ಎಚ್.ಡಿ.ಕೋಟೆ: ತಾಲೂಕಿನ ಪ್ರಸಿದ್ಧ ಚಿಕ್ಕದೇವಮ್ಮ ಬೆಟ್ಟದಲ್ಲಿ ತಡೆಗೋಡೆ ಸೇರಿದಂತೆ ದೇವಾಲಯದ ಆವರಣದ ಪ್ಲಾಟ್ ಫಾರಂ ಕುಸಿದಿದೆ. ಅದರೂ ಅದೃಷ್ಟವಶಾತ್ ಯಾರಿಗೂ ಯಾವುದೇ ಅನಾಹುತವಾಗಿಲ್ಲ.
ವಿಷಯ ತಿಳಿಯುತ್ತಿದ್ದಂತೆಯೇ ತಹಶೀಲ್ದಾರ್ ಎಂ.ನಂಜುಂಡಯ್ಯ ಮತ್ತು ಸಿಬ್ಬಂದಿ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲವು ತಿಂಗಳುಗಳ ಹಿಂದಷ್ಟೆ ಶಾಸಕ ಎಸ್.ಚಿಕ್ಕಮಾದು ಸೇರಿದಂತೆ ಇನ್ನಿತರ ಗಣ್ಯರು ದೇವಾಲಯದ ಜೀಣೋದ್ಧಾರ ನೆರವೇರಿಸಿದರು.
ಬೆಟ್ಟದ ಮೇಲಿರುವ ಚಿಕ್ಕದೇವಮ್ಮ ದೇವಾಲಯ ಎತ್ತರದ ಪ್ರದೇಶದಲ್ಲಿದ್ದು ದೇವಾಲಯದ ಆಸುಪಾಸಿನಲ್ಲಿ ತೀರ ಕಡಿದಾದ ಇಳಿಜಾರು ಪ್ರದೇಶ ಇದೆ. ದೇವಾಲಯಕ್ಕೆ ಆಗಮಿಸುವ ಭಕ್ತರಿಗಾಗಿ ಹಾಗೂ ದೇವಾಲಯದ ಸೌಂದರ್ಯ ಕಾಪಾಡುವ ಸಲುವಾಗಿ ದೇವಾಲಯದ ಹೊರವಲಯದ ಆವರಣದಲ್ಲಿ ಗ್ರಾನೈಟ್‌ನಿಂದ ಪ್ಲಾಟ್ ಫಾರಂ ನಿರ್ಮಾಣ ಮಾಡಲಾಗಿದೆ.
ದೇವರ ದರ್ಶನ ಪಡೆದ ಭಕ್ತರು ಬಳಿಕ ದೇವಾಲಯದ ಹೊರಬಂದು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ಇಳಿಜಾರು ಪ್ರದೇಶದಲ್ಲಿ ನಿಂತು ಬೆಟ್ಟದ ಇಳಿಜಾರು ಹಾಗೂ ಹಸಿರಿನ ಸೌಂದರ್ಯ ಕಣ್ಮುಂಬಿಕೊಂಡು ಫೋಟೋ ಕ್ಲಿಕ್ಕಿಸಿಕೊಳ್ಳುವುದು ಮಾಮೂಲು. ಆದರೆ ಇಳಿಜಾರು ಪ್ರದೇಶದಲ್ಲಿ ಕೊಂಚ ಯಾಮಾರಿದರೂ ಅಪಘಾತವಾಗುವುದು ಕಟ್ಟಿಟ್ಟ ಬುತ್ತಿ.
ಹಾಗಾಗಿ ಸರ್ಕಾರ ಹಾಗೂ ದಾನಿಗಳ ಸಹಕಾರ ದೊಂದಿಗೆ ಇಳಿಜಾರು ಪ್ರದೇಶದಲ್ಲಿ ಕಂಬಿಗಳಿಂದ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಅದೇ ತಡೆಗೋಡೆ ಕಳೆದ ರಾತ್ರಿ ಕುಸಿದು ಬಿದ್ದಿರುವುದರಿಂದ ಗ್ರಾನೈಟ್‌ಗಳಿಗೆ ಆಧಾರವೇ ಇಲ್ಲದೇ ಇದ್ದರೂ ಗ್ರಾನೈಟ್‌ಗಳು ಮಾತ್ರ ಒಂದು ಸಣ್ಣ ಆಧಾರದ ಮೇಲೆ ನಿಂತಿದೆ.
ಆಧಾರವೇ ಇಲ್ಲದೇ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಗ್ರಾನೈಟ್‌ಗಳ ತಳಭಾಗದಲ್ಲಿ ತೀರ ಕಡಿದಾದ ಇಳಿಜಾರು ಪ್ರದೇಶ ಇದೆ ಅನ್ನುವ ಕಲ್ಪನೆ ಕೂಡ ಯಾರಿಗೂ ತಿಳಿಯುವುದಿಲ್ಲ. ಇಳಿಜಾರು ಪ್ರದೇಶಕ್ಕೆ ತಾತ್ಕಾಲಿಕವಾಗಿ ಭಕ್ತರ ಪ್ರವೇಶ ನಿಷೇಧಿಸುವಂತೆ ದೇವಸ್ಥಾನ ಸಮಿತಿಗೆ ಸೂಚನೆ ನೀಡಿದರು.