ಭೋಪಾಲ್/ಜೊಹಾನ್ಸ್‌ಬರ್ಗ್: ದೇಶದಲ್ಲಿ ಮತ್ತೆ ಚೀತಾ ಸಂತತಿಯನ್ನು ಬೆಳೆಸುವ ಮಹ ದು ದ್ದೇಶ ದೊಂದಿಗೆ ನಮೀಬಿಯಾದಿಂದ ಚೀತಾಗಳನ್ನು ತರುವ ಪ್ರಕ್ರಿಯೆ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದೇ ಇವುಗಳು ಭಾರತ ಪ್ರವೇಶಿಸಲಿವೆ.
ಸೆ.17ರಂದು ಮೋದಿ ಅವರೇ 8 ಚೀತಾಗಳನ್ನು ಮಧ್ಯ ಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿರುವ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಲಿದ್ದಾರೆ.
ಸೆ. 17ರೊಳಗಾಗಿ 5 ಗಂಡು ಮತ್ತು 3 ಹೆಣ್ಣು ಚೀತಾಗಳು ನಮೀಬಿಯಾದಿಂದ ಕೆಎನ್‌ಪಿಗೆ ಬಂದು ತಲುಪುವ ನಿರೀಕ್ಷೆಯಿದೆ. ಎಲ್ಲವೂ ಅಂದು ಕೊಂಡಂತೆ ನಡೆದರೆ ತಮ್ಮ ಹುಟ್ಟುಹಬ್ಬದಂದೇ ಮೋದಿ ಅವರು “ಚೀತಾ ಮರುಪರಿಚಯ ಯೋಜನೆ’ಗೆ ಚಾಲನೆ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾದಿಂದ ಮತ್ತೆ 12 ಚೀತಾಗಳನ್ನು ಭಾರತಕ್ಕೆ ತರಲಾಗುತ್ತದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಸಿದ್ಧತೆಗಳ ಪರಿಶೀಲನೆ: ಗುರುವಾರವಷ್ಟೇ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಅನಂತರ ಮಾತನಾಡಿದ ಅವರು, ನಮೀಬಿಯಾದಿಂದ ಚೀತಾ ಗಳನ್ನು ಕೆಎನ್‌ಪಿಗೆ ಸಾಗಿಸುವಂಥದ್ದು ರಾಷ್ಟ್ರೀಯ ವಾಗಿ ಮಹತ್ವ ಪಡೆದಿರುವ ಕಾರ್ಯಕ್ರಮ ಎಂದಿದ್ದಾರೆ. ಮೊದಲಿಗೆ ಚೀತಾಗಳನ್ನು ನಮೀಬಿಯಾದಿಂದ ರಾಜಸ್ಥಾನದ ಜೈಪುರಕ್ಕೆ ತರಲಾಗುತ್ತದೆ. ಅಲ್ಲಿಂದ ಅವುಗಳನ್ನು ಕುನೋದ ಪಾಲ್ಪುರಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.
ಭಾರತಕ್ಕೆ ತರಲಾಗುವ ಚೀತಾಗಳನ್ನು ಹೇಗೆ ನಿಭಾಯಿಸಬೇಕು ಎಂದು ನಮೀಬಿಯಾದಲ್ಲೇ ಅರಣ್ಯ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. 2009ರಲ್ಲಿ ಮ.ಪ್ರ.ದ ಪನ್ನಾ ರಕ್ಷಿತಾ ರಣ್ಯದಲ್ಲಿ ಹುಲಿ ಗಳನ್ನು ಮರುಪರಿಚಯಿಸುವ ಕಾರ್ಯಕ್ರಮ ಯಶಸ್ವಿಯಾಗಿತ್ತು.
ಭಾರತದಲ್ಲಿದ್ದ ಕೊನೆಯ ಚೀತಾ 1947ರಲ್ಲಿ ಅಸುನೀಗಿತ್ತು. 1952ರಲ್ಲಿ ಚೀತಾ ಸಂತತಿಯನ್ನು “ನಾಮಾವಶೇಷಗೊಂಡ ಪ್ರಾಣಿ ಸಂತತಿ’ ಎಂದು ಘೋಷಿಸಲಾಯಿತು. ಅನಂತರ 2009ರಲ್ಲಿ “ಆಫ್ರಿಕಾ ಚೀತಾವನ್ನು ಭಾರತಕ್ಕೆ ತರುವ ಯೋಜನೆ’ಯನ್ನು ಸರಕಾರ ಹಾಕಿಕೊಂಡಿತು. ಕಳೆದ ವರ್ಷದ ನವೆಂಬರ್‌ನಲ್ಲೇ ಚೀತಾಗಳು ಬರಬೇಕಿತ್ತಾದರೂ ಕೊರೊನಾ ಹಿನ್ನೆಲೆಯಲ್ಲಿ ಯೋಜನೆ ನನೆಗುದಿಗೆ ಬಿದ್ದಿತ್ತು.