ಚಿಕ್ಕೋಡಿ: ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಬರಗಾಲ ಆವರಿಸಿದೆ. ಜನ ಕುಡಿಯುವ ನೀರಿಗೆ ಮತ್ತು ದನಕರುಗಳ ಮೇವಿಗಾಗಿ ಪರದಾಟ ಆರಂಭಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕ್ಷೇತ್ರದಲ್ಲಿದ್ದುಕೊಂಡು ಕೆಲಸ ಮಾಡುವುದನ್ನು ಬಿಟ್ಟು ಅಧಿಕಾರದ ಆಸೆಗಾಗಿ ರೆಸಾರ್ಟ್ ರಾಜಕಾರಣ ಮಾಡುವ ಶಾಸಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘಟನೆ ಪದಾಧಿಕಾರಿಗಳು ಚಿಕ್ಕೋಡಿ ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ರೈತ ಸಂಘದ ವಕ್ತಾರ ತ್ಯಾಗರಾಜ ಕದಮ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಚಿಕ್ಕೋಡಿ ಲೋಕಸಭೆಯ ಎಂಟು ವಿಧಾನಸಭೆ ಕ್ಷೇತ್ರದ ಶಾಸಕರುಗಳ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ರೆಸಾರ್ಟಗೆ ಹೋಗಿರುವ ಶಾಸಕರೂ ಕೂಡಲೇ ಕ್ಷೇತ್ರಕ್ಕೆ ಆಗಮಿಸಿ ರೈತರ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ನೀಡಬೇಕು ಎಂದು ಒತ್ತಾಯಿಸಿದರು.
ಶಾಸಕರ ಭಾವಚಿತ್ರಕ್ಕೆ ಬೆಂಕಿ: ಅಥಣಿ ಶಾಸಕ ಮಹೇಶ ಕುಮಟಳ್ಳಿ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಕುಡಚಿ ಶಾಸಕ ಪಿ.ರಾಜೀವ, ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಹುಕ್ಕೇರಿ ಶಾಸಕ ಉಮೇಶ ಕತ್ತಿ, ಯಮಕನಮರಡಿ ಶಾಸಕ ಮತ್ತು ಸಚಿವ ಸತೀಶ ಜಾರಕಿಹೊಳಿ ಭಾವಚಿತ್ರಗಳಿಗೆ ರೈತ ಸಂಘಟನೆ ಕಾರ್ಯಕರ್ತರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದರು.
ಈ ವೇಳೆ ರೈತ ಸಂಘದ ವಕ್ತಾರ ತ್ಯಾಗರಾಜ ಕದಮ್ ಮಾತನಾಡಿ, ಸಮರ್ಪಕ ಮಳೆ ಆಗದೇ ಇರುವುದರಿಂದ ಜಿಲ್ಲೆಯಲ್ಲಿ ಬರ ಎದುರಾಗಿದೆ. ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸುವುದನ್ನು ಬಿಟ್ಟು ರೆಸಾರ್ಟ್ ರಾಜಕಾರಣ ಮಾಡುವ ಶಾಸಕರ ವಿರುದ್ಧ ರಾಜ್ಯಪಾಲರು ಶಿಸ್ತಿನ ಕ್ರಮ ಕೈಗೊಂಡು ಸ್ವಚ್ಚಂದ ಆಡಳಿತಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ಕನ್ನಡಪರ ಸಂಘಟನೆಗಳು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ರವೀಂದ್ರ ಪಟ್ಟೇಗಾರ, ಚಂದ್ರಶೇಖರ ಸಾರಂಗಿ, ಗಜು ಮತಾರೆ, ಶಂಕರ ವಡೇದ, ಅಪ್ಪಾಸಾಹೇಬ ಕುರಣೆ, ಆನಂದ ಪಾಶ್ಚಾಪೂರೆ, ಬಸವರಾಜ ಪಾಶ್ಚಾಪೂರೆ, ಮಹಾದೇವ ಸನದಿ, ಸತಿಗೌಡಾ ಪಾಟೀಲ ಸೇರಿದಂತೆ ರೈತ ಸಂಘಟನೆ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಇದ್ದರು.