Advertisement

“ಎ’ತಂಡದ ಪರ ಆಡಲಿದ್ದಾರೆ ಪೂಜಾರ, ರಹಾನೆ

06:00 AM Dec 24, 2018 | |

ಹೊಸದಿಲ್ಲಿ: ಆತಿಥೇಯ ಆಸ್ಟ್ರೇಲಿಯ ವಿರುದ್ಧದ ಸಿಡ್ನಿ ಟೆಸ್ಟ್‌ ಪಂದ್ಯ ಜನವರಿ ಮೊದಲ ವಾರ ಮುಗಿಯುವುದರೊಂದಿಗೆ ಭಾರತೀಯ ಟೆಸ್ಟ್‌ ಕ್ರಿಕೆಟಿಗೆ ಸುದೀರ್ಘ‌ ವಿರಾಮ ಲಭಿಸಲಿದೆ.

Advertisement

ಇನ್ನು ಭಾರತ ಟೆಸ್ಟ್‌ ಆಡಲಿಳಿಯುವುದು ಮುಂದಿನ ಜುಲೈ ತಿಂಗಳಲ್ಲಿ! ಅಲ್ಲಿಯ ತನಕ ಐಪಿಎಲ್‌, ವಿಶ್ವಕಪ್‌ ಮೊದಲಾದ ಸೀಮಿತ್‌ ಓವರ್‌ಗಳ ಪಂದ್ಯಾವಳಿಗಳದ್ದೇ ಭರಾಟೆ.

ಈ ಆರೇಳು ತಿಂಗಳ ವಿರಾಮ ಎನ್ನುವುದು “ಟೆಸ್ಟ್‌ ಸ್ಪೆಷಲಿಸ್ಟ್‌’ ಬ್ಯಾಟ್ಸ್‌ಮನ್‌ಗಳ ಪಾಲಿಗೆ ದೊಡ್ಡ ನಿರ್ವಾತವನ್ನು ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ. ಮುಖ್ಯವಾಗಿ ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ ಅವರೆಲ್ಲ ಕೈಯಲ್ಲಿ ಕೆಲಸವಿಲ್ಲದೆ ಕುಳಿತುಕೊಳ್ಳಬೇಕಾಗುತ್ತದೆ. ಹೀಗಾಗಿ ಪೂಜಾರ, ರಹಾನೆ ಅವರಂಥ ಟೆಸ್ಟ್‌ ತಜ್ಞರನ್ನು ಇಂಗ್ಲೆಂಡ್‌ ಲಯನ್ಸ್‌ (ಇಂಗ್ಲೆಂಡ್‌ ಎ ತಂಡ) ವಿರುದ್ಧದ ಸರಣಿಯಲ್ಲಿ ಆಡಿಸುವುದು ಬಿಸಿಸಿಐ ಯೋಜನೆಯಾಗಿದೆ.

ರಣಜಿಯೂ ಆಡಬಹುದು
ಟೆಸ್ಟ್‌ ಸರಣಿ ಮುಗಿದೊಡನೆ ಪೂಜಾರ ನೇರವಾಗಿ ಸೌರಾಷ್ಟ್ರ ಪರ ರಣಜಿ ಆಡಲು ತೆರಳಬಹುದು. “ಎಲೈಟ್‌ ಎ’ ವಿಭಾಗದಲ್ಲಿ ಅಗ್ರಸ್ಥಾನ ಅಲಂಕರಿಸಿರುವ ಕಾರಣ ಸೌರಾಷ್ಟ್ರ ಬಹಳ ದೂರ ಸಾಗುವುದರಲ್ಲಿ ಅನುಮಾನವಿಲ್ಲ. ಆದರೆ ರಣಜಿ ಮುಗಿದೊಡನೆ ಪೂಜಾರ ಕ್ರಿಕೆಟ್‌ ಆಡದೆ ಕುಳಿತುಕೊಳ್ಳಬೇಕಾಗುತ್ತದೆ. ಅವರು ಐಪಿಎಲ್‌ ಹರಾಜಿನಲ್ಲಿ ಮಾರಾಟವಾಗದೇ ಉಳಿದಿರುವುದೂ ಇದಕ್ಕೆ ಕಾರಣ.

ರಣಜಿಯಲ್ಲಿ ಮುಂಬಯಿ ಪರ ಆಡಬೇಕಿರುವ ರಹಾನೆ ಅವರದು ಮತ್ತೂಂದು ರೀತಿಯ ಸಮಸ್ಯೆ. ರಣಜಿ ಕಿಂಗ್‌ ಖ್ಯಾತಿಯ ಮುಂಬಯಿ ಈ ಸಲ ನಾಕೌಟ್‌ ಪ್ರವೇಶಿಸುವುದೇ ಅನುಮಾನ ಎಂಬ ಸ್ಥಿತಿಯಲ್ಲಿದೆ. ಆದರೆ ರಹಾನೆಗೆ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಕ್ರಿಕೆಟ್‌, ಐಪಿಲ್‌ ಪಂದ್ಯಾವಳಿ ಇದೆ ಎನ್ನುವುದೊಂದು ಪ್ಲಸ್‌ ಪಾಯಿಂಟ್‌.

Advertisement

ಪೃಥ್ವಿ ಶಾಗೂ ಅವಕಾಶ
ಸಾಕಷ್ಟು ಬಲಿಷ್ಠವಾಗಿಯೇ ಇರುವ ಇಂಗ್ಲೆಂಡ್‌ ಲಯನ್ಸ್‌ ತಂಡ ಜನವರಿ-ಫೆಬ್ರವರಿಯಲ್ಲಿ ಭಾರತದಲ್ಲಿ ಪೂರ್ಣ ಪ್ರಮಾಣದ ಸರಣಿ ಆಡಲಿದೆ. ಚತುರ್ದಿನ ಟೆಸ್ಟ್‌, ಲಿಸ್ಟ್‌ ಎ ಪಂದ್ಯದ ಜತೆಗೆ ಟಿ20 ಪಂದ್ಯಗಳನ್ನೂ ಆಡಲಿದೆ. ಈ ತಂಡದ ವಿರುದ್ಧ ಪೂಜಾರ, ರಹಾನೆ ಅವರನ್ನು ಆಡಿಸುವುದು ಬಿಸಿಸಿಐ ಯೋಜನೆ. ಜತೆಗೆ, ಪೂರ್ತಿ ಫಿಟ್‌ ಆದರೆ ಪೃಥ್ವಿ ಶಾ ಅವರನ್ನೂ ಭಾರತ ಎ ತಂಡಕ್ಕೆ ಸೇರಿಸಿಕೊಳ್ಳುವುದು ಮಂಡಳಿಯ ಯೋಜನೆಯಾಗಿದೆ. ಯಾರೂ “ಕ್ರಿಕೆಟ್‌ ಲಯ’ ಕಳೆದುಕೊಳ್ಳಬಾರದೆಂಬುದೇ ಇದರ ಉದ್ದೇಶ.

Advertisement

Udayavani is now on Telegram. Click here to join our channel and stay updated with the latest news.

Next