Advertisement

ಚಿಕ್ಕಮಗಳೂರು: ಅತಂತ್ರ ಸ್ಥಿತಿಯಲ್ಲಿ ಅಡಿಕೆ ಬೆಳೆಗಾರರ ಬದುಕು

04:14 PM Nov 13, 2021 | Team Udayavani |

ಚಿಕ್ಕಮಗಳೂರು: ತೀರಾ ಹದಗೆಟ್ಟ ವಾತಾವರಣದಿಂದ ಅಡಿಕೆಯನ್ನು ಒಣಗಿಸಲು ಜಾಗವಿಲ್ಲದೆ ಮಲೆನಾಡಿಗರು ಮಂಚದ ಕೆಳಗೆ ಬೆಂಕಿ ಹಾಕಿ ಮಂಚದ ಮೇಲೆ ಅಡಿಕೆ ಒಣಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಳಿಗನಾಡು ಗ್ರಾಮದಲ್ಲಿ ವೃದ್ಧ ಗಜೇಂದ್ರ ಹೆಬ್ಬಾರ್ ಪ್ರಕೃತಿ ಎದುರು ಅಸಹಾಯಕರಾಗಿ ಮನೆಯಲ್ಲಿ ಮಲಗುವ ಮಂಚದ ಮೇಲೆ ಅಡಿಕೆ ಒಣಗಿಸುತ್ತಿದ್ದಾರೆ. ಮಲೆನಾಡಲ್ಲಿ ಕಳೆದ ಒಂದೆರಡು ತಿಂಗಳಿಂದಲೂ ಒಂದೆರಡು ದಿನ ಬಿಡುವು ನೀಡುವ ವರುಣದೇವ ಮತ್ತೆ ಧಾರಾಕಾರವಾಗಿ ಸುರಿಯುತ್ತಿದ್ದಾನೆ.

ಯಾವಾಗೆಂದರೆ ಆವಾಗ ಮಳೆ, ಬಿಸಿಲು, ಮೋಡದ ವಾತಾವರಣ ನಿರ್ಮಾಣವಾಗುತ್ತಿದೆ. ಹಾಗಾಗಿ, ಮಲೆನಾಡಿಗರು ಕೊಯ್ದಿರುವ ಕಾಫಿಯನ್ನು ಒಣಗಿಸಲು ಜಾಗವಿಲ್ಲದೆ ಪರದಾಡುವಂತಾಗಿದೆ.

ಅಡಿಕೆ-ಕಾಫಿ ಮಲೆನಾಡಿಗರ ಜೀವ. ಸಣ್ಣ-ಸಣ್ಣ ಹಿಡುವಳಿ ಮೂಲಕ ಬದುಕು ಕಟ್ಟಿಕೊಂಡಿವರೇ ಹೆಚ್ಚು. ಆದರೆ, ಈಗ ಹವಾಮಾನದ ವೈಪರಿತ್ಯದಿಂದ ಮಲೆನಾಡಿಗರು ಬದುಕು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.

ಪ್ರಕೃತಿ ವಿರುದ್ಧ ಹೋರಾಡಲು ಶಕ್ತಿ ಇಲ್ಲದ ಮನುಷ್ಯರು ಸಿಕ್ಕ-ಸಿಕ್ಕ ದಾರಿಯಲ್ಲಿ ಬೆಳೆಗಳನ್ನು ಉಳಿಸಿಕೊಂಡು ವರ್ಷದ ಬದುಕು ದೂಡಲು ಮುಂದಾಗಿದ್ದಾರೆ. ಈಗಾಗಲೇ ಮಲೆನಾಡಿನಾದ್ಯಂತ ವರುಣ ಅಬ್ಬರಕ್ಕೆ ಮಲೆನಾಡಿಗರ ಬದುಕು ಮೂರಾಬಟ್ಟೆಯಾಗಿದೆ.

Advertisement

ಇದನ್ನೂ ಓದಿ: ಬಿಟ್ ಕಾಯಿನ್ ಕೇಸ್ ನಲ್ಲಿ ಬೊಮ್ಮಾಯಿ, ಕಟೀಲ್ ಪಾತ್ರದ ಬಗ್ಗೆ ಕಾಂಗ್ರೆಸ್ ದಾಖಲೆ ಸಂಗ್ರಹ

ಮಲೆನಾಡಲ್ಲಿ ಜನವರಿಯಿಂದಲೂ ನಿರಂತರ ಮಳೆಯಾಗಿದೆ. ಬೆಳೆ ಗಿಡದಲ್ಲಿ ಇರುವುದಕ್ಕಿಂತ ಮಣ್ಣು ಪಾಲಾಗಿದ್ದೆ ಹೆಚ್ಚು. ಮಳೆ ವಿರುದ್ಧ ತೊಡೆತಟ್ಟಿ ನಿಂತು ಬದುಕುಳಿದಿದ್ದ ಬೆಳೆಗೆ ಈಗ ಸೂರ್ಯದೇವ ಮಗ್ಗಲ ಮುಳ್ಳಾಗಿದ್ದಾನೆ. ವಾಯಭಾರ ಕುಸಿತದಿಂದ ಮಲೆನಾಡಿನ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಜನ ಬಿಸಿಲು ನೋಡದೆ ವಾರವೇ ಕಳೆದಿದೆ.

ಇಡೀ ದಿನ ಮೋಡ….ಮೋಡ….. ತಣ್ಣನೆಯ ಗಾಳಿ. ಇದರಿಂದ ಸಣ್ಣ-ಸಣ್ಣ ಕಾಫಿ ಹಾಗೂ ಅಡಿಕೆ ಬೆಳೆಗಾರರು ಬೆಳೆ ಉಳಿಸಿಕೊಳ್ಳಲು ಹೈರಾಣಾಗಿದ್ದಾರೆ. ಬೇರೆ ದಾರಿ ಇಲ್ಲದೆ ಶತಮಾನಗಳಲ್ಲೇ ಮಾಡದ ಹೋರಾಟದ ಮೂಲಕ ಬೆಳೆಯನ್ನು ಉಳಿಸಿಕೊಳ್ಳಲು ಪರದಾಡುವಂತಾಗಿದೆ.

ಕಳೆದ ಒಂದೆರಡು ತಿಂಗಳ ನಿರಂತರ ಮಳೆಯಿಂದ ಮಲೆನಾಡಿಗರು ಸುರಿಯೋ ಮಳೆಯಲ್ಲಿ ಕಾಫಿಯನ್ನು ಕಟಾವು ಮಾಡಿದ್ದರು. ನೆಲದಲ್ಲಿ ಬಿದ್ದ ಕಾಫಿ-ಅಡಿಕೆಯನ್ನ ಆಯ್ದು ಮನೆಗೆ ತಂದಿದ್ದರು. ಇಂದು ಆ ಕಾಫಿ-ಅಡಿಕೆಯನ್ನ ಒಣಗಿಸಲು ಜಾಗವಿಲ್ಲದೆ ಬೆಂಕಿ ಹಾಕಿ ಒಣಗಿಸುತ್ತಿದ್ದಾರೆ. ಈ ರೀತಿ ಒಣಗಿಸದಿದ್ದರೆ ಬೆಳೆ ಮೇಲೆ ಹೂ ಬೆಳೆದು ಬೆಳೆ ಸಂಪೂರ್ಣ ನಾಶವಾಗಲಿದೆ.

ಕಳೆದ ಎರಡ್ಮೂರು ವರ್ಷಗಳಿಂದ ಬಹುತೇಕ ಬೆಳೆಯನ್ನು ಕಳೆದುಕೊಂಡಿದ್ದ ಮಲೆನಾಡಿಗರು ಈ ವರ್ಷ ಮಳೆ ಪ್ರಮಾಣ ತುಸು ಕಡಿಮೆ ಇದ್ದರೂ ಬೆಳೆಯನ್ನು ಕಳೆದುಕೊಂಡು ಬದುಕಿನ ಬಗ್ಗೆ ಅತಂತ್ರರಾಗಿದ್ದಾರೆ. ಕೆಲ ಬೆಳೆಗಾರರು ಈಗಿನ ವಿಷಮ ಪರಿಸ್ಥಿತಿಯಲ್ಲಿ ಅಡಿಕೆ-ಕಾಫಿಯನ್ನು ಕಟಾವು ಮಾಡಲಾಗದೆ ಕೈಚೆಲ್ಲಿದ್ದಾರೆ.

ಕಟಾವು ಮಾಡಿದ ಬೆಳೆ ಶೀಥಕ್ಕೆ ಇಟ್ಟ ಜಾಗದಲ್ಲೇ ಕೊಳೆಯುತ್ತದೆ. ಈ ಬಾರಿ ಮಧ್ಯಮ ಹಾಗೂ ಸಣ್ಣ ಬೆಳೆಗಾರರು ಬದುಕು ಅತಂತ್ರವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾಫಿ-ಅಡಿಕೆ ಬೆಳೆಗಾರರ ನೆರವಿಗೆ ನಿಲ್ಲದಿದ್ದರೆ ಬೆಳೆಗಾರರು ಮತ್ತಷ್ಟು ಶೋಚನಿಯ ಸ್ಥಿತಿ ತಲುಪಲಿದೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next