Advertisement

Chewing Gum: ಸ್ವೀಟ್‌ ಸೀರಿಯಲ್‌ ಕಿಲ್ಲರ್‌

07:10 AM Feb 03, 2024 | Team Udayavani |

ನಿಮಗೆ ಗೊತ್ತಾ? ನಾವೆಲ್ಲರೂ 1 ಲಕ್ಷ ಟನ್‌ ತ್ಯಾಜ್ಯ ತಯಾರಕರಲ್ಲಿ ಒಬ್ಬರೆಂದು.  ಪ್ರತೀ ದಿನ ನಾವೊಬ್ಬ ಸೀರಿಯಲ್‌ ಕಿಲ್ಲರ್‌ ಗೆ ಜನ್ಮ ನೀಡುತ್ತೇವೆ,ಅದೂ ಕೂಡ 500 ವರ್ಷ ಆಯಸ್ಸಿರುವ ಮಾರಕ ರಾಕ್ಷಸನಿಗೆ ಎಂದು!

Advertisement

ನೀವು ಊಹಿಸಿರುವಂತೆ ಪ್ಲಾಸ್ಟಿಕ್‌ ಚೀಲ ಅಥವಾ ಸಿಗರೇಟ್‌ ಬಡ್‌ಗಳ ಬಗ್ಗೆ ನಾನು ಮಾತಾನಾಡುತ್ತಿಲ್ಲ.ಅದಕ್ಕೂ ಮಿಗಿಲಾದ ಮತ್ತೋರ್ವ ದಾನವ ನಮ್ಮ ಜೊತೆಗೇ ಇದ್ದಾನೆಂಬ ಸಣ್ಣ ಅರಿವೂ ನಮಗಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರೂ ಕೂಡ ಸೇವಿಸುವಂತಹ ವಸ್ತು ಪ್ರಕೃತಿಗೆ ಮಾತ್ರವಲ್ಲ ಮನುಷ್ಯ ಸಂಕುಲಕ್ಕೆಯೇ ಮಾರಕವಾಗಬಲ್ಲ ಶಕ್ತಿ ತನ್ನಲ್ಲಿ ಅಗಾಧವಾಗಿ ತುಂಬಿಕೊಂಡಿದೆ.ಆ ವಸ್ತುವೇ ಚ್ಯೂಯಿಂಗ್‌ ಗಮ್

ಏನು, ಚ್ಯೂಯಿಂಗ್‌ ಗಮ್‌ ಮಾರಕವೇ? ಚ್ಯೂಯಿಂಗ್‌ ಗಮ್‌ ವಿಷವೇ ಎಂದು ಅನುಮಾನ ಮೂಡಿರಬಹುದು.‌ ಆದರೆ ಉತ್ತರ ಬೆರಗಾಗಿಸಬಹುದು. ಚ್ಯೂಯಿಂಗ್‌ ಗಮ್, ಸಿಗರೇಟ್‌ ಬಡ್‌ಗಳ ಅನಂತರ ಅತಿಯಾಗಿ ಎಸೆಯಲ್ಪಡುವ ತ್ಯಾಜ್ಯಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಈ ಚ್ಯೂಯಿಂಗ್‌ ಗಮ್‌ ಗೊಂದು ಇತಿಹಾಸವಿದೆ. ಮೊದಲಿನ ಕಾಲದಲ್ಲೆಲ್ಲಾ ಬಾಯಿಯನ್ನು ತಾಜಾ ಅಥವಾ ವಾಸನೆಯಿಂದ ದೂರವಿರಿಸಲು ಮರದ ರಾಳವನ್ನು ಜಗಿಯುತ್ತಿದ್ದರಂತೆ. ಅದೇ ಪರಂಪರೆ ಈಗಲೂ ಮುಂದುವರಿಯುತ್ತಿದೆ, ಆದರೆ ವಾಣಿಜ್ಯೀಕರಣದ ರೂಪ ಪಡೆದು.

ಮರದ ರಾಳದಿಂದ ಪ್ರಾಕೃತಿಕವಾಗಿ ಬಳಕೆಯಲ್ಲಿದ್ದ ಈ ಚ್ಯೂಯಿಂಗ್‌ ಗಮ್‌ ನಲ್ಲಿ ಬರುಬರುತ್ತಾ ತಯಾರಿಕಾ ವೆಚ್ಚ ಕಡಿಮೆ ಮಾಡುವ ನೆಪದಲ್ಲಿ ಸಿಂಥೆಟಿಕ್‌ ಪ್ಲಾಸ್ಟಿಕ್‌ ಅಥವಾ ಪೋಲಿಮರ್‌ ಎಂಬ ಅಜೈವಿಕ ವಸ್ತುವಿನ ಬಳಕೆ ಪ್ರಾರಂಭವಾಯಿತು. ಹೌದು, ನಾವು ಪ್ರತಿದಿನ ಮೇಕೆಯಂತೆ ಜಗಿಯುವುದು ಪ್ಲಾಸ್ಟಿಕ್‌ ತುಂಡನ್ನೇ.ಇದರ ವಿಷ ಪ್ರಮಾಣ ಜಾಸ್ತಿ ಗೊಳಿಸುವುದು ಅತಿಯಾದ ಪ್ರಮಾಣದಲ್ಲಿ ಬಳಕೆ ಆಗುವ ಸಕ್ಕರೆ ಅಂಶ ಮತ್ತು ಹೇರಳವಾಗಿ ಹಾಕುವ ಕೃತಕ ಬಣ್ಣ. ಈಗ ಗೊತ್ತಾಯ್ತಾ ವಿಷವನ್ನು ಜಗಿಯೋ ಮೂರ್ಖ ಮಾನವರು ನಾವು ಎಂದು?

ಇಡೀ ವಿಶ್ವದಲ್ಲಿ ಬಿಲಿಯನ್‌ ಗಟ್ಟಲೇ ಜನ ಈ ಚ್ಯೂಯಿಂಗ್‌ ಗಮ್‌ ಅನ್ನು ಪ್ರತಿದಿನ ಜಗಿಯುತ್ತಾರೆ. ಒಂದು ಅಂದಾಜಿನ ಪ್ರಕಾರ 2025ರ ಹೊತ್ತಿಗೆ ಚ್ಯೂಯಿಂಗ್‌ ಗಮ್‌ ಮಾರುಕಟ್ಟೆ 48.68 ಬಿಲಿಯನ್‌ ಯುಎಸ್‌ ಡಾಲರ್‌ ದಾಟುವ ನಿರೀಕ್ಷೆ ಇದೆ. ಭಾರತದಲ್ಲಂತೂ ಚ್ಯೂಯಿಂಗ್‌ ಗಮ್‌ ಖರೀದಿಸುವ ದೊಡ್ಡ ಜನಸಮೂಹವೇ ಇದೆ. ಭಾರತದಲ್ಲಿ ಚ್ಯೂಯಿಂಗ್‌ ಗಮ್‌ ಮಾರುಕಟ್ಟೆಯ ಅಂಕಿ ಅಂಶದ ಮೇಲೆ ಕೊಂಚ ದೃಷ್ಟಿ ಹಾಯಿಸಿದರೆ ಆಶ್ಚರ್ಯವಾಗಬಹುದು, ಏಕೆಂದರೆ 2021 ರಲ್ಲಿ 111.5 ಬಿಲಿಯನ್‌ ಯುಎಸ್‌ ಡಾಲರ್‌ ಆದಾಯ ಚ್ಯೂಯಿಂಗ್‌ ಗಮ್‌ ಮಾರಾಟದಿಂದ ಕಂಪನಿಗಳು ಗಳಿಸಿವೆ. ಈ ಚ್ಯೂಯಿಂಗ್‌ ಗಮ್‌ ವ್ಯವಹಾರದಿಂದ ಆರ್ಥಿಕವಾಗಿ ಕಂಪನಿಗಳು ಲಾಭ ಪಡೆದುಕೊಂಡಿದೆ ಮತ್ತು ಪಡೆದುಕೊಳ್ಳುತ್ತಿವೆ ಆದರೆ ಪರಿಸರಕ್ಕೆ ಸಿಕ್ಕಿದ್ದು? ಲಾಭ ಶೂನ್ಯ,ಅನ್ಯಾಯ ಅಪಾರ!

Advertisement

ಪ್ರಕೃತಿಗೆ ಹಬ್ಬುವ ಕ್ಯಾನ್ಸರ್‌ನಂತೆ ಈ ಚ್ಯೂಯಿಂಗ್‌ ಗಮ್ ಯಾಕೆಂದರೆ ನಾವು ಬಾಲ್ಯದಲ್ಲಿ ಜಗಿದು ಉಗಿದ ಚ್ಯೂಯಿಂಗ್‌ ಗಮ್‌ ಈಗಲೂ ಎಲ್ಲಾದರು ಬಿದ್ದಿದ್ದು, ಮೊಳಕೆಯಿಂದ ಗಿಡವಾಗಲು ಬಯಸುವ ಗಿಡಗಳ ಉಸಿರುಗಟ್ಟಿಸುತ್ತಿರಬಹುದು. ಹಾಲು ಕೊಡೋ ಗೋಮಾತೆಯ ಗಂಟಲಲ್ಲಿ ಅಂಟಿ ಚಿತ್ರಹಿಂಸೆ ನೀಡುತ್ತಿರಬಹುದು.

ಮಳೆ ಬರೋವಾಗ ಜಲಧಾರೆ ಸೇರುವ ಚ್ಯೂಯಿಂಗ್‌ ಗಮ್‌ ಪೀಡೆಯನ್ನು ಮೃದು ಆಹಾರವೆಂದು ಭಾವಿಸಿ ತಿನ್ನುವ ಮೀನು ಉಸಿರುಗಟ್ಟಿದಾಗ ಅದನ್ನೇ ಹಿಡಿದು ತಿನ್ನುವ ಮನುಜರು ನಾವು, ಪ್ರಕೃತಿಗೆ ಎಂತಹ ಬಂಪರ್‌ ಬಹುಮಾನ ಕೊಡುತ್ತೇವಲ್ಲ.  ಚ್ಯೂಯಿಂಗ್‌ ಗಮ್ ಹೊರಬಂದರೆ ಸರಿ,‌ ಇಲ್ಲವಾದರೆ ಹೊಟ್ಟೆಯಲ್ಲೇ ಇದ್ದು ಗಡ್ಡೆಗಳಾದ ಉದಾಹರಣೆಗಳೂ ಇವೆ.

ಈ ಪುಟ್ಟ ವಸ್ತು ಸಾಲುಸಾಲಾಗಿ ಕೊಡೋ ತೊಂದರೆ ಅಷ್ಟಿಷ್ಟಲ್ಲ, ಅದಕ್ಕೇ ಸೀರಿಯಲ್‌ ಕಿಲ್ಲರ್‌ ಎಂಬ ಪದಕ್ಕೆ ಅರ್ಹವಾಗಿದೆ. ಈ ಸಿಹಿ ವಸ್ತು. ಸಿಂಗಾಪುರದಂತಹ ದೇಶವೇ ಬ್ಯಾನ್‌ ಮಾಡಿರುವ ಈ ಚ್ಯೂಯಿಂಗ್‌ ಗಮ್‌ ಎಷ್ಟು ಮಾರಕವಾಗಿರಬಹುದು ನೀವೇ ಯೋಚಿಸಿ.

ಸಮಸ್ಯೆ ಇಷ್ಟು ಉದ್ದ ನೋಡಿದ ಮೇಲೆ ಪರಿಹಾರ ಸೂಚಿಸದಿದ್ದರೆ ತಪ್ಪಾಗುತ್ತದೆ ಅಲ್ವಾ? ಈ ಚ್ಯೂಯಿಂಗ್‌ ಗಮ್‌ ಎಂಬ ರಾಕ್ಷಸನಿಂದ ನಮ್ಮನ್ನು ಹಾಗೂ ಉಸಿರು ಕೊಡೋ ಪ್ರಕೃತಿಯನ್ನು ರಕ್ಷಿಸಬೇಕಾದ್ರೆ ಆ ವಸ್ತುವನ್ನು ಖರೀದಿ ಮಾಡದೇ ಇರುವುದು ಅತ್ಯುತ್ತಮ. ಆಕಸ್ಮಾತ್‌ ಅಷ್ಟೂ ಬಾಯಿಗೆ ಅದನ್ನು ತಿನ್ನೋ ಚಪಲ ಇದ್ದರೆ ತಿಂದ ಮೇಲೆ ಪೇಪರ್‌ ನಲ್ಲಿ ಸುತ್ತಿ ಕಸದ ಬುಟ್ಟಿಯ ಪಾಲು ಮಾಡಬೇಕು.

ಇದು ತ್ಯಾಜ್ಯ ಉತ್ಪತ್ತಿ ಕಮ್ಮಿ ಮಾಡದೇ ಇರಬಹುದು. ಆದರೆ ಸಣ್ಣ ಪ್ರಮಾಣದಲ್ಲಿ ಪ್ರಕೃತಿಗೆ ಉಪಕಾರ ಮಾಡಬಹುದು. ಇನ್ನೊಂದು ಉತ್ತಮ ಪರಿಹಾರ ಅಂದರೆ ಜೈವಿಕ ಪದಾರ್ಥದಿಂದ ಮಾಡಿದ ಆರೋಗ್ಯಕ್ಕೆ ಹಾನಿಯೂ ಮಾಡದ ಚ್ಯೂಯಿಂಗ್‌ ಗಮ್‌ಗಳು ಲಭ್ಯವಿದೆ. ಹುಡುಕುವ ಕೆಲಸ ಮಾಡಬೇಕಷ್ಟೇ.

ಗೊತ್ತಾಯಿತು ಅಲ್ವಾ ಹೇಗೆ ಸಣ್ಣಸಣ್ಣ ವಿಷಯವೂ ಮಹತ್ವ ಪಡೆಯುತ್ತದೆ ಎಂದು. ನಾನೊಬ್ಬ ಚ್ಯೂಯಿಂಗ್‌ ಗಮ್‌ ಉಗುಳಿದರೆ ಏನಾಗುತ್ತದೆ ಎಂದು ಜಗತ್ತಿನ ಏಳು ಬಿಲಿಯನ್‌ ಜನ ಹೇಳಿದರೆ ಇಡೀ ಭೂಮಿಗೆ ಈ ಚ್ಯೂಯಿಂಗ್‌ ಗಮ್‌ ಹೊದಿಕೆಯಾಗಬಹುದು ಎಚ್ಚರ!!

-ಕಾರ್ತಿಕ್‌ ಪೈ ಕೆ.

ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next