ಚಿಕ್ಕೋಡಿ: ಕೃಷ್ಣಾ ನದಿಯಲ್ಲಿ ಸಂಪೂರ್ಣ ನೀರು ಖಾಲಿಯಾಗಿರುವುದರಿಂದ ನದಿ ಬತ್ತಿ ಹೋಗಿದೆ. ಹೀಗಾಗಿ ನದಿ ನೀರನ್ನು ಬಳಕೆ ಮಾಡಿಕೊಳ್ಳುವ ಚಿಕ್ಕೋಡಿ ನಗರ ಮತ್ತು ತಾಲೂಕಿನ ವಿವಿಧ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ಥಗಿತಗೊಂಡು ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಸಂಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಗಡಿ ಭಾಗದ ಜನರ ಜೀವನಾಡಿಯಾದ ಕೃಷ್ಣಾ ನದಿ ಕಳೆದ ನಾಲ್ಕೈದು ದಿನಗಳಿಂದ ಬತ್ತಿ ಬರಿದಾಗಿದೆ. ಹೀಗಾಗಿ ನದಿ ನೀರನ್ನು ಅವಲಂಬಿಸಿರುವ ಚಿಕ್ಕೋಡಿ ನಗರದ ಜನರಿಗೆ ಆತಂಕ ಸೃಷ್ಟಿಯಾಗಿದ್ದು, ದಿನಕೊಮ್ಮೆ ಬರುವ
ನೀರು ಇದೀಗ ನಾಲ್ಕೈದು ದಿನಕ್ಕೊಮ್ಮೆ ಬರುತ್ತಿದೆ. ಇದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಅನುಭವಿಸುವ ಪ್ರಸಂಗ ಎದುರಾಗಿದೆ. ಚಿಕ್ಕೋಡಿ ನಗರಕ್ಕೆ 24×7 ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿದೆ. ಆದರೆ ನದಿಯು ಖಾಲಿಯಾಗಿರುವುದರಿಂದ ನಗರದ ಜನರು ನೀರಿಗಾಗಿ ತೀವ್ರ ತೊಂದರೆ ಅನುಭವಿಸುವ ಕಾಲ ದೂರವಿಲ್ಲ.
ಕೃಷ್ಣಾ ನದಿಯಿಂದ ಚಿಕ್ಕೋಡಿ ನಗರಕ್ಕೆ ಪೂರೈಕೆಯಾಗುವ ಅಂಕಲಿ ಬಳಿ ದೊಡ್ಡ ಹೊಂಡ ಇರುವುದರಿಂದ ಮೂರು ದಿನಗಳವರಿಗೆ ನೀರು ಲಭ್ಯವಾಗುವ ಸಾಧ್ಯತೆ ಇದ್ದು, ನಂತರ ದಿನಗಳಲ್ಲಿ ನೀರು ಖಾಲಿಯಾದರೆ ನಗರದ ಜನರಿಗೆ ತೊಂದರೆಯಾಗುವ ಲಕ್ಷಣ ಹೆಚ್ಚಾಗಿದೆ. ಅಂಕಲಿ ಬಳಿ ಇರುವ ಹೊಸ ಜಾಕ್‌ವೆಲ್ ಬಳಿ ನೀರು ಸಂಪೂರ್ಣ ಕಡಿಮೆಯಾಗಿದೆ. ಹೀಗಾಗಿ ಕಲ್ಲೋಳ ಬಳಿ ಇರುವ ಹಳೆ ಜಾಕ್‌ವೆಲ್ ಬಳಿ ಅಲ್ಪಸ್ವಲ್ಪ ನೀರು ಚಿಕ್ಕೋಡಿ ನಗರಕ್ಕೆ ಬರುತ್ತಿದೆ. ಒಂದು ವೇಳೆ ಶೀಘ್ರವಾಗಿ ನದಿಗೆ ನೀರು ಬರದೇ ಹೋದರೆ ನಗರಕ್ಕೆ ಕುಡಿಯುವ ನೀರಿನ ಕೊರತೆ ಭೀತಿ ತಪ್ಪಿದ್ದಲ್ಲ. ಅದರಂತೆ ಚಿಕ್ಕೋಡಿ ತಾಲೂಕಿನಲ್ಲಿರುವ ಜೈನಾಪುರ, ಕಾಡಾಪುರ ಸೇರಿ ನಾಲ್ಕೈದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ನೀರು ಸರಬರಾಜು ಆಗುತ್ತಿತ್ತು. ಆದರೆ ನದಿಯಲ್ಲಿ ನೀರು ಖಾಲಿಯಾಗಿದ್ದರಿಂದ ಯೋಜನೆ ಸ್ಥಗೀತಗೊಂಡು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಆಯಾ ಗ್ರಾಮದಲ್ಲಿ ಇರುವ ಬಾವಿ, ಕೊಳವೆ ಬಾವಿಯಲ್ಲಿಯೂ ಅಂತರ್ಜಲಮಟ್ಟ ಕುಸಿತು ಕಂಡು ನೀರಿಲ್ಲದೇ ಜನ ಪರದಾಡುತ್ತಿದ್ದಾರೆ. ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳು ಸಹ ನೀರಿಲ್ಲದೇ ಬತ್ತಿ ಬರಡಾಗಿದ್ದರಿಂದ ಜನಸಾಮಾನ್ಯರು ಹನಿ ನೀರಿಗಾಗಿ ಪರಿತಪಿಸುವ ಪ್ರಸಂಗ ಎದುರಾಗಿದೆ.
ನೆತ್ತಿ ಸುಡುವ ಬೀರು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಜನರನ್ನು ಕಾಡುತ್ತಿದೆ. ಇತ್ತ ನೀರಿನ ಸಮಸ್ಯೆ ಬಗೆಹರಿಸುವ ಅಧಿ ಕಾರಿಗಳು ಮತ್ತು ಜನಪ್ರತಿನಿಧಿಗಳು ಚುನಾವಣೆ ಕಾರ್ಯದಲ್ಲಿ ನಿರತರಾಗಿರುವದರಿಂದ ಸಾಮಾನ್ಯ ಜನರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ. ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಸಾರ್ವಜನಿಕರು ಆಗ್ರಹ ಪಡಿಸಿದರೆ ಅ ಧಿಕಾರಿಗಳು ಮಾತ್ರ ಚುನಾವಣೆ ಕಾರ್ಯದಲ್ಲಿ ನಿರತರಾಗಿದ್ದೇವೆಂದು ಹಾರಿಕೆ ಉತ್ತರ ನೀಡಿ ಜಾರಿಗೊಳ್ಳುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಕೃಷ್ಣಾ ನದಿಯಲ್ಲಿ ನೀರು ಹರಿಯುತ್ತಿದ್ದರೆ ಚಿಕ್ಕೋಡಿ ನಗರಕ್ಕೆ ಸಂಪೂರ್ಣ ನೀರು ಬರುತ್ತದೆ. ಆದರೆ ನದಿಯಲ್ಲಿ ನೀರು ಇಲ್ಲದೇ ಇರುವುದರಿಂದ ನಗರದಲ್ಲಿ ನಾಲ್ಕೈದು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೂಡಲೇ ಅಧಿಕಾರಿಗಳು ಮಹಾರಾಷ್ಟ್ರದಿಂದ ನೀರು ಹರಿಸಲು ಪ್ರಯತ್ನ ಮಾಡಬೇಕು.
ಚಂದ್ರಕಾಂತ ಹುಕ್ಕೇರಿ
ಸಾಮಾಜಿಕ ಹೋರಾಟಗಾರರು ಚಿಕ್ಕೋಡಿ.
ಕೃಷ್ಣಾ ನದಿಯಲ್ಲಿ ನೀರು ಕಡಿಮೆಯಾಗಿರುವುದರಿಂದ ಹೊಸ ಜಾಕ್ ವೆಲ್‌ನಲ್ಲಿ ಪಂಪ್‌ಸೆಟ್ ಕೆಳಗೆ ಇಡಲಾಗಿದ್ದು, ಹಳೆ ಜಾಕ್‌ವೆಲ್‌ದ ಮೂಲಕ ನೀರು ಪೂರೈಕೆ ಆಗತ್ತಿದೆ. ಈಗ ನದಿಯಲ್ಲಿರುವ ನೀರು ನಗರಕ್ಕೆ ಮೂರು ದಿನಗಳವರಿಗೆ ಪೂರೈಕೆ ಆಗುತ್ತದೆ. ಅಷ್ಟರಲ್ಲಿ ನದಿಗೆ ನೀರು ಬರುವ ಸಾಧ್ಯತೆ ಇದ್ದು, ನಗರದ ಜನ ಆತಂಕ ಪಡುವ ಅಗತ್ಯವಿಲ್ಲ.
ಡಾ.ಸುಂದರ ರೂಗಿ
ಮುಖ್ಯಾಧಿಕಾರಿಗಳು, ಪುರಸಭೆ ಚಿಕ್ಕೋಡಿ.
ಮಹಾದೇವ ಪೂಜೇರಿ