Advertisement

ಬೆಲೆ ಏರಿಕೆಗೆ ಯುವ ಕಾಂಗ್ರೆಸ್‌ ಆಕ್ರೋಶ

06:58 PM Aug 02, 2021 | Team Udayavani |

ಬಾಳೆಹೊನ್ನೂರು: ಕೇಂದ್ರ ಹಾಗೂ ರಾಜ್ಯ ಸರಕಾರ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸದೆ ಬಂಡವಾಳಶಾಹಿಗಳ ಓಲೈಕೆಯಲ್ಲಿ ತೊಡಗಿಸಿಕೊಂಡಿದೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಆರೋಪಿಸಿದರು. ಪೆಟ್ರೋಲ್‌, ಡೀಸೆಲ್‌, ತೈಲ ಬೆಲೆ ಏರಿಕೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಸೈಕಲ್‌ ಜಾಥಾ ಹಾಗೂ ಪ್ರತಿಭಟನೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು.

Advertisement

ಆಪರೇಷನ್‌ ಕಮಲದ ಮೂಲಕ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸರಕಾರವನ್ನು ಪತನಗೊಳಿಸಿದ ಬಿಜೆಪಿ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸದೇ ಅಧಿ ಕಾರಕ್ಕಾಗಿ ಕಚ್ಚಾಟ ನಡೆಸುತ್ತಾ ಬಂದಿದೆ. 2019-20 ಹಾಗೂ 21 ರ ಪ್ರವಾಹ ಪೀಡಿತರಿಗೆ ಸೂರು ಕಲ್ಪಿಸುವಲ್ಲಿ ವಿಫಲವಾಗಿದೆ.

ಲಕ್ಷಾಂತರ ಮನೆಗಳು ನೆಲಸಮಗೊಂಡಿದ್ದು, ನೀಡಿದ ಭರವಸೆಯಂತೆ ಮನೆ ನಿರ್ಮಿಸಿಕೊಡುವಲ್ಲಿ ವಿಫಲವಾಗಿದ್ದು, ಕೊರೊನಾ ಎರಡನೇ ಅಲೆಯ ಬಗ್ಗೆ ತಜ್ಞರು ಮುನ್ನೆಚ್ಚರಿಕೆ ನೀಡಿದ್ದರೂ ಮುಂಜಾಗ್ರತೆ ಕ್ರಮ ಕೈಗೊಳ್ಳದೆ ಸಾವಿರಾರು ಜನರು ಪ್ರಾಣ ಕಳೆದುಕೊಂಡರು. ಲಸಿಕೆ ನೀಡುವಲ್ಲಿ ವಿಫಲವಾಗಿದ್ದು ನಿತ್ಯವೂ ಲಸಿಕೆಗಾಗಿ ಜನರು ಅಲೆದಾಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಡುಗಡೆಯಾದ ಅನುದಾನವನ್ನು ಮಾಜಿ ಶಾಸಕ ಡಿ.ಎನ್‌. ಜೀವರಾಜ್‌ ಅವರು ತಡೆ ಹಿಡಿದಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದ್ದು ಮುಂದಿನ ದಿನಗಳಲ್ಲಿ ಅನುದಾನದ ಬಿಡುಗಡೆಗಾಗಿ ಹೋರಾಟ ನಡೆಸುವುದಾಗಿ ತಿಳಿಸಿದರು. ಜಿಲ್ಲಾ ವೀಕ್ಷಕ ದನಂಜಯ ಮಾತನಾಡಿ, ಬಿಜೆಪಿಯವರು ಕಪ್ಪು ಹಣ ಹೊರತರುವ ನಿಟ್ಟಿನಲ್ಲಿ ನೋಟ್‌ ಬ್ಯಾನ್‌ ಮಾಡಿ ಆರ್ಥಿಕ ಹಿನ್ನಡೆಗೆ ಕಾರಣರಾದರು. ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸದೆ ರಾಜ್ಯ ಸರಕಾರಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಎಸಗುವ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುವ ಅನಿವಾರ್ಯತೆಯಿದೆ ಉತ್ತರ ಕರ್ನಾಟಕದಲ್ಲಿ ಇದೀಗ ಪ್ರವಾಹದಿಂದ ಸಮಸ್ಯೆ ಎದುರಿಸುತ್ತಿರುವ ಜನರಿಗೆ ನೆರವು ನೀಡುವ ಬದಲು ಶಾಸಕರು ಸಚಿವ ಸ್ಥಾನಕ್ಕಾಗಿ ದೆಹಲಿ ಯಾತ್ರೆ ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಎಂ. ಸತೀಶ್‌, ಹೋಬಳಿ ಕಾರ್ಯದರ್ಶಿ ಹಿರಿಯಣ್ಣ ಮಾತನಾಡಿದರು, ಜಿಲ್ಲಾಧ್ಯಕ್ಷ ಡಾ| ಅಂಶುಮಂತ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಿ.ಎಂ. ನಟರಾಜ್‌, ಹೋಬಳಿ ಅಧ್ಯಕ್ಷ ಮಹಮ್ಮದ್‌ ಹನೀಫ್‌, ಬಿ. ಕಣಬೂರು ಗ್ರಾಪಂ ಅಧ್ಯಕ್ಷೆ ಅಂಬುಜಾ, ಉಪಾಧ್ಯಕ್ಷ ಎಂ.ಜೆ. ಮಹೇಶಾಚಾರ್‌, ಮಾಗುಂಡಿ ಗ್ರಾಪಂ ಅಧ್ಯಕ್ಷೆ ಪ್ರಮೀಳಾ ಸಿಲ್ವಿಯಾ ಸೆರಾವೋ, ಕರ್ಕೇಶ್ವರ ಗ್ರಾಪಂ ಅಧ್ಯಕ್ಷ ಕೇಶವತ್ತಿ ರಾಜೇಶ್‌, ತಾಪಂ ಮಾಜಿ ಅಧ್ಯಕ್ಷ ಎಂ.ಎಸ್‌. ಜಯಪ್ರಕಾಶ್‌, ಜಿಲ್ಲಾ ಸಮಿತಿ ಸದಸ್ಯ ಇಸಿ. ಜಾಯ್‌, ತಾಪಂ ಮಾಜಿ ಸದಸ್ಯರಾದ ಟಿ.ಎಂ. ನಾಗೇಶ್‌ ಇತರರು ಇದ್ದರು. ಇದಕ್ಕೂ ಮುನ್ನ ಅರಣ್ಯ ಇಲಾಖೆ ಮುಂಭಾಗದಿಂದ ರೋಟರಿ ಸರ್ಕಲ್‌ ವರೆಗೆ ಸೈಕಲ್‌ ಜಾಥಾ ನಡೆಸಿ ಪ್ರತಿಭಟನೆ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next