Advertisement

ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮ

12:47 PM Apr 17, 2020 | Naveen |

ಚಿಕ್ಕಮಗಳೂರು: ಮೇ 3ರ ವರೆಗೆ ಎರಡನೇ ಹಂತದ ಲಾಕ್‌ಡೌನ್‌ ವಿಸ್ತರಣೆ ಮಾಡಲಾಗಿದ್ದು, ಇದರ ಬೆನ್ನಲ್ಲೇ ಜಿಲ್ಲಾ ಪೊಲೀಸ್‌ ಇಲಾಖೆ ಜನಸಂಚಾರ ನಿಯಂತ್ರಿಸಲು ಮತ್ತಷ್ಟು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

Advertisement

ಜಿಲ್ಲಾದ್ಯಂತ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚಿನ ಸಿಬ್ಬಂದಿ ನೇಮಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಅಗತ್ಯ ವಸ್ತು ಸೇವೆ, ಸರಕು ಸಾಗಣೆ, ತುರ್ತು ವೈದ್ಯಕೀಯ ಸೇವೆಯನ್ನು ಹೊರತುಪಡಿಸಿ ಉಳಿದಂತೆ ಜನಸಂಚಾರಕ್ಕೆ ಕಡಿವಾಣ ಹಾಕಲಾಗಿದೆ. ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮಗಳಿಂದ ನಗರ ಸೇರಿದಂತೆ ಜಿಲ್ಲಾದ್ಯಂತ ಜನಸಂಚಾರ ಕಡಿಮೆಯಾಗಿದೆ. ವಿನಾಕಾರಣ ಸಂಚರಿಸುವರ ವಾಹನಗಳನ್ನು ವಶಕ್ಕೆ ಪಡೆದು ಅವರ ವಿರುದ್ಧ ಪ್ರಕರಣ ದಾಖಲಿಸುತ್ತಿರುವ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.

ಲಾಕ್‌ಡೌನ್‌ ಉಲ್ಲಂಘಿಸಿ ಸಂಚರಿಸುತ್ತಿದ್ದ 1,500ಕ್ಕೂ ಹೆಚ್ಚು ದ್ವಿಚಕ್ರ ವಾಹನ ಹಾಗೂ 130ಕ್ಕೂ ಹೆಚ್ಚು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ನೆರೆಯ ಜಿಲ್ಲೆಯ ಜನರು ಜಿಲ್ಲೆಗೆ ಪ್ರವೇಶಿಸು ವುದನ್ನು ನಿರ್ಬಂಧಿ ಸಲಾಗಿದ್ದು, ಜಿಲ್ಲೆಯ ಗಡಿ ಪ್ರದೇಶದ ಚೆಕ್‌ಪೋಸ್ಟ್‌ಗಳನ್ನು ಇನಷ್ಟು ಬಿಗಿಗೊಳಿಸಲಾಗಿದೆ. ತುರ್ತು ಸೇವೆಗಳನ್ನು ಹೊರತುಪಡಿಸಿ ಬೇರಾವುದೇ ವಾಹನಗಳ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ಹಾಕಲಾಗಿದೆ. ಪೊಲೀಸ್‌ ಇಲಾಖೆ ಅನುಮತಿ ಪಡೆದು ಜಿಲ್ಲೆಯಿಂದ ಹೊರಹೋಗುವ ವ್ಯಕ್ತಿಗಳಿಗೆ ಮತ್ತೆ ಜಿಲ್ಲೆಯ ಪ್ರವೇಶಕ್ಕೆ ಕಟ್ಟುನಿಟ್ಟಾಗಿ ತಡೆಯೊಡ್ಡಲಾಗುತ್ತಿದೆ. ಒಂದು ವೇಳೆ ಇಲಾಖೆಯ ಅನುಮತಿಯೊಂದಿಗೆ ಜಿಲ್ಲೆಗೆ ಪ್ರವೇಶ ಪಡೆದರೂ 14 ದಿನ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ.

ಕೆಲವು ಸರ್ಕಾರಿ ಕಚೇರಿಗಳನ್ನು ತೆರೆಯಲಾಗಿದ್ದು, ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು. ತುರ್ತು ಸರ್ಕಾರಿ ಕೆಲಸ-ಕಾರ್ಯಗಳು ಹೊರತುಪಡಿಸಿ ಸಾರ್ವಜನಿಕರ ಸಂಖ್ಯೆ ವಿರಳವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next