ಹೊಸದಿಲ್ಲಿ : ಗಾಂಧಿ ಕುಟುಂಬದ ಹೊರಗಿನ ವಕ್ತಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ ತೋರಿಸಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ಮೋದಿ ಹಾಕಿರುವ ಸವಾಲಿಗೆ ಉತ್ತರಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯದ ಬಳಿಕದಲ್ಲಿ ಗಾಂಧಿ ಕುಟುಂಬದ ಹೊರಗಿನ ಅನೇಕ ಮಹನೀಯರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇತಿಹಾಸವೇ ಇದೆ ಎಂದು ಹೇಳಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್, ಲಾಲ್ ಬಹದ್ದೂರ್ ಶಾಸ್ತ್ರೀ, ಕೆ ಕಾಮರಾಜ್, ಮನಮೋಹನ್‌ಸಿಂಗ್ ಮೊದಲಾದ ಮಹನೀಯರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ದುಡಿದಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಸಹಸ್ರಾರು ನಾಯಕರು ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಚಿದಂಬರಂ ಹೇಳಿದರು.
ಕಾಂಗ್ರೆಸ್ ಅಧ್ಯಕ್ಷರಾಗಿ ದುಡಿದಿರುವವರಲ್ಲಿ ಆಚಾರ್ಯ ಕೃಪಲಾನಿ, ಪಟ್ಟಾಭಿ ಸೀತಾರಾಮಯ್ಯ, ಪುರುಷೋತ್ತಮ ಟಂಡನ್, ಯು ಎನ್ ಧೇಬರ್, ಸಂಜೀವ ರೆಡ್ಡಿ, ಸಂಜೀವಯ್ಯ, ಕಾಮರಾಜ್, ನಿಜಲಿಂಗಪ್ಪ, ಸಿ ಸುಬ್ರಮಣಿಯನ್, ಜಗಜೀವನ್ ರಾಮ್, ಶಂಕರ್ ದಯಾಳ್ ಶರ್ಮಾ, ಡಿ ಕೆ ಬರುವಾ, ಬ್ರಹ್ಮಾನಂದ ರೆಡ್ಡಿ, ಪಿ ವಿ ನರಸಿಂಹ ರಾವ್, ಸೀತಾರಾಮ್ ಕೇಸರಿ ಮೊದಲಾದವರ ಹೆಸರು ಸ್ಮರಣೀಯವಾಗಿದೆ ಎಂದು ಚಿದಂಬರಂ ಹೇಳಿದರು.
ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಪಟ್ಟಿಯನ್ನು ಇತಿಹಾಸದಿಂದ ತಿಳಿಯಬಹುದಾಗಿದೆ. ಆದರೆ ಅದಕ್ಕಿಂತ ಮುಖ್ಯವಾಗಿ ಮೋದಿ ಅವರು ರಫೇಲ್ ಫೈಟರ್ ಜೆಟ್ ಡೀಲ್, ನಿರುದ್ಯೋಗ ಮತ್ತು ರೈತರ ಆತ್ಮಹತ್ಯೆಯೇ ಮೊದಲಾದ ಗಂಭೀರ ವಿಷಯಗಳ ಮೇಲೆ ಮಾತನಾಡಬೇಕಿದೆ ಎಂದು ಚಿದಂಬರಂ ಟಾಂಗ್ ಕೊಟ್ಟರು.