Advertisement
ಪ್ರಕೃತಿಯಲ್ಲಿ ಧಾತವಾಗಿಯೇ ದೊರಕುವ ಪ್ಲಾಟಿನಂ ಮತ್ತು ಚಿನ್ನಗಳು ಶ್ರೇಷ್ಠ ಲೋಹ (noble metal) ಗಳಾದರೆ, ಬಣ್ಣ, ವಾಸನೆ, ರುಚಿ ಇಲ್ಲದ, ರಾಸಾಯನಿಕ ಕ್ರಿಯಾಕಾರಿಯಲ್ಲದ, ವಿರಳವಾಗಿರುವ, ದಹ್ಯವಲ್ಲದ ಮತ್ತು ಪ್ರಕೃತಿದತ್ತವಾದ, ಹೀಲಿಯಂ, ನಿಯಾನ್, ಆರ್ಗಾನ್, ಕ್ರಿಪಾrನ್, ಕ್ಸೀನಾನ್, ಮತ್ತು ರೇಡಾನ್ ಗಳು “ಶ್ರೇಷ್ಠ ಅನಿಲ’ (noble gasss) ಗಳಾಗಿವೆ. ಅವನ್ನು “ಜಡ ಅನಿಲ’ (inert gas) ಮತ್ತು “ವಿರಳ ಅನಿಲ’ (rare gassss)ಗಳೆಂದೂ ಕರೆಯಲಾಗುತ್ತದೆ. ಹೀಲಿಯಂ, ಭೂಮಿಯಲ್ಲಿ ವಿರಳವಾಗಿದ್ದರೂ, ವಿಶ್ವದಲ್ಲಿ ಹೈಡ್ರೋಜನ್ ಅನಂತರ ಅತ್ಯಂತ ಹೇರಳವಾಗಿರುವ ಎರಡನೆ ಅನುಕ್ರಮದ ಧಾತು. ಆರ್ಗಾನ್, ಗಾಳಿಯ ಶೇ. 0.9 ಪ್ರಮಾಣದಲ್ಲಿದ್ದರೆ ಇತರ ಜಡಾನಿಲಗಳು ಅತ್ಯಲ್ಪ ಪ್ರಮಾಣದಲ್ಲಿ ಅಂದರೆ ಕೇವಲ ಪ್ರತೀ ದಶಲಕ್ಷದ ಭಾಗಾಂಶ (ppm) ಮಟ್ಟದಲ್ಲಿರುತ್ತವೆ.
Related Articles
Advertisement
ರ್ಯಾಮ್ಸೆ, ಕ್ಯಾವಂಡಿಷ್‌ನ ಪ್ರಯೋಗವನ್ನು ಪುನರಾವರ್ತಿಸಿ ಪಡೆದ ಅನಿಲದ ಗುಳ್ಳೆಯನ್ನು ಪ್ರಜ್ವಲಿಸಿ ಹೊರಹೊಮ್ಮಿದ ಬೆಳಕನ್ನು ರೋಹಿತದರ್ಶಕದ ಮೂಲಕ ಪರೀಕ್ಷಿಸಿದಾಗ ಆ ಅನಿಲವು ಅದುವರೆಗೆ ಪರಿಚಿತವಾಗಿರದ, ಇತರ ಯಾವುದೇ ವಸ್ತುವಿನೊಂದಿಗೆ ಸಂಯೋಗವಾಗದ ಒಂದು ಜಡ ಅನಿಲವೆಂದು ತಿಳಿಯಲಾಯಿತು. ಅದರ ರಾಸಾಯನಿಕ ಪಟುತ್ವವನ್ನು ಪರೀಕ್ಷಿಸಲು ರ್ಯಾಮೆÕ ಆ ಅನಿಲದ ಮಾದರಿಯನ್ನು ಫ್ಲೂರಿನ್ ಶೋಧಕ ಮಾಯ್ಸನ್‌ಗೆ ಕಳುಹಿಸಿದರು. ಮಾಯ್ಸನ್, ಆ ಅನಿಲ ಮತ್ತು ಫ್ಲೂರಿನ್ ಮಿಶ್ರಣದ ಮೂಲಕ ವಿದ್ಯುತ್ ಕಿಡಿಯನ್ನು ಹಾರಿಸಿ ಪರೀಕ್ಷಿಸಿದಾಗ ರಾಸಾಯನಿಕ ಸಂಯೋಗದ ಯಾವುದೇ ಲಕ್ಷಣಗಳು ಕಾಣಲಿಲ್ಲ. ಆದ್ದರಿಂದ ಆ ಅನಿಲವನ್ನು “ಆರ್ಗಾನ್’ (ನಿಷ್ಕಿಯ) ಎಂದು ಕರೆಯಲಾಯಿತು. ಆದೊಂದು, ಸೊನ್ನೆ ಸಂಯೋಗ ಸಾಮರ್ಥ್ಯದ ಏಕಪರಮಾಣು ಧಾತು ಎಂದು ತಿಳಿಯಲಾಯಿತು.
ಆರ್ಗಾನ್ ಅನ್ವೇಷಣೆ ನಡೆದದ್ದು 1894ರಲ್ಲಿ. ದಶಕಗಳ ಹಿಂದೆ, ಫ್ರೆಂಚ್ ಖಗೋಳಶಾಸ್ತ್ರಜ್ಞ ಪಿಯರೆ ಜಾನ್ಸನ್ ಸಂಪೂರ್ಣ ಸೂರ್ಯಗ್ರಹಣದ ಸೌರವರ್ಣಪಟಲದಲ್ಲಿ “ಹೀಲಿಯಂ’ (ಹಿಲಿಯೋಸ್ ಸೂರ್ಯ) ಎಂಬ ಹೊಸ ಧಾತುವನ್ನು ಗುರುತಿಸಿದ್ದರು. ಇದೀಗ, ಕ್ಲೀವೈಟ್ ಎಂಬ ಯುರೇನಿಯಮ್ ಅದಿರಿನಿಂದ ಪಡೆದ ಅನಿಲದ ರೋಹಿತದಲ್ಲೂ ಅದೇ ಗೆರೆಗಳು ಕಂಡುಬಂದುದರಿಂದ, ಭೂಮಿಯ ಮೇಲಿನ ಖನಿಜಗಳಲ್ಲಿ ಹೀಲಿಯಂ ಇರುವಿಕೆಯನ್ನು ರ್ಯಾಮ್ಸೆ ದೃಢ ಪಡಿಸಿದಂತಾಯಿತು. ಅದರ ಪರಮಾಣು ರಾಶಿಯನ್ನು ಗಣನೆಗೆ ತೆಗೆದುಕೊಂಡು ಸೊನ್ನೆ ಗುಂಪಿನ ಮೊದಲ ಸ್ಥಾನವನ್ನು ಹೀಲಿಯಂಗೆ ನೀಡಲಾಯಿತು.
1969ರಲ್ಲಿ ಮೆಂಡಲೀವ್ ಪ್ರಕಟಿಸಿದ ಆವರ್ತ ಕೋಷ್ಟಕದ ಮಾರ್ಗದರ್ಶನದ ಮೇರೆಗೆ ಸೊನ್ನೆ ಗುಂಪಿಗೆ ಸರಿಹೊಂದುವ ಮಿಕ್ಕುಳಿದ ಸದಸ್ಯರುಗಳಿಗಾಗಿ ರ್ಯಾಮ್ಸೆ ತನ್ನ ಸಹವರ್ತಿ ಟ್ರಾವಸ್ ರ ಜತೆ ಹುಡುಕಾಟವನ್ನು ಮುಂದವರಿಸಿದರು. ಅವುಗಳು ವಾಯುಮಂಡಲದ ಗಾಳಿಯಲ್ಲಿ ಆರ್ಗಾನ್‌ನೊಂದಿಗೆ ಸೇರಿಕೊಂಡಿರಬಾರದೇಕೆ? ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿದ ಆರ್ಗಾನ್‌ನ್ನು ಅಂಶಿಕ ಆಸವನಿಕ್ಕೊಳಪಡಿಸಿ, “ನಿಯೋನ್’ (ಹೊಸದು), “ಕ್ರಿಪಾrನ್’ (ಅವಿತುಕೊಂಡ), ಮತ್ತು “ಕ್ಸೀನಾನ್’ (ಆಗಂತುಕ) ಜಡಾನಿಲಗಳನ್ನು ಬೇರ್ಪಡಿಸಿಯೇ ಬಿಟ್ಟರು. ರೇಡಿಯಮ್ ಧಾತುವಿನ ವಿಕಿರಣಶೀಲತೆಯಿಂದ ವಿಕಿರಣಶೀಲ ಅನಿಲ ಉತ್ಪತ್ತಿಯಾಗುವುದೆಂದು ಜರ್ಮನ್ ಕೆಮಿಸ್ಟ್ ಡಾರ್ನ್ ಹಿಂದೆಯೇ ತಿಳಿಸಿದ್ದರೂ, ಅದೊಂದು ಜಡಾನಿಲವೆಂದು ದೃಢಪಡಿಸಿದ್ದು ರ್ಯಾಮ್ಸೆ. ಆ ಅನಿಲವನ್ನು “ರೇಡಾನ್’ ಎಂದು ಕರೆಯಲಾಯಿತು.
ನೋಬಲ್ ಅನಿಲಗಳನ್ನು ಸೊನ್ನೆಗುಂಪಿನ ಧಾತುಗಳೆಂದು ಮೆಂಡಲೀವ್ ಕೋಷ್ಟಕದ ತುದಿಗೆ ವರ್ಗಾಯಿಸಲಾಯಿತು. ಸರ್ ರ್ಯಾಮ್ಸೆಗೆ ರಸಾಯನ ವಿಜ್ಞಾನದಲ್ಲಿ ಮತ್ತು ಲಾರ್ಡ್ ರ್ಯಾಲೆಗೆ ಭೌತಶಾಸ್ತ್ರದಲ್ಲಿ 1904ರ ನೊಬೆಲ್ ಪ್ರಶಸ್ತಿಗಳನ್ನು ನೀಡಲಾಯಿತು. 2005ರಲ್ಲಿ ರಷ್ಯನ್ ವಿಜ್ಞಾನಿಗಳಿಂದ ಕೃತಕವಾಗಿ ತಯಾರಿಸಲಾದ 118ನೇ ಧಾತು ಒಗೇನಿಸನ್ ((Og) ಸೇರಿ, ಎಲ್ಲ ನೋಬಲ್ ಅನಿಲಗಳು ಆಧುನಿಕ ಆವರ್ತಕೋಷ್ಟಕದ 18ನೇ ಕಲಮಿನಲ್ಲಿ ಸ್ಥಾನವನ್ನು ಪಡೆದಿವೆ.
ನೋಬಲ್ ಅನಿಲಗಳ ಎಲೆಕ್ಟ್ರಾನ್ ಹೊರಕವಚವು ಅಗಮ್ಯವೆಂಬ ಮಿಥ್ಯೆ ಕಳಚಿದ್ದು!
ಜಡ ಅನಿಲದ ಪರಮಾಣುವಿನ ಅತ್ಯಂತ ಹೊರ ಕವಚದ ಎಲೆಕ್ಟ್ರಾನ್ ಸರಣಿಯ ವಿಶೇಷ ಸ್ಥಿರತೆಯಿಂದಾಗಿ ಅದು ಎಲೆಕ್ಟ್ರಾನ್‌ಗಳನ್ನು ಬಿಟ್ಟುಕೊಡಲು, ಸ್ವೀಕರಿಸಲು ಅಥವಾ ಜತೆಯಾಗಲು, ಅಂದರೆ ರಾಸಾಯನಿಕ ಕ್ರಿಯೆಯಲ್ಲಿ ತೊಡಗಲು ಅಸಮರ್ಥವಾಗಿದೆ ಎಂದು ತಿಳಿಯಲಾಯಿತು. ಈ ಜಡಅನಿಲಗಳ ಸಮಸ್ಯೆಗೆ ಅತ್ಯಂತ ಆಶ್ಚರ್ಯಕರ ಪರಿಹಾರವನ್ನು ಕಂಡುಹಿಡಿದದ್ದು, ಬ್ರಿಟಿಷ್ ಸಂಜಾತ ಕೆನಡಾದ ರಸಾಯನ ವಿಜ್ಞಾನಿ ನೀಲ್ ಬಾರ್ಟ್‌ಲೆಟ್, 1962ರಲ್ಲಿ. ಪರಮಾಣುವಿನ ಗಾತ್ರ ಹೆಚ್ಚಿದ ಹಾಗೆ ಅದರ ನ್ಯೂಕ್ಲಿಯಸ್‌ಗೂ ಹೊರ ಕವಚದ ಎಲೆಕ್ಟ್ರಾನ್‌ಗಳಿಗೂ ಆಕರ್ಷಣೆ ಕಡಿಮೆಯಾಗುತ್ತದೆ. ಆದ್ದರಿಂದ ಅಧಿಕ ಗಾತ್ರದ ಕ್ಸಿನಾನ್‌ನ್ನು ಪ್ರಯೋಗಕ್ಕೆ ಒಳಪಡಿಸಲಾಯಿತು. ಪ್ಲಾಟಿನಂ ಹೆಕ್ಸಾಫ್ಲೂರೈಡ್ ((PtF6), ಅಣ್ವಿಕ ಆಕ್ಸಿಜನನ್ನು ಕೂಡಾ ಆಕ್ಸಿಡೈಸ್ ಮಾಡಿ ಆಕ್ಸಿಜನ್ ಹೆಕ್ಸಾಫ್ಲೋರೋಪ್ಲಾಟಿನೇಟ್ (O2PtF6) ಉತ್ಪತ್ತಿ ಮಾಡಬಲ್ಲದು ಎಂದು ಬಾರ್ಟ್‌ಲೆಟ್ ತನ್ನ ಸಂಶೋಧನೆಯಿಂದ ಕಂಡುಕೊಡಿದ್ದರು.
ಅಣ್ವಿಕ ಆಕ್ಸಿಜನ್ ಮತ್ತು ಕ್ಸಿನಾನ್‌ಗಳ ಅಯಾನಿಕರಣ ಶಕ್ತಿ ಸಮಾನವಾಗಿರುವುದರಿಂದ, ಪ್ಲಾಟಿನಂ ಹೆಕ್ಸಾಫ್ಲೂರೈಡ್, ಕ್ಸಿನಾನ್‌ನನ್ನೂ ಆಕ್ಸಿಡೀಕರಿಸಬಲ್ಲದು ಎಂದು ಬಾರ್ಟ್‌ಲೆಟ್ ತಾರ್ಕಿಕವಾಗಿ ತೀರ್ಮಾನಿಸಿದರು. ಪ್ರತ್ಯೇಕ ಫ್ಲಾಸ್ಕ್ ಗಳಲ್ಲಿ ಇರಿಸಲಾಗಿದ್ದ, ಪ್ಲಾಟಿನಂ ಹೆಕ್ಸಾಫ್ಲೂರೈಡ್ ಮತ್ತು ಕ್ಸಿನಾನ್, ಇವೆರಡನ್ನು ಸಂಪರ್ಕಿಸುವ ಸೀಲನ್ನು ಬಾರ್ಟ್‌ಲೆಟ್ ತೆರೆದರು. ಕಣ್ಣು ಮಿಟಿಕಿಸುವಷ್ಟರಲ್ಲಿ ಕೊಠಡಿಯ ತಾಪಮಾನದಲ್ಲಿಯೇ ಅನಿಲಗಳು ಬೆರೆತು, ಕಿತ್ತಳೆ ಹಳದಿ ಬಣ್ಣದ ಸಂಯುಕ್ತವೊಂದು ರೂಪುಗೊಂಡಿತ್ತು! ಅದರ ಅಣ್ವಿಕ ರಚನೆ, ಕ್ಸಿನಾನ್ ಹೆಕ್ಸಾಫ್ಲೂರೋಪ್ಲಾಟಿನೇಟ್ (XePtF6) ಎಂದು ರಾಶಿರೋಹಿತ ವಿಶ್ಲೇಷಣೆಯಿಂದ ದೃಢಪಟ್ಟತ್ತು. ಬಾರ್ಟ್‌ಲೆಟ್, ಕ್ಸಿನೋನ್ ಸಂಯುಕ್ತವನ್ನು ರಚಿಸಿದ್ದಾರೆ ಎಂಬ ಸುದ್ದಿಯು ವೈಜ್ಞಾನಿಕ ಜಗತ್ತನ್ನು ಬೆಚ್ಚಿ ಬೀಳಿಸಿತು.
“ಜಡ ಅನಿಲಗಳ ರಸಾಯನ ವಿಜ್ಞಾನ’ ಎಂಬ ಹೊಸ ಅಧ್ಯಾಯ ಪ್ರಾರಂಭವಾದದ್ದು ಈಗ ಇತಿಹಾಸ. ಇದೀಗ ನೂರಕ್ಕಿಂತಲೂ ಹೆಚ್ಚು ನೋಬಲ್ ಅನಿಲ(ಹೀಲಿಯಂ, ನಿಯಾನ್ ಹೊರತುಪಡಿಸಿ)ಗಳ ಸಂಯುಕ್ತಗಳು ರೂಪುಗೊಂಡಿವೆ. ಬಾರ್ಟ್‌ಲೆಟ್ ಅವರು ತಮ್ಮ ಕೊಡುಗೆಗಾಗಿ ಅನೇಕ ಪ್ರಶಸ್ತಿಗಳನ್ನು ಮತ್ತು ಫೆಲೋಶಿಪ್ ಗಳನ್ನು ಪಡೆದಿದ್ದಾರೆ. ನೋಬಲ್ ಅನಿಲಗಳ ರಸಾಯನ ವಿಜ್ಞಾನದ ಸಂಸ್ಥಾಪಕರಾಗಿ ಇತಿಹಾಸದಲ್ಲಿ ಅವರ ಸ್ಥಾನ ಖಚಿತ. ಆವರ ಸೃಜನಶೀಲತೆ, ಅಂತಃಪ್ರಜ್ಞೆ, ಕಠಿನತೆ ಮತ್ತು ಪರಿಶ್ರಮ ಮುಂದಿನ ಪೀಳಿಗೆಯನ್ನು ರಸಾಯನ ಶಾಸ್ತ್ರದ ಅಧ್ಯಯನಕ್ಕೆ ಪ್ರೇರೇಪಿಸುತ್ತದೆ.
ಡಾ. ಬಿ.ಎಸ್. ಶೇರಿಗಾರ್ ಉಡುಪಿ