Advertisement
ಚಹಾ ಹೀರುವುದು ನನ್ನೊಳಗಿನ ಜಾತ್ರಿ ಇದ್ಹಂಗ; ಉತ್ಸವದ ರೀತಿ. ನಂಗ ತೊಂಬತ್ತಾಯ್ತು ಅನ್ನೂದನ್ನ ಮರೆಸಿದ್ದೇ ಈ ಚಹಾ. ಮುಂಜಾನಿ ಎದ್ದು, ಮನಿಮಂದಿಗೆಲ್ಲ ಖಡಕ್ ಚಾ ಮಾಡೋದು ನಂಗ ರೂಢಿ ಆಗ್ಯಾದ. ಆದರ, ಒಂದೆರಡು ದಿನದಿಂದ ಚಾ ಕುಡಿಯೋಕೂ ಏನೋ ಬ್ಯಾಸರ. ಚಹಾದ ವಾಟಿ (ಕಪ್) ಹಿಡಿದಾಗ, ಬೆರಳುಗಳಿಗೆ ನಡುಕ ಹುಟಾ¤ದ. ಆ ಕಂಪನದ ತುದಿ ಹಿಡಿದು ನೋಡಿದ್ರ, ಅಲ್ಲಿ ಗಿರಡ್ಡಿ ಗೋವಿಂದರಾಜು ಕಾಣಿಸ್ತಾರ. ಅವರು ಮೊನ್ನೆ ನಮ್ಮನ್ನೆಲ್ಲ ಬಿಟ್ಟು ಹೊಂಟ್ರಾ. ಅವರ ಪತ್ನಿ ತರಕಾರಿ ತರೂಕಂತ ಮಾರ್ಕೆಟ್‌ಗೆ ಹೋಗ್ಯಾರ. ಇವರು ಒಂದು ಕಪ್ ಖಡಕ್ ಚಾ ಮಾಡಿ, ಅದನ್ನು ಕುಡೀತಾ ಕುರ್ಚಿ ಮ್ಯಾಲೆ ಕುಂತಾರ. ಚಾ ಪೂರಾ ಕುಡುದು, ಹಾಗೆ ಕಪ್ ಹಿಡಕೊಂಡೇ ಪ್ರಾಣ ಬಿಟ್ಟಾರ. ಅವರು ನಮ್ಮನಿ ಬಾಜೂನೇ ಇದ್ರೂ, ಚಾ ಮಾಡ್ತಿದ್ರು ಅಂತ ಗೊತ್ತಾಗಿದ್ದೇ ನಂಗ ಆವಾಗ.
Related Articles
Advertisement
ಒಂದು ಮುಂಜಾವಿನಲ್ಲಿ ಸೋ… ಎಂದು ಶ್ರುತಿಹಿಡಿದು ಸುರಿಯುತ್ತಿದ್ದ ಅದೇ ಸೋನೆ ಮಳೆಗೆ ಮೋರೆಯೊಡ್ಡಿ ಕುಂತಿದ್ದೆ. ಹಕ್ಕಿಗಳ ಚಿಲಿಪಿಲಿ. ಅಲ್ಲೆಲ್ಲೋ ಮೂಲ್ಯಾಗ ದುಂಬಿಯ ಓಂಕಾರ ಕಿವಿಗೆ ಬೀಳುತ್ತಿತ್ತು. ತೆಂಗು ಗರಿಗಳಿಗೆ ಸುಳಿಗಾಳಿ ಸೋಕುತಲಿತ್ತು. ಹಚ್ಚೆಹಸುರಿನ ಪಚ್ಚೆ ಹಾಸಿನ ಹಾಗ ಅಂಗಳ ಕಾಣಿ¤ತ್ತು. ಕಣ್ಣೆದುರೇ ಒಂದು ಬಣ್ಣದ ಚಿಟ್ಟೆ ಕುಣಿಯುತ್ತಿತ್ತು. ಆ ಕ್ಷಣವೇ ನನ್ನೊಳಗೆ ಹುಟ್ಟಿದ ಕವಿತೆ; “ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ…’. ಸಂಗೀತಾ ಕಟ್ಟಿ, ಬಿ.ಆರ್. ಛಾಯಾ ಅದನ್ನ ಭಾಳ ಛೊಲೋ ಹಾಡ್ಯಾರ.
ನಾನು ಎಲ್ಲರನ್ನೂ ಓದಿದ್ದೆ. ಬೇಂದ್ರೆಯವರನ್ನು ತುಸು ಜಾಸ್ತಿ ಓದಿದ್ದೆ. ಅವರ ಕಾವ್ಯವಾಚನಗಳನ್ನು ಹೈಸ್ಕೂಲ್‌ನ ದಿನಗಳಲ್ಲಿದ್ದಾಗಲೇ ಕೇಳ್ತಿದ್ದೆ. ಕುವೆಂಪು ಅವರ ಕಾವ್ಯಕ್ಕಂತೂ ಆರಾಧಕನಾಗಿದ್ದೆ. ಅವರನ್ನು ನಾನು ಮೊದಲು ಕಂಡಿದ್ದು, ಮೈಸೂರಿನ್ಯಾಗ. ಸಾಹಿತ್ಯ ಸಮ್ಮೇಳನದ ವೇಳೆ. ಅದು 1955, ಶಿವರಾಮ ಕಾರಂತರು ಆಗ ಸಮ್ಮೇಳನದ ಸರ್ವಾಧ್ಯಕ್ಷರು. ಬಸವರಾಜ ಕಟ್ಟಿàಮನಿ ಮತ್ತು ನನಗ ಮಹರಾಜ ಕಾಲೇಜಿನಲ್ಲಿ ವಸತಿ ಕಲ್ಪಿಸಿದ್ರು. ಬೆಳಗ್ಗೆದ್ದು ಚಾ ಕುಡೀತಿದ್ವಿ. ಕುವೆಂಪು ಬಂದು ಕದ ಬಡಿದ್ರು. ಕಟ್ಟಿàಮನಿ ಭಾಳ ಸಿಗರೇಟು ಸೇದೋರು. ರೂಮ್ ತುಂಬಾ ಹೊಗೆ. ಬಾಗಿಲು ತೆರೆದಾಕ್ಷಣ, ಕುವೆಂಪು ಅವರ ಮೂಗಿಗೆ ಸಿಗರೇಟಿನ ಹೊಗೆ ರಾಚಿತು. ನಾವು ಗಾಬರಿ ಆದ್ವಿ. ಆದರೆ, ಅವರು “ವ್ಯವಸ್ಥೆ ಸರಿ ಇದೆಯಾ? ರಾತ್ರಿ ಚೆನ್ನಾಗಿ ನಿದ್ದೆ ಮಾಡಿದ್ರಾ? ಚಹಾ ಕುಡಿದ್ರಾ?’ ಎಂದು ಕೇಳಿ ವಾಪಸು ಹೋದ್ರು.
1966ರಲ್ಲಿ ಅವರಿಗೆ ನಮ್ಮ ಧಾರವಾಡ ವಿವಿಯಿಂದ ಡಾಕ್ಟರೇಟ್ ಕೊಟ್ಟೆವು. ಆ ಹೊತ್ತಿಗೆ ನಾನು ಬರೆದಿದ್ದ “ವಿಶ್ವ ವಿನೂತನ ವಿದ್ಯಾಚೇತನ…’ ಪದ್ಯ ಎಲ್ಲೆಡೆ ಹಬ್ಬಿತ್ತು. ಇದನ್ನು ಅನಧಿಕೃತ ನಾಡಗೀತೆ ಅಂತ ಹೇಳೊªàರೂ ಇದ್ದಾರ. ಅಂದು ಗೆಸ್ಟ್‌ಹೌಸ್‌ನಲ್ಲಿ ತಂಗಿದ್ದ ಕುವೆಂಪು ನನ್ನನ್ನು ಕರೆದು, “”ನಿಮ್ಮ ಕವಿತೆ “ವಿಶ್ವ ಭಾರತಿಗೆ ಕನ್ನಡದಾರತಿ’ಯ ವಿಶ್ವ ವಿನೂತನ ಹಾಡು ಬಹಳ ಚೆನ್ನಾಗಿದೆ” ಅಂದಾಗ, ನಂಗ ರೋಮಾಂಚನ ಆತು.
ಅನೇಕರು ನಂಗ ಅಜಾತಶತ್ರು ಪಟ್ಟ ಕಟ್ಯಾರ. ಕೆಎಸ್‌ನರನ್ನು ನೋಡಿದ್ರ ಅಡಿಗರು ಕೆಂಡ ಆಗ್ತಿದ್ರು; ಅಡಿಗರನ್ನು ನೋಡಿದ್ರ ಮೈಸೂರಿನವರಿಗೆ ಆಗ್ತಿರ್ಲಿಲ್ಲ. ಈ ಮುಸಿಮುಸಿ ಗುದ್ದಾಟ ಸಾಹಿತ್ಯದ ಅಂಗಳದಾಗ ಇದ್ದಿದ್ದೇ. ನನ್ನ ಕಣ್ಣಿಗೆ ಕೆಟ್ಟದ್ದು ಎನ್ನುವಂಥದ್ದು ಕಾಣೊÕàದೇ ಇಲ್ಲ. ವ್ಯಕ್ತಿಗಳು ಕಂಡಾಗ, ಘಟನೆಗಳನ್ನು ನೋಡಿದಾಗ, ಸನ್ನಿವೇಶಗಳು ಕಣ್ಮುಂದೆ ಕುಣಿದಾಗ ನಾನು ನೋಡೋದು, ಅವುಗಳಲ್ಲಿನ ಒಳ್ಳೇ ಅಂಶಗಳನ್ನಷ್ಟೇ. ವ್ಯಕ್ತಿಗಳು ಎಲ್ರೂ ಪೂರ್ಣ ಕೆಟ್ಟಿರೋದಿಲ್ಲ. ನಂಗ ಎಲ್ಲರೂ ಬೇಕು; ನವೋದಯದವರೂ ಬೇಕು, ನವ್ಯರೂ ಬೇಕು, ದಲಿತ- ಬಂಡಾಯದವರೂ ಬೇಕು. ಯಾರೊಂದಿಗೂ ನಾನು ದ್ವೇಷ ಕಟ್ಕೊಳ್ಳೋಲ್ಲ. ಬಸವಣ್ಣನವರು ಹೇಳಾರಲಿ, “ಅನ್ಯರಿಗೆ ಅಸಹ್ಯ ಪಡಬೇಡ, ಇದಿರ ಹಳಿಯಲುಬೇಡ’ ಅಂತ. ಅದೇ ನನ್ನ ಅಂತರಂಗ ಶುದ್ಧಿ.
“ಕಣವಿಯವರಿಗೆ ವಿಮಶಾì ಲೋಕ ಸರಿಯಾಗಿ ನ್ಯಾಯ ಒದಗಿಸಿಲ್ಲ. ಅವರು ಪ್ರಸಾರಾಂಗ ನಿರ್ದೇಶಕರಾಗಿದ್ದೇ ಇದಕ್ಕೆ ಕಾರಣ. ಪ್ರಾಧ್ಯಾಪಕರಾಗಿರುತ್ತಿದ್ದರೆ, ಅವರಿಗೆ ಜಿಎಸ್ಸೆಸ್, ಅಡಿಗರಂತೆ ಶಿಷ್ಯಕೋಟಿ ಇರುತ್ತಿತ್ತು’ ಎನ್ನುವ ಮಾತುಗಳೆಲ್ಲ ಸುಳ್ಳು. ಎಷ್ಟೋ ವಿಮರ್ಶಕರು ನನ್ನ ಕವಿತೆಗಳನ್ನು ಎತ್ಕೊಂಡು ನಿಷ್ಪಕ್ಷಪಾತ ವಿಮರ್ಶೆ ಮಾಡ್ಯಾರ. “ಕಣವಿ ಕಾವ್ಯದ ಅನುಸಂಧಾನ’ ಅಂತ ಕೃತಿಯೂ ಬಂದಾದ. ಟೀಚಿಂಗ್ ಲೈನ್‌ನಲ್ಲಿ ಇರಲಿಲ್ಲ ಅಂದಮಾತ್ರಕ್ಕ ಶಿಷ್ಯರು ಇಲ್ಲ ಅನ್ನೋಕದ್ದ ಸಾಧ್ಯವಿಲ್ಲ. ಪ್ರಸಾರಾಂಗದಲ್ಲಿ ಇದ್ದುಕೊಂಡೇ ಹಲವು ಉಪನ್ಯಾಸ ನೀಡಿ, ನನಗ ಒಂದಿಷ್ಟು ಲೇಖಕರು ಪರಿಚಿತರಾದರು.
ನಂಗೆ ನಂದೇ ಆದ ಒಂದು ಪ್ರಕಾರ ಬೇಕಿತ್ತು. ಅದಕ್ಕೆ ಸಾನ್ನೆಟ್ಟುಗಳನ್ನು ಬೆನ್ನಟ್ಟಿದೆ. ಕುವೆಂಪು- ಬೇಂದ್ರೆ ಕೂಡ ಆ ಕಾಲದಲ್ಲಿ ಸಾನ್ನೆಟ್ಟು ಬರೆದ್ರು. ನನ್ನ ಮೊದಲ ಕವನ ಸಂಗ್ರಹದಲ್ಲಿ 8- 10 ಸಾನ್ನೆಟ್ಟುಗಳಿವೆ. ಅವುಗಳ ಮೇಲೆ ಮೊದಲಿಂದಲೂ ಏನೋ ಪ್ರೀತಿ. ಕಾರಣ, ವ್ಯಕ್ತಿಚಿತ್ರ, ಸ್ಮರಣೆಯನ್ನು ಸಾನ್ನೆಟ್ಟುಗಳಲ್ಲಿ ಬಹಳ ಸಂಕ್ಷಿಪ್ತವಾಗಿ ಕಟ್ಟಿಕೊಡಬಹುದು. ಭಾವ- ಬುದ್ಧಿಯ ವಿದ್ಯುದ್ದಾಲಿಂಗನ ಅದು. ಭಾವ- ಬುದ್ಧಿಯನ್ನು 8+6 ಸಾಲಿನಲ್ಲಿ ಕಟ್ಟಿಕೊಡೋದೇ ಒಂದು ಸವಾಲು. ಷೇಕ್ಸ್‌ಪಿಯರ್, ಸಾನ್ನೆಟ್ಟುಗಳಲ್ಲಿ ಪ್ರಾಸದ ನಿಯಮಗಳನ್ನು ಅನುಸರಿಸುತ್ತಿದ್ದ. ಕನ್ನಡದಲ್ಲಿ ಮೊದಲ ಬಾರಿಗೆ ಸಾನ್ನೆಟ್ಟು ಪ್ರಯೋಗಿಸಿದವರು, ಗೋವಿಂದ ಪೈಗಳು. ಕುವೆಂಪು ಕಟ್ಟುನಿಟ್ಟಾಗಿ ಪ್ರಾಸಗಳನ್ನು ಅನುಸರಿಸುತ್ತಿದ್ದರು. ಬೇಂದ್ರೆಯವರಿಗೂ ಆ ರುಚಿ ಹತ್ತಿತ್ತು.
ಬೇಂದ್ರೆಯವರೂ ಪೂರಾ ಜಾನಪದವನ್ನು ಬಳಸಲಿಲ್ಲ. ಅದಕ್ಕೊಂದು ಸಂಸ್ಕಾರ ಕೊಟ್ಟು ಬಳಸಿದರು. ನಾನು ನನ್ನ ರೀತಿಯನ್ನು ತೋರಿಸಬೇಕಲ್ಲ, ಹಾಗಾಗಿ ಪರಿಸರವನ್ನೇ ಕಾವ್ಯವಾಗಿಸಿಕೊಂಡೆ. ಜೀವನಾನುಭವ ಎನ್ನುವುದು ಪ್ರಕೃತಿಯಿಂದ ನೇರವಾದಂಥ ಒಂದು ಪ್ರಭಾವ. ಅನೇಕರು ಹೇಳ್ತಾರ, “ಬೇಂದ್ರೆ ಮತ್ತು ಶಂಭಾ ಜೋಷಿಯವರ ಜಗಳಕ್ಕೆ ಕಣವಿ ಹತ್ತಿರದ ಸಾಕ್ಷಿಪ್ರಜ್ಞೆ ಆಗಿದ್ರು’ ಅಂತ. ಆದರೆ, ಖರೆ ಹೇಳ್ತೀನಿ… ಬೇಂದ್ರೆ ನನ್ನೆದುರಿಗೆ ಯಾರನ್ನೂ ಟೀಕಿಸುತ್ತಿರಲಿಲ್ಲ. ಶಂಭಾ ಕೂಡ ನನ್ನ ಬಳಿ ಯಾರನ್ನೂ ದೂರುತ್ತಿರಲಿಲ್ಲ. ಇವನು ಕೆಟ್ಟದ್ದನ್ನು ಕಿವ್ಯಾಗ ಹಾಕ್ಕೊಳ್ಳೋನಲ್ಲ, ಇವನಿಗೆ ಹೇಳಿ ಪ್ರಯೋಜನ ಇಲ್ಲಾಂತ ಅಂದ್ಕೊಂಡರೋ ಏನೋ!
ಶಂಭಾ ಅವರ “ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ, ಧಾರವಾಡದ ವಿದ್ಯಾರಣ್ಯ ಹೈಸ್ಕೂಲಿನಲ್ಲಿ ವಿಚಾರ ಸಂಕಿರಣ ಇತ್ತು. ಆಗ ಬೇಂದ್ರೆಯವರನ್ನೂ ಕರೆದಿದ್ವಿ. ಶಂಭಾ ಮಾತಾಡುವಾಗ, ಯಾರನ್ನೋ ಮನಸ್ಸಲ್ಲಿಟ್ಕೊಂಡು ಕೆಲವು ಪದ ಪ್ರಯೋಗಿಸಿದರು. ಥಟ್ಟಂತ ಬೇಂದ್ರೆ ಎದ್ದು ನಿಂತು, “ನನ್ನ ಹೆಸರು ಹೇಳಿÅà… ಯಾರೋ ಅಂತ ಹೇಳಿ ಯಾಕ್ ರಾಗ ತೆಗೀತೀರ?’ ಎಂದು ಸಿಟ್ಟಾಗಿದ್ರು. ಕೊನೆಗೆ, ನಾನು ಅವರನ್ನು ಸಂತೈಸಿದ್ದೆ.
ನಂಗ ಈಗಿನ ಸಾಹಿತ್ಯ ಲೋಕದ ಸ್ಥಿತಿ ಚಿಂತೆಗೀಡು ಮಾಡ್ಯಾದ. ತೀರಾ ಎಡ, ತೀರಾ ಬಲ ಇರಬಾರ್ದುರೀ. ಅದಕ್ಕೆ ಬಹುಶಃ ಗಿರಡ್ಡಿ ಅವರು “ಮಧ್ಯಮ ಮಾರ್ಗ’ದ ಪ್ರಸ್ತಾಪ ಎತ್ತಿದ್ದರು. ಅವರು ಆ ಬಗ್ಗೆ ಕೃತಿ ಬರೀಬೇಕು ಅಂತಲೂ ಇದ್ದರು. ಮನೋಹರ ಗ್ರಂಥಮಾಲ ಅದನ್ನು ಪ್ರಕಟಿಸುವುದಿತ್ತು. ಆದರ, ಅಂದುಕೊಂಡಗ ನಡೀಲಿಲ್ಲ. ಸಾಹಿತ್ಯ ರಚನೆಯಲ್ಲಿ, ನಮ್ಮ ಅಭಿಮತದಲ್ಲಿ ನಿಷ್ಪಕ್ಷಪಾತತೆ ಮುಖ್ಯ. ಒಂದು ದುರ್ಬೀನು ಹಿಡಿದು ನೋಡಿದಾಗ, ಯಾವುದು ಒಳ್ಳೇದು, ಯಾವುದು ಕೆಟ್ಟದ್ದು ಅಂತ ಕಾಣ್ತದ. ಆದರೆ, ಮಾಸ್ತಿಯವರು “ಕೆಟ್ಟದ್ದು’ ಎಂಬ ಪದ ಬಳಸುತ್ತಿರಲಿಲ್ಲ. “ಒಳ್ಳೆಯದ್ದು, ಒಳ್ಳೆಯದಲ್ಲದ್ದು’ ಅಂತಿದ್ರು.
ನಾನು ಕಾವ್ಯ ಜೀವಿ ಖರೆ. ಆದರ, ನನ್ನ ಹೆಂಡ್ತಿ ಶಾಂತಾದೇವಿ ಕಣವಿ ಕತೆಗಾರ್ತಿ. ಅವರಿಗೆ ನನ್ಹಂಗ ಏಕಾಂತ ಬೇಕಿಲ್ಲ. ನಂಗ ಕವಿತೆ ಬರೆಯಲು ಪ್ರತ್ಯೇಕ ಕೋಣೆ ಬೇಕು, ಕುರ್ಚಿ- ಟೇಬಲ್ಲು ಬೇಕು. ಆದರ, ಅವಳು ಒಮ್ಮೊಮ್ಮೆ ಅಡುಗೆ ಕೋಣ್ಯಾಗ ಕತೆ ಬರೀತಾಳ. ಸ್ವೆಟರ್ ಹೆಣೆಯುತ್ತಾ, ಕಸೂತಿ ಹಾಕುತ್ತಾ ಕತೆಗೆ ಕಾವು ಕೊಡ್ತಾಳ. ಯಾವುದೋ ಪಾತ್ರವನ್ನು ತನ್ನೊಳಗೆ ಸಾಕಿಕೊಂಡೇ ಇರ್ತಾಳ. ಅದೂ ಅವಳೊಂದಿಗೆ ಜೀವಿಸುತ್ತಿರ್ತದ.
ಇಂದು ಪಕ್ಕದಲ್ಲಿ ಬೇಂದ್ರೆಯಿಲ್ಲ, ಕೀರ್ತಿನಾಥರಿಲ್ಲ, ಶಂಭಾ ಅವರಿಲ್ಲ. ಕಲುºರ್ಗಿಯವರು ಕಳೆದೇ ಹೋದರು. ಗಿರಡ್ಡಿಯವರು ಕಣ್ಮುಚ್ಚಿದ್ದೇ ಗೊತ್ತಾಗಲಿಲ್ಲ. ಧಾರವಾಡದಾಗ ಸುಮ್ಮನೆ ಅಡ್ಡಾಡುವಾಗ ಹಳೆಯ ನೆನಪುಗಳು ಕಾಲಿಗೆ ಎಡತಾಕ್ತಾವ. ಮನೋಹರ ಗ್ರಂಥಮಾಲೆಯ ಅಟ್ಟದಾಗ ಕೂತಾಗ, ಅದೇ ಗಿರಡ್ಡಿ ಕರಡು ತಿದ್ದುತ್ತಾ ಕುಳಿತಂತೆ ಕಾಣ್ತದ. ಇವತ್ತು ನನ್ನ ಜೋಡಿ ಅದೇ ಕಾವ್ಯ; ಅದೇ ಸೋನೆ ಮಳೆ; ಅದೇ ಖಡಕ್ ಚಾ ಮತ್ತು ನೀವುಗಳಷ್ಟೇ.
ನಿರೂಪಣೆ: ಕೀರ್ತಿ ಕೋಲ್ಗಾರ್