ರಾಯ್ ಪುರ್(ಚತ್ತೀಸ್ ಗಢ): ಚತ್ತೀಸ್ ಗಢದ ವ್ಯಕ್ತಿಯೊಬ್ಬರು ಓಲಾ ಶೋರೂಂನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಿದ್ದರು. ಆದರೆ ಸ್ಕೂಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ತಾಂತ್ರಿಕ ದೋಷದ ಪರಿಹಾರಕ್ಕಾಗಿ ಶೋರೂಂ ಅನ್ನು ಸಂಪರ್ಕಿಸಿದಾಗ ಸಮರ್ಪಕ ಪರಿಹಾರ ನೀಡಲು ವಿಫಲವಾಗಿತ್ತು. ಇದರಿಂದ ಬೇಸತ್ತ ವ್ಯಕ್ತಿ ಯಾರೂ ಊಹಿಸದ ರೀತಿಯಲ್ಲಿ ಶೋರೂಂ ಮುಂಭಾಗ ಪ್ರತಿಭಟನೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ!
ವಿಶಿಷ್ಟ ಪ್ರತಿಭಟನೆ:
ಕೆಂಪು ಬಣ್ಣದ ತನ್ನ ಎಲೆಕ್ಟ್ರಿಕ್ ಸ್ಕೂಟರ್ ನ ಹ್ಯಾಂಡಲ್ ಗೆ ಹೂವಿನ ಹಾರ ಹಾಕಿ, ಅದನ್ನು ತಳ್ಳುವ ಗಾಡಿಯಲ್ಲಿ ಇಟ್ಟು ಓಲಾ ಶೋರೂಂ ಮುಂಭಾಗದಲ್ಲಿ ಇಟ್ಟು, ಮೈಕ್ ನಲ್ಲಿ ಸಲ್ಮಾನ್ ಖಾನ್ ನಟನೆಯ ತಡಪ್, ತಡಪ್ ಕೇ ಹಾಡನ್ನು ಹಾಡತೊಡಗಿದ್ದ. ಕುತೂಹಲದ ಸಂಗತಿ ಎಂಬಂತೆ ಈ ವ್ಯಕ್ತಿ ಆ ಹಾಡನ್ನು ಬದಲಾಯಿಸಿ ಹಾಡುವ ಮೂಲಕ ಗಮನಸೆಳೆದಿದ್ದ!
ವಿಡಿಯೋದಲ್ಲಿ ಓಲಾ ಸ್ಕೂಟರ್ ಖರೀದಿಸಿದ ಗ್ರಾಹಕ, “ ತಡಪ್, ತಡಪ್ ಕೆ ಇಸ್ ದಿಲ್ ಸೇ ಆಹ್ ನಿಕಲ್ ತಿ ರಹಿ…ಮುಜುಕೋ ಸಜಾ ದೆ ಓಲಾ ನೇ, ಐಸಾ ಕ್ಯಾ ಗುನಾ ಕಿಯಾ, ತೋ ಲುಟ್ ಗಯೇ, ಹಾ ಲುಟ್ ಗಯೇ ಹಮ್ ಓಲಾ ಲೇಕರ್ ರೇ” ಎಂದು ಮೈಕ್ ನಲ್ಲಿ ಹಾಡಿ ಓಲಾ ವಿರುದ್ಧ ತನ್ನ ಆಕ್ರೋಶ ಹೊರಹಾಕಿರುವುದಾಗಿ ವರದಿ ತಿಳಿಸಿದೆ.
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಲಕ್ಷಾಂತರ ವೀಕ್ಷಣೆ ಪಡೆದಿದ್ದು, ಹಲವು ಮಂದಿ ಗ್ರಾಹಕನ ವಿಶಿಷ್ಟ ರೀತಿಯ ಪ್ರತಿಭಟನೆ ಗೆಬೆಂಬಲ ವ್ಯಕ್ತಪಡಿಸಿದ್ದಾರೆ.