Advertisement

ರೈತ ಸ್ಪಂದನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ

10:27 AM Nov 16, 2018 | |

ಬೀದರ: ರಾಜ್ಯದಲ್ಲಿ ಮೊದಲ ಬಾರಿಗೆ ರೈತ ಸ್ಪಂದನ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮ ವಿನೂತನ ಮಾದರಿಯಲ್ಲಿ ನಗರದಲ್ಲಿ ಗುರುವಾರ ಸಂಜೆ ನಡೆಯಿತು.

Advertisement

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲೆಯ ಪ್ರಗತಿ ಪರ ರೈತರ ಜತೆಗೆ ಸಂವಾದ ನಡೆಸಿದರು. ಆದರೆ, ಆಯ್ದ ರೈತರಿಗೆ ಮಾತ್ರ ಪ್ರಶ್ನೆ ಕೇಳಲು ಅವಕಾಶ ಇರುವುದರಿಂದ ಇನ್ನುಳಿ ನೂರಾರು ರೈತರು ಬೇಸರ ವ್ಯಕ್ತಪಡಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ರೈತ ವಿಠಲ್‌ ಮಾತನಾಡಿ, ಸರ್ಕಾರ ಬೀಜ ವಿತರಣೆಯಲ್ಲಿ ಜಾತಿವಾರು ಬೆಲೆ ನಿಗದಿ ಮಾಡುವ ಬದಲಿಗೆ ಎಲ್ಲಾ ರೈತರಿಗೆ ಒಂದೇ ಬೆಲೆಯಲ್ಲಿ ಬೀಜ ವಿತರಣೆ ಮಾಡಬೇಕು. ರೈತರು ಖರೀದಿಸುವ ರಾಶಿ ಯಂತ್ರಕ್ಕೆ ಶೇ.75ರಷ್ಟಯ ಸಹಾಯ ಧನ ನೀಡಬೇಕು. ರೈತ ಕುಟುಂಬದ ಮಕ್ಕಳಿಗೆ ಸರ್ಕಾರಿ ನೌಕರಿ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಬೇಕು.

ಮಧ್ಯಪ್ರದೇಶ ಸರ್ಕಾರ ಜಾರಿಗೊಳಿಸಿರುವ ಭಾವಂತರ್‌ ಭೋಗ್ತಾನ್‌ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು. ತೆಲಂಗಾಣ ಮಾದರಿ ಕೃಷಿ ನೀತಿಗಳನ್ನು ಜಾರಿಗೊಳಿಸಬೇಕು. ಪಾಲಿ ಹೌಸ್‌ ಪಡೆಯುವ ರೈತರಿಗೆ ಅದರ ಮಹತ್ವ ಹಾಗೂ ಬೆಳೆಗಳ ಕುರಿತು ಸೂಕ್ತ ತರಬೇತಿ ನೀಡಬೇಕು ಎಂದು ಒತ್ತಾಯಿಸಿದರು.

ರೈತರ ಪ್ರಶ್ನೆಗೆ ಸ್ಪಂದಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ರೈತನಿಗೆ ಜಾತಿ ಇಲ್ಲ. ರೈತರೆಲ್ಲರೂ ಬಡವರೆ. ಎಲ್ಲರೂ ಕಷ್ಟದಲ್ಲಿ ಇದ್ದಾರೆ. ರೈತರಲ್ಲಿ ಯಾವುದೇ ಗುಂಪುಗಾರಿಕೆಗೆ ಅವಕಾಶ ನೀಡದೇ ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಲಹೆ ಉತ್ತಮವಾಗಿದೆ. ಇದನ್ನು ಅನುಷ್ಠಾನಗೊಳಿಸುವುದರಲ್ಲಿ ತಪ್ಪೇನೂ ಇಲ್ಲ. ಶಿಕ್ಷಣದಲ್ಲಿ ಕೃಷಿ ಕುರಿತು ತರಬೇತಿ  ಪರಿಶೀಲಿಸಲಾಗುವುದು. ಇಸ್ರೇಲ್‌ ಮಾದರಿ ಕೃಷಿ ನೀತಿಗಳನ್ನು ಅಳವಡಿಸುವ ಮೂಲಕ ರೈತರಿಗೆ ತಿಳಿವಳಿಕೆ ಮೂಡಿಸಲಾಗುವುದು. ಈಗಾಗಲೇ ನಮ್ಮ ಭಾವನೆಗಳನ್ನು ಅಧಿಕಾರಿಗಳು ತಿಳಿದುಕೊಂಡು ಸ್ಪಂದಿಸುತ್ತಿದ್ದಾರೆ. ರೈತರಿಗೆ ಉತ್ತಮ ಬೆಲೆ ದೊರಕಿಸಿಕೊಡುವ ಕೆಲಸವನ್ನು ಕೂಡ ಸರ್ಕಾರ ಮಾಡಿದೆ ಎಂದರು.

Advertisement

ಮಹ್ಮದ್‌ ಜಾಫರ್‌ ಮಾತನಾಡಿ, ಶ್ರೀಮಂತರ ಹೊಲದಲ್ಲಿ ಗೋದಾಮುಗಳನ್ನು ನಿರ್ಮಿಸಿಕೊಳ್ಳುತ್ತಾರೆ. ಆದರೆ, ಬಡ ರೈತರ ಹೊಲದಲ್ಲಿ ಕೃಷಿ ಕೋಣೆ ನಿರ್ಮಿಸಬೇಕು. ಎಲ್ಲ ವಸ್ತುಗಳಿಗೆ ಸರ್ಕಾರ ಸಹಾಯಧನ ನೀಡುತ್ತಿದೆ. ಆದರೂ ಕೂಡ ರೈತರು ವಿಫಲರಾಗುತ್ತಿದ್ದಾರೆ. 

ಈ ಕುರಿತು ಸರ್ಕಾರ ಚಿಂತನೆ ಮಾಡಬೇಕಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಪ್ರಶ್ನಿಸಿದರು. ಈ ಕುರಿತು ಸಿಎಂ ಮಾತನಾಡಿ, ಶಿಕ್ಷಣ ಪಡೆದ ಯುವಕರು ಇಂದು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಅವರ ಬದುಕು ಇಂದು ಹಸನಾಗುತ್ತಿದೆ. ಪ್ರತಿಯೊಂದು ರೈತ ಕುಟುಂಬ ಸಾಲ ಇಲ್ಲದೇ ಕೃಷಿಯಲ್ಲಿ ತೊಡಗಬೇಕು ಎಂಬ ಆಸೆ ಹೊಂದಿದ್ದೇನೆ. ಈ ನಿಟ್ಟಿನಲ್ಲಿ ಸರ್ಕಾರಿ ಯೋಜನೆಗಳನ್ನು ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಸಂಚರಿಸಿ, ಗುಂಪು ಬೇಸಾಯ ಮಾಡಿಸುವ ಯೋಜನೆ ಇದೆ. ರಾಜ್ಯದಲ್ಲಿ 75 ಲಕ್ಷ ರೈತರಿದ್ದು, 10 ಲಕ್ಷ ಗುಂಪುಗಳನ್ನು ಮಾಡುವ ಗುರಿ ಇದೆ. ಆ ಎಲ್ಲಾ ಗುಂಪುಗಳ ಸದಸ್ಯರಿಗೆ ಸರ್ಕಾರ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಿದೆ ಎಂದರು.

ಆಯಾ ಗ್ರಾಮಗಳಲ್ಲಿ ಅಲ್ಲಿನ ರೈತರು ಸಭೆ ನಡೆಸಬೇಕು. ಸರ್ಕಾರದ ಮಾರ್ಗಸೂಚಿಯಂತೆ ರೈತರು ಕೆಲಸ ಮಾಡಬೇಕು. ಬೆಳೆ ಸಾಲಕ್ಕಾಗಿ ಬ್ಯಾಂಕಿಗೆ ಹೋಗುವುದು ಬೇಡ. ಸರ್ಕಾರವೇ ಹಣ ನೀಡುತ್ತದೆ. ಸ್ವ ಸಹಾಯ ಸಂಘಗಳಂತೆ ರೈತರ ಗುಂಪುಗಳಿಗೆ ಸರ್ಕಾರವೇ ಹಣ ಒದಗಿಸುತ್ತದೆ. ಆದರೆ, ರೈತರು ಸಂಘಟಿತರಾಗಬೇಕು.

ಹಳೆಯ ಪದ್ಧತಿಯಾದ ಗುಂಪು ಕೃಷಿ ಮುಂದಿನ ದಿನಗಳಲ್ಲಿ ಜಾರಿಯಾಗಬೇಕಾಗಿದೆ. ಇಂದು ರೈತರು 45 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಇದೇ ಹಣ ರೈತ ಸೌಕರ್ಯಗಳಿಗೆ ಖರ್ಚು ಮಾಡಿದ್ದರೆ ಸ್ವಾವಲಂಬಿ ರೈತರಾಗುತ್ತಿದ್ದರು ಎಂದು ಅಭಿಪ್ರಾಯಪಟ್ಟರು. ರೈತ ಸ್ಪಂದನ ಕಾರ್ಯಕ್ರಮದ ಉದ್ದೇಶವೇ ರೈತರ ಮನೆ ಬಾಗಿಲಿಗೆ ಬಂದು ರೈತರಿಗೆ ಸೂಕ್ತ ಮಾಹಿತಿ ನೀಡಿ ಪ್ರೋತ್ಸಾಹ ನೀಡುವುದಾಗಿದೆ. ಹನಿ ನೀರಾವರಿ ಮಾಡುವ ರೈತರು ಕೂಡ ಹೆಚ್ಚಿನ ಮಾಹಿತಿ ಪಡೆಯಬೇಕಾಗಿದೆ. ಯಾವ ಬೆಳೆಗೆ ಎಷ್ಟು ಪ್ರಮಾಣದ ನೀರು ಹರಿಸಬೇಕು ಎಂಬ ಲೆಕ್ಕಚಾರ ಹಾಕಬೇಕು ಎಂದು ಸಲಹೆ ನೀಡಿದರು. 

ರೈತರ ಹೆಚ್ಚು ಪ್ರಮಾಣದ ಸಾಲ ಮನ್ನಾ ಮಾಡಬೇಕು ಎಂಬ ಕೂಗುಗಳು ಕೇಳಿಬಂದಿವೆ. ಆದರೆ, ಹಣ ಹೊಂದಿಸುವುದು ಕಷ್ಟದ ಕೆಲಸ. ರೈತರ ನೆರವಿಗೆ ಬರಬೇಕು ಎಂಬ ನಿಟ್ಟಿನಲ್ಲಿ ರೈತ ಸ್ಪಂದನ ಕಾರ್ಯಕ್ರಮ ಅನುಷ್ಠಾನಗೊಳಿಸಿ, ರೈತರ ಕೃಷಿ ಪದ್ಧತಿ ಬದಲಿಸಿ ಅವರ ಬಾಳು ಕೂಡ ಸಹನಾಗಿಸುವ ಉದ್ದೇಶ ಇದೆ ಎಂದರು. 

ರೈತ ಗುರುಲಿಂಗಪ್ಪ ಮೇಲದೋಡ್ಡಿ ಮಾತನಾಡಿ, ಸಿಕ್ಕಿಂ ರಾಜ್ಯದಂತೆ ಸಾವಯವ ಕೃಷಿ ನೀತಿಗಳನ್ನು ರಾಜ್ಯ ಸರ್ಕಾರ
ಜಾರಿ ಮಾಡಬೇಕು. ಬೇಕಾದರೆ ಬೀದರ ಜಿಲ್ಲೆಯನ್ನೇ ಮಾದರಿ ಜಿಲ್ಲೆಯಾಗಿ ಮಾಡಿ ಎಂದು ತಿಳಿಸಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು 2006ರಲ್ಲಿ ಹೊಸ ಕೃಷಿ ನೀತಿ ಜಾರಿಗೊಳಿಸಿ ಅಂದು ಸಾವಯವ ಕೃಷಿ ಹೆಚ್ಚು ಮಹತ್ವ ನೀಡಲಾಗಿತ್ತು. ಸಿಕ್ಕಿಂ ರಾಜ್ಯದಂತೆ ಸಾವಯವ ಕೃಷಿ ನೀತಿ ಜಾರಿ ಮಾಡುವ ನಿಟ್ಟಿನಲ್ಲಿ ಖುದ್ದು ಎರಡು ದಿನ ಪ್ರವಾಸ ಮಾಡಲಿದ್ದೇನೆ ಎಂದರು. 

ರೈತ ಅನಿಲ ಕುಮಾರ ಮಾತನಾಡಿ, ಬಸವಕಲ್ಯಾಣ ತಾಲೂಕಿನಲ್ಲಿ ಹೆಚ್ಚು ಸೋಯಾ ಬೆಳೆ ಬೆಳೆಯುತ್ತಿದ್ದು, ಬಸವಕಲ್ಯಾಣದಲ್ಲಿ ಸೋಯಾ ಬೆಳೆ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಈ ಕುರಿತು ಮುಖ್ಯಮಂತ್ರಿಗಳು ಸ್ಪಂದಿಸಿ ಮುಂದಿನ ದಿನಗಳಲ್ಲಿ ಈ ಕುರಿತು ಪರಿಶೀಲಿಸಿ ಬಸವಕಲ್ಯಾಣದಲ್ಲಿ ಸೋಯಾ ಬೆಳೆ ಸಂಶೋಧನಾ ಕೇಂದ್ರ ಸ್ಥಾಪಿಸುವುದಾಗಿ ಭರವಸೆ ನೀಡಿದರು. ರೈತ ಸತೀಶ ಮಾತನಾಡಿ, 20 ವರ್ಷಗಳ ಹಿಂದೆ ಚೆಂಡು ಹೂವು ಕೆಜಿಗೆ 40ರಿಂದ 50 ಬೆಲೆ ಇತ್ತು. ಇಂದೂ ಅದೇ ಬೆಲೆ ಇದೆ. ಆದರೆ, ಭೂಮಿ, ಚಿನ್ನ ಸೇರಿದಂತೆ ಇತರೆ ಬೆಲೆಗಳಲ್ಲಿ ತೀವ್ರಗತಿಯಲ್ಲಿ ಏರಿಕೆ ಆಗಿದೆ. ಹೀಗಾದರೆ ರೈತರ ಬದುಕು ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು ಕೇಂದ್ರ ಸಕಾರ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ, ಅನೇಕ ನಿಯಮಗಳನ್ನು ಹಾಕುತ್ತದೆ. ಅವರ ನಿಯಮಗಳ ಅನುಸಾರ ಎಷ್ಟು ಜನ ರೈತರು ಬೆಳೆ ಬೆಳೆಯಲು ಸಾಧ್ಯ ಎಂದು ಪ್ರಶ್ನಿಸಿದರು. ಗುಣಮಟ್ಟದ ಪದಾರ್ಥಗಳನ್ನು ಬೆಳೆದರೆ ವಿದೇಶಕ್ಕೂ ಕಳುಹಿಸಬಹುದು. ಉತ್ತಮ ಬೆಲೆ ಪಡೆಯಬಹುದು. ಕೃಷಿ ಕ್ಷೇತ್ರದಲ್ಲಿ ಬದಲಾವಣೆ ಮಾಡಬೇಕಾಗಿದೆ ಎಂದರು.

ಪ್ರಗತಿ ಪರ ರೈತ ಕಾಶಿಲಿಂಗ ಅಘ್ರಹಾರ್‌ ಮಾತನಾಡಿ, ಜಿಲ್ಲೆಯಲ್ಲಿ ಒಣ ಬೇಸಾಯ ಮಾಡುವರ ಸಂಖ್ಯೆ ಹೆಚ್ಚಿದ್ದು, ಕೃಷಿ ಕ್ಷೇತ್ರದ ಕುರಿತು ವಿದ್ಯಾಭ್ಯಾಸ ಮಾಡಲು ಬೀದರ ತಾಲೂಕಿನಲ್ಲಿ ಕೃಷಿ ಕಾಲೇಜು ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಕೃಷಿ ಕಾಲೇಜು ಸ್ಥಾಪನೆ ಕುರಿತು ಸರ್ಕಾರದ ಗಮನಕ್ಕೆ ಬಂದಿದ್ದು, ಮುಂದಿನ ವರ್ಷದಿಂದ ಕೃಷಿ ಕಾಲೇಜು ಪ್ರಾರಂಭಿಸುವ ಕುರಿತು ಭರವಸೆ ನೀಡಿದರು.

ಸಚಿವರಾದ ಬಂಡೆಪ್ಪ ಖಾಶೆಂಪೂರ, ರಾಜಶೇಖರ ಪಾಟೀಲ, ಕೃಷಿ ಸಚಿವ ಶಿವಶಂಕರೆಡ್ಡಿ, ಶಾಸಕರಾದ ರಹೀಮ್‌ ಖಾನ್‌, ಚಲನಚಿತ್ರ ನಿರ್ದೇಶ ನಾಗತಿಹಳ್ಳಿ ಚಂದ್ರಶೇಖರ ಹಾಗೂ ಜಿಲ್ಲೆಯ ಅನೇಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next