Advertisement

ನಿಯಂತ್ರಣ ವಿಕೇಂದ್ರೀಕರಣ: ಲಾಕ್‌ಡೌನ್‌ ಪರಿಹಾರ ಅಲ್ಲ ; ವಾರ್ಡ್‌ವಾರು ಕ್ರಮಕ್ಕೆ ಸಿಎಂ ಸೂಚನೆ

01:20 AM Jul 18, 2020 | Hari Prasad |

ಬೆಂಗಳೂರು: ಕೋವಿಡ್ 19 ವಿರುದ್ಧ ಹೋರಾಟ, ನಿಯಂತ್ರಣ ಕ್ರಮಗಳನ್ನು ವಿಕೇಂದ್ರೀಕರಿಸಲು ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದು, ಕೋವಿಡ್ 19 ನಿಗ್ರಹಿಸಲು ಲಾಕ್‌ಡೌನ್‌ ಪರಿಹಾರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಲಾಕ್‌ ಡೌನ್‌ ಮಾತೇ ಬೇಡ, ಕೋವಿಡ್ 19 ನಿಯಂತ್ರಣಕ್ಕೆ ಅದು ಪರಿಹಾರವಲ್ಲ. ತಪಾಸಣೆ, ಪರೀಕ್ಷೆ, ಚಿಕಿತ್ಸೆ, ನಿಯಂತ್ರಣಕ್ಕೆ ಹೆಚ್ಚು ಒತ್ತು ನೀಡಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಕೋವಿಡ್ 19 ನಿಯಂತ್ರಣ ಕ್ರಮಗಳನ್ನು ವಿಧಾನಸಭಾ ಕ್ಷೇತ್ರ, ವಾರ್ಡ್‌ ಮಟ್ಟದಲ್ಲೇ ಕಾರ್ಯಯೋಜನೆ ರೂಪಿಸುವ ಮೂಲಕ ವಿಕೇಂದ್ರೀಕರಿಸಬೇಕು ಎಂದು ಬೆಂಗಳೂರು ವ್ಯಾಪ್ತಿಯ ಸಚಿವರು, ಸಂಸದರು ಮತ್ತು ಮುಖ್ಯ ಕಾರ್ಯದರ್ಶಿ ಜತೆ ನಡೆಸಿದ ಸಭೆಯಲ್ಲಿ ಸಿಎಂ ಸ್ಪಷ್ಟ ಸೂಚನೆ ನೀಡಿದ್ದಾರೆ.

ಸ್ಥಳೀಯವಾಗಿ ಚಿಕಿತ್ಸೆ
ಸೋಂಕುಪೀಡಿತರಿಗೆ ಸ್ಥಳೀಯವಾಗಿಯೇ ಚಿಕಿತ್ಸೆ ದೊರೆಯುವಂತಾಗಬೇಕು. ಇದಕ್ಕಾಗಿ ಖಾಸಗಿ ಆಸ್ಪತ್ರೆಗಳ ಜತೆ ಸಮನ್ವಯ ಸಾಧಿಸಿ; ಕಲ್ಯಾಣ ಮಂಟಪ, ಸರ್ವೀಸ್‌ ಅಪಾರ್ಟ್ ಮೆಂಟ್‌ ಬಾಡಿಗೆಗೆ ಪಡೆಯಿರಿ ಎಂದು ನಿರ್ದೇಶನ ನೀಡಿದರು.

ಆಸ್ಪತ್ರೆಗೆ ದಾಖಲಾಗಲು ಎದುರಾಗುತ್ತಿರುವ ತೊಡಕು ನಿವಾರಿಸಲು ಮತ್ತು ಖಾಸಗಿ ಆಸ್ಪತ್ರೆಗಳು ಬೆಡ್‌ ನೀಡದೇ ಇದ್ದರೆ ಕಠಿನ ಕ್ರಮ ಕೈಗೊಳ್ಳಲು ಸಿಎಂ ತಾಕೀತು ಮಾಡಿದ್ದಾರೆ. ಪ್ರತೀ ವಾರ್ಡ್‌ಗಳಲ್ಲಿ ಕಲ್ಯಾಣ ಮಂಟಪ, ವಸತಿಗೃಹ ಗುರುತಿಸಲಾಗಿದ್ದು, ಪ್ರತ್ಯೇಕವಾಗಿರಲು ವ್ಯವಸ್ಥೆ ಇಲ್ಲದವರ ಕ್ವಾರಂಟೈನ್‌ಗೆ ಇವುಗಳನ್ನು ಬಳಸಿ ಎಂದು ತಿಳಿಸಿದರು.

ಗೌರವದ ಅಂತ್ಯಕ್ರಿಯೆ
ಕೋವಿಡ್ 19 ಸೊಂಕಿನಿಂದ ಮೃತಪಟ್ಟವರ ರ್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ನಡೆಸಿ ಕೂಡಲೇ ಪಾರ್ಥಿವ ಶರೀರವನ್ನು ಹಸ್ತಾಂತರಿಸಲು ಅಥವಾ ಗೌರವಯುತ ಅಂತ್ಯಕ್ರಿಯೆ ನಡೆಸಲು ಕ್ರಮಕೈಗೊಳ್ಳಿ ಎಂದು ಸಿಎಂ ಹೇಳಿದ್ದಾರೆ.

Advertisement

ಕಠಿನ ಕ್ರಮ: ಸಿಎಸ್‌
ಕೋವಿಡ್ 19 ಸೋಂಕು ಪೀಡಿತರು ಮತ್ತು ಪ್ರಥಮ ಸಂಪರ್ಕ ಹೊಂದಿರುವವರ ಹೋಂ ಕ್ವಾರಂಟೈನ್‌ ಕಡ್ಡಾಯ. ಇದನ್ನು ಉಲ್ಲಂಘಿಸಿದರೆ ಕಠಿನ ಕ್ರಮ ಅನಿವಾರ್ಯ ಎಂದು ಮುಖ್ಯಕಾರ್ಯದರ್ಶಿ (ಸಿಎಸ್‌) ಟಿ.ಎಂ. ವಿಜಯ ಭಾಸ್ಕರ್‌ ಎಚ್ಚರಿಕೆ ನೀಡಿದ್ದಾರೆ.

ಪರೀಕ್ಷೆ ಹೆಚ್ಚಿಸಿ
ಪರೀಕ್ಷೆಗಳ ಸಂಖ್ಯೆ ಹೆಚ್ಚಾಗಬೇಕು. ಫ‌ಲಿತಾಂಶ ದೊರೆತ 2 ತಾಸುಗಳೊಳ‌ಗೆ ಹಾಸಿಗೆ ಹಂಚಿಕೆ ಮಾಡಿ ಮನೆ ಬಾಗಿಲಿಗೆ ಹೋಗಿ ಆಸ್ಪತ್ರೆಗೆ ಕರೆದೊಯ್ಯಬೇಕು. ಈ ವ್ಯವಸ್ಥೆ ವಿಕೇಂದ್ರೀಕರಿಸಿ ವಲಯವಾರು ಮೇಲ್ವಿಚಾರಣೆ ನಡೆಸಿ ಎಂದು ಸೂಚಿಸಿದರು.

ರೋಗ ಲಕ್ಷಣ ಇಲ್ಲದವರನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ದಾಖಲಿಸಿ ಅಥವಾ ಮನೆಯಲ್ಲೇ ಆರೈಕೆ ಒದಗಿಸಿ. 65 ವರ್ಷ ಮೇಲ್ಪಟ್ಟ ರೋಗ ಲಕ್ಷಣ ಇರುವವರಿಗೆ ಆದ್ಯತೆ ಮೇರೆಗೆ ಹಾಸಿಗೆ ಹಂಚಿಕೆ ಮಾಡಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next