೆಡೆ ಕಲ್ಲು ತೂರಾಟ ನಡೆಯಿತು. ದತ್ತಪೀಠದಿಂದ ವಾಪಸ್ಸಾಗುತ್ತಿದ್ದ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಉಪ್ಪಳ್ಳಿಯಲ್ಲಿ ಖಾಸಗಿ ಬಸ್‌ ಒಂದರ ಮೇಲೆ ಕಲ್ಲು ತೂರಲಾಗಿದೆ. ಬೈಕಿನಲ್ಲಿ ತೆರಳುತ್ತಿದ್ದ ಚಂದನ್‌ ಹಾಗೂ ಮತ್ತೋರ್ವ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ರಾಮನಹಳ್ಳಿಯ ಮೌಂಟನ್‌ ವ್ಯೂ ಕಾಲೇಜಿನ ಬಳಿಯೂ ಬಸ್ಸು ಹಾಗೂ ಅಂಗಡಿಯೊಂದರ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಇದಲ್ಲದೆ ನಗರದ ವಿವಿಧೆಡೆಗಳಲ್ಲಿಯೂ ಬಸ್‌ಗಳ ಮೇಲೆ ಕಲ್ಲು ತೂರಲಾಗಿದೆ.
ಈ ಮಧ್ಯೆ, ದತ್ತಪೀಠದಿಂದ ವಾಪಸ್‌ ಆಗುತ್ತಿದ್ದ ವಾಹನವನ್ನು ಪೊಲೀಸರು ತಡೆದರು ಎಂಬ ನೆಪವೊಡ್ಡಿ ನಗರದ ಶೃಂಗಾರ್‌ ವೃತ್ತದ ಬಳಿ ದತ್ತಮಾಲಾಧಾರಿಗಳು ಪ್ರತಿಭಟಿಸಲು ಮುಂದಾದರು. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಎಸ್‌.ಪಿ.ಅಣ್ಣಾಮಲೈ ಸ್ಥಳದಿಂದ ತೆರಳುವಂತೆ ಮನವಿ ಮಾಡಿದರು ಇದಕ್ಕೆ ಒಪ್ಪದೆ ಪ್ರತಿಭಟನೆ ಮುಂದುವರಿಸಿದಾಗ ಲಾಠಿ ಪ್ರಹಾರ ನಡೆಸಲು ಎಸ್‌ಪಿ ಆದೇಶ ನೀಡಿದರು. ಕೂಡಲೇ ಪೊಲೀಸರು ಲಾಠಿ ಬೀಸಿ ನೆರೆದಿದ್ದವರನ್ನು ಚದುರಿಸಿದರು.

Advertisement

ಸಂಜೆ ನಗರದ ಕೋಟೆ ಬಡಾವಣೆಯ ಸಮೀಪ ಕೆಲವರು ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ವಾಹನದಲ್ಲಿ ಸಂಚರಿಸುತ್ತಿದ್ದರು. ತಕ್ಷಣ ಪೊಲೀಸರು ವಾಹನವನ್ನು ಅಡ್ಡಗಟ್ಟಿ ಪೊಲೀಸರನ್ನು ನಿಂದಿಸಿದವರಿಗೆ ಲಾಠಿ ರುಚಿ ತೋರಿಸಿದರು.

ಅಘೋಷಿತ ಬಂದ್‌
ನಗರದ ಮುಖ್ಯ ರಸ್ತೆಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಒಂದು ರೀತಿಯಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಗರ ಸೇರಿದಂತೆ ಜಿಲ್ಲಾದ್ಯಂತ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.

ದತ್ತ ಪೀಠ ವಿವಾದ: ಸರ್ಕಾರಕ್ಕೆ ವರದಿ
ಬೆಂಗಳೂರು:
ಚಿಕ್ಕಮಗಳೂರಿನ ಬಾಬಾ ಬುಡನ್‌ ಗಿರಿಯ ದತ್ತ ಪೀಠ ವಿವಾದ ಕುರಿತಂತೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್‌ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಭಾನುವಾರ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರ ಸರ್ಕಾರಿ ನಿವಾಸಕ್ಕೆ ತೆರಳಿ ನ್ಯಾ.ನಾಗಮೋಹನ್‌ ದಾಸ್‌ ಅವರು ವರದಿಯನ್ನು ಹಸ್ತಾಂತರಿಸಿದರು.

1975 ರಿಂದ ಆರಂಭವಾಗಿರುವ ವಿವಾದದ ಕುರಿತು ಸುಪ್ರೀಂ ಕೋರ್ಟ್‌ ಮೇ ತಿಂಗಳಲ್ಲಿ ಆದೇಶ ನೀಡಿ ಆರು ವಾರಗಳಲ್ಲಿ  ಸರ್ಕಾರವೇ ಮಾತುಕತೆಯ ಮೂಲಕ ವಿವಾದ ಬಗೆ ಹರಿಸುವಂತೆ ಆದೇಶ ನೀಡಿತ್ತು. ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂಪುಟ ಉಪ ಸಮಿತಿ ರಚನೆ ಮಾಡಿತ್ತು. ಆ ಸಮಿತಿ ಆರು ವಾರಗಳಲ್ಲಿ ವಿವಾದದ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ  ಕೋರ್ಟ್‌ನ ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಳ್ಳಲು ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೇತೃತ್ವದಲ್ಲಿ ಕಾನೂನು ತಜ್ಞರ ಸಮಿತಿ ರಚನೆ ಮಾಡಿತ್ತು.

ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಭಾನುವಾರ ಸರ್ಕಾರಕ್ಕೆ ಅಂತಿಮ ವರದಿ ನೀಡಿದ್ದು, ಈ ವರದಿಯ ಸಾಧಕ ಬಾಧಕಗಳನ್ನು ಸಂಪುಟ ಉಪ ಸಮಿತಿ ಪರಿಶೀಲನೆ ಮಾಡಿ ನಂತರ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾನೂನು ಸಚಿವ ಟಿ.ಬಿ. ಜಯಚಂದ್ರ, ದತ್ತ ಪೀಠದ ವಿವಾದವನ್ನು ಸರ್ಕಾರವೇ ಬಗೆ ಹರಿಸುವಂತೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು. ಈ ಸಂಬಂಧ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿತ್ತು. ಉಪ ಸಮಿತಿ ಸಲಹೆಯಂತೆ ನಾಲ್ಕು ತಿಂಗಳ ಹಿಂದೆ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆ ಸಮಿತಿ ಪರ ವಿರೋಧ ವಾದಗಳನ್ನು ಆಲಿಸಿ ಇಂದು ವರದಿ ನೀಡಿದೆ. ವರದಿಯಲ್ಲಿ ಏನಿದೆಯೋ ಗೊತ್ತಿಲ್ಲ. ಈ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next