ಹೋವ್: ಇಂಗ್ಲಿಷ್ ಕೌಂಟಿಯಲ್ಲಿ ರನ್‌ಪ್ರವಾಹ ಹರಿಸುವುದನ್ನು ಮುಂದುವರಿಸಿರುವ ಚೇತೇಶ್ವರ್ ಪೂಜಾರ ಸಸೆಕ್ಸ್ ಪರ 48 ಗಂಟೆಗಳ ಅವಧಿಯಲ್ಲಿ ಮತ್ತೊಂದು ಸೆಂಚುರಿ ಬಾರಿಸಿದ್ದಾರೆ.
ರವಿವಾರದ “ರಾಯಲ್ ಲಂಡನ್ ಕಪ್’ ಏಕದಿನ ಪಂದ್ಯದಲ್ಲಿ ಸರ್ರೆ ವಿರುದ್ಧ 131 ಎಸೆತಗಳಿಂದ 174 ರನ್ ಸಿಡಿಸಿದರು. ಇದು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಪೂಜಾರ ಅವರ ಸರ್ವಾಧಿಕ ವೈಯಕ್ತಿಕ ಗಳಿಕೆಯಾಗಿದೆ.
ಶುಕ್ರವಾರ ವಾರ್ವಿಕ್‌ಶೈರ್ ವಿರುದ್ಧ ಪೂಜಾರ 79 ಎಸೆತಗಳಿಂದ 107 ರನ್ ಹೊಡೆದಿದ್ದರು. ಆದರೆ ಈ ಪಂದ್ಯವನ್ನು ಗೆಲ್ಲಲು ಸಸೆಕ್ಸ್‌ಗೆ ಸಾಧ್ಯವಾಗಿರಲಿಲ್ಲ.
ರವಿವಾರ ಸರ್ರೆ ವಿರುದ್ಧ ಸಸೆಕ್ಸ್ 9 ರನ್ನಿಗೆ 2 ವಿಕೆಟ್ ಕಳೆದುಕೊಂಡ ಸಂಕಟದಲ್ಲಿದ್ದಾಗ ಟಾಮ್ ಕ್ಲಾರ್ಕ್ (104) ಮತ್ತು ಪೂಜಾರ (174) ಸೇರಿಕೊಂಡು 205 ರನ್ ಜತೆಯಾಟ ನಿಭಾಯಿಸಿ ತಂಡಕ್ಕೆ ರಕ್ಷಣೆ ಒದಗಿಸಿದರು.
ಮೊದಲ 100 ರನ್ನಿಗೆ ಭರ್ತಿ 103 ಎಸೆತ ತೆಗೆದುಕೊಂಡ ಪೂಜಾರ, ಮುಂದಿನ 74 ರನ್ನನ್ನು ಬರೀ 28 ಎಸೆತಗಳಲ್ಲಿ ಬಾರಿಸಿದರು. ಈ ಆಕರ್ಷಕ ಆಟ 20 ಬೌಂಡರಿ, 5 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಸರ್ರೆ 50 ಓವರ್‌ಗಳಲ್ಲಿ 6 ವಿಕೆಟಿಗೆ 378 ರನ್ ಬಾರಿಸಿದೆ.