Advertisement

ಕೆರೆ ಕಟ್ಟೆಗಳಿಗೆ ಇಂದಿನಿಂದಲೇ ಕಾವೇರಿ

06:00 AM Aug 10, 2017 | |

ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯ ಕೆರೆ, ಕಟ್ಟೆಗಳನ್ನು ತುಂಬಿಸಲು ಕೆ ಆರ್‌ಎಸ್‌, ಹೇಮಾವತಿ, ಕಬಿನಿ ಹಾಗೂ ಹಾರಂಗಿ ಜಲಾಶಯಗಳಿಂದ ಇಂದಿನಿಂದಲೇ (ಆ.10) ನೀರು ಹರಿಸಲು ತೀರ್ಮಾನಿಸಲಾಗಿದೆ.

Advertisement

ಆದರೆ, ಜಲಾಶಯಗಳಿಂದ ಹರಿಸುವ ನೀರು ಭತ್ತ ನಾಟಿ ಸೇರಿದಂತೆ ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಲ್ಲಿ ಮನವಿ ಮಾಡಿದ್ದಾರೆ.

ಕಾವೇರಿ ನದಿ ನೀರಿನ ವಿಷಯಕ್ಕೆ ಸಂಬಂಧಿಸಿಂದೆ ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು, ಉಸ್ತುವಾರಿ ಸಚಿವರು, ಜಲಸಂಪನ್ಮೂಲ ಹಾಗೂ ಕೃಷಿ ಸಚಿವರು ಹಾಗೂ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ,ರೈತರಿಗೆ ನೀರು ಕೊಡಬಾರದು ಎಂದು ಸರ್ಕಾರದ ಉದ್ದೇಶವಲ್ಲ. ಅದಕ್ಕಾಗಿಯೇ ನಾಲ್ಕೂ ಜಲಾಯಶಗಳಿಂದ ಕಾವೇರಿ ಕಣಿವೆಯ ಕೆರೆ, ಕಟ್ಟೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ. ಆದರೆ, ಕೃಷಿ ಚಟುವಟಿಕೆಗಳಿಗೆ ನೀರು ಬಳಸಬೇಡಿ, ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯಲು ಮಾತ್ರ ಬಳಕೆ ಮಾಡಿ ಎನ್ನುವುದು ನನ್ನ ಕಳಕಳಿಯ ಮನವಿ ಎಂದು ಹೇಳಿದರು.

ಸದ್ಯದ ಪರಿಸ್ಥಿತಿಯಲ್ಲಿ ಭತ್ತ ನಾಟಿಗೆ ಮುಂದಾಗಬೇಡಿ. ಹಾಗಂತ, ಬೇರೆ ಬೆಳೆ ಬೆಳೆಯಬೇಡಿ ಎಂದರ್ಥವಲ್ಲ. ಭತ್ತಕ್ಕೆ ಬದಲಾಗಿ ಮಳೆ ಆಧಾರಿತ ಕೃಷಿ ಬೆಳೆಗಳಿಗೆ ಮುಂದಾಗಿ. ಭತ್ತ ನಾಟಿ ಮಾಡಿದ ಮೇಲೆ ನೀರು ಸಿಗದೇ ರೈತರು ಸಂಕಷ್ಟಕ್ಕೆ ಸಿಲುಕಬಾರದು ಅನ್ನುವುದೇ ಸರ್ಕಾರದ ಕಾಳಜಿ. ಈ ಸಂಬಂಧ ಕೃಷಿ ಇಲಾಖೆ ಅಧಿಕಾರಿಗಳು ಕರಪತ್ರಗಳ ಮೂಲಕ ತಿಳುವಳಿಕೆ ಮೂಡಿಸಲಿದ್ದಾರೆ ಎಂದು ತಿಳಿಸಿದರು.

ನಮ್ಮ ಸರ್ಕಾರ ಯಾವತ್ತೂ ರೈತರ ಪರ ಇದೆ. ರೈತರ ನೀರು ಕೊಡಬಾರದು ಎಂದು ನಮ್ಮ ಉದ್ದೇಶವಲ್ಲ. ಮುಂದೆ ಚೆನ್ನಾಗಿ ಮಳೆ ಬಂದರೆ ಖಂಡಿತ ರೈತರಿಗೆ ನೀರು ಕೊಡುತ್ತೇವೆ. ಆದರೆ, ಈಗಿನ ಪರಿಸ್ಥಿತಿ ಅರ್ಥಮಾಡಿಕೊಂಡು ಸರ್ಕಾರೊಂದಿಗೆ ಸಹಕರಿಸಬೇಕು ಎಂದು ಹೇಳಿದರು.

Advertisement

ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಇದರಿಂದ ಜನ, ಜಾನುವಾರುಗಳಿಗೆ ತೊಂದರೆಯಾಗಿದೆ. ಅಂತರ್ಜಲ ಬತ್ತಿದ್ದು, ಸಾವಿರ ಅಡಿ ಕೊರೆದರೂ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಆದ್ದರಿಂದ ಹೀಗಾಗಿ ನೀರು ಬಿಡುಗಡೆ ಮಾಡಿ ಕೆರೆ, ಕಟ್ಟೆಗಳನ್ನು ತುಂಬಿಸುವಂತೆ ಒತ್ತಾಯಿಸಿ ಕಾವೇರಿ ಕಣಿವೆ ಭಾಗದ ರೈತರು ಹೋರಾಟ ಮಾಡುತ್ತಿದ್ದಾರೆ. ರೈತರು ನೀರು ಕೇಳುವುದು ತಪ್ಪಲ್ಲ. ಹಾಗಾಗಿಯೇ ಕುಡಿಯುವ ನೀರು ಮತ್ತು ಅಂತರ್ಜಲ ಮಟ್ಟ ಹೆಚ್ಚಿಸಲು ಕಾವೇರಿ ಕಣಿವೆ ಭಾಗದ ಕೆರೆ, ಕಟ್ಟೆಗಳನ್ನು ತುಂಬಿಸಲು ಕೃಷ್ಣರಾಜ ಸಾಗರ, ಕಬಿನಿ, ಹೇಮಾವತಿ, ಹಾರಂಗಿ ಅಚ್ಚುಕಟ್ಟು ಪ್ರದೇಶಗಳಿಂದ ಆ.10ರಿಂದಲೇ ನೀರು ಹರಿಸಲು  ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.

8 ಟಿಎಂಸಿಗೂ ಅಧಿಕ ಕಡಿಮೆ ನೀರು:
ಕಳೆದ ವರ್ಷ ಈ ಅವಧಿಯಲ್ಲಿ ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ 53.52 ಟಿಎಂಸಿ ನೀರು ಇತ್ತು. ಈ ವರ್ಷ 45 ಟಿಎಂಸಿ ಇದೆ. ಅಂದರೆ ಒಟ್ಟು 8 ಟಿಎಂಸಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಕೊರತೆ ಇದೆ. ಒಳ ಹರಿವು ಸಹ ಕಳೆದ ವರ್ಷಕ್ಕಿಂತ ಕಡಿಮೆ ಇದೆ. ಜೊತೆಗೆ ಅಚ್ಚುಕಟ್ಟು ಪ್ರದೇಶದಲ್ಲೂ ಮಳೆಯಾಗುತ್ತಿಲ್ಲ. ಹೀಗಾಗಿ ಜಲಾಶಯಗಳ ಕೆಳ ಭಾಗದ ಪ್ರದೇಶಗಳಲ್ಲೂ ನೀರಿಲ್ಲದಂತೆ ಆಗಿದೆ. ಇದರಿಂದಾಗಿ ರೈತರ ಬೇಡಿಕೆ ಈಡೇರಿಸುವುದು ಸ್ವಲ್ಪ$ಕಷ್ಟ ಆಗಿತ್ತು. 

ಜಲಾಶಯಗಳಿಂದ ನೀರು ಬಿಟ್ಟ ಕೂಡಲೇ ರೈತರು ಭತ್ತ ನಾಟಿ ಮಾಡುತ್ತಾರೆ. ನಾಟಿ ಮಾಡಿದ ಬಳಿಕ ನೀರಿಗೆ ಕೊರತೆ ಎದುರಾದರೆ ನಷ್ಟ ಅನುಭವಿಸುತ್ತಾರೆ ಎಂಬುದು ಸರ್ಕಾರದ ಲೆಕ್ಕಾಚಾರ ಆಗಿತ್ತು. ಕಳೆದ ಬಾರಿ ರೈತರಿಗೆ ಈ ಅನುಭವ ಆಗಿದೆ. ಇದಲ್ಲದೆ, ಭತ್ತ ಬೆಳೆಯುವ ಪ್ರದೇಶ 2.68 ಲಕ್ಷ ಎಕರೆಯಷ್ಟಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಆಲೋಚನೆ ಮಾಡಿತ್ತು. ಆದರೆ ಈಗ ಜನ, ಜಾನುವಾರುಗಳು ಕುಡಿಯುವ ನೀರಿಗೆ ಪರದಾಡುತ್ತಿರುವುದರಿಂದ ನಾಲ್ಕೂ ಜಲಾಯಶಗಳಿಂದ ನೀರು ಬಿಟ್ಟು ಕೆರೆ, ಕಟ್ಟೆಗಳನ್ನು ತುಂಬಿಸಲು ತೀರ್ಮಾನಿಸಲಾಗಿದೆ ಎಂದು  ತಿಳಿಸಿದರು.

ಸಭೆಯಲ್ಲಿ ವಿಧಾನಪರಿಷತ್‌ ಉಪಸಭಾಪತಿ ಮರಿತಿಬ್ಬೇಗೌಡ, ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ…, ಕೃಷಿ ಸಚಿವ ಕೃಷ್ಣ ಬೈರೇಗೌಡ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎಂ. ಕೃಷ್ಣಪ್ಪ, ಮಂಡ್ಯ ಸಂಸದ ಪುಟ್ಟರಾಜು, ಮಾಜಿ ಸಚಿವ ಅಂಬರೀಶ್‌, ಶಾಸಕರಾದ ನರೇಂದ್ರ ಸ್ವಾಮಿ, ಚೆಲುವರಾಯ ಸ್ವಾಮಿ,ಪುಟ್ಟಣ್ಣಯ್ಯ, ರಮೇಶ್‌ ಬಂಡಿಸಿದ್ದೇಗೌಡ, ನಾರಾಯಣಗೌಡ, ವಿಧಾನಪರಿಷತ್‌ ಸದಸ್ಯ ಶ್ರೀಕಂಠೇಗೌಡ ಮತ್ತಿತರರು ಉಪಸ್ಥಿತರಿದ್ದರು.

“ಮುಂದಿನ ವಾರ ಮೋಡ ಬಿತ್ತನೆ ಸಹ ಮಾಡುತ್ತೇವೆ. ಕಾವೇರಿ ನದಿಯಿಂದ ತಮಿಳುನಾಡಿಗೆ ಬಿಡುಗಡೆ ಮಾಡಬೇಕಾದ ನೀರಿನಲ್ಲಿ ಎಷ್ಟು ಕಡಿತ ಆಗಬೇಕೋ ಅಷ್ಟು ಆಗಿದೆ’.
– ಮುಖ್ಯಮಂತ್ರಿ ಸಿದ್ದರಾಮಯ್ಯ.

“ಕಾವೇರಿ ಕಣಿವೆಯ ಕೆರೆಗಳಿಗೆ ನೀರು ಬಿಡುವ ತೀರ್ಮಾನದ ಹಿನ್ನೆಲೆಯಲ್ಲಿ ಬುಧವಾರ ಮಧ್ಯರಾತ್ರಿ 12 ಗಂಟೆಯಿಂದಲೇ ನೀರು ಹರಿಸಲಾಗುತ್ತದೆ. ಎಷ್ಟು ಕೆರೆಗಳನ್ನು ತುಂಬಿಸಲು ಸಾಧ್ಯವೋ ಅಷ್ಟು ನೀರು ಬಿಡಲಾಗುತ್ತದೆ’.
– ಎಂ. ಕೃಷ್ಣಪ್ಪ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next