ಮಧುಗಿರಿ: ಈ ಕ್ಷೇತ್ರದ ಋಣ ನನ್ನ ಮೇಲಿದ್ದು, ಮರುಭೂಮಿಯಾಗಲು ಎಂದು ಬಿಡಲ್ಲ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಹೇಳಿದರು. ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಗುಂಡಗಲ್ಲು ಗ್ರಾಮದ ಕುಮದ್ವತಿ ನದಿಗೆ ಅಡ್ಡಲಾಗಿ 1 ಕೋಟಿ ವೆಚ್ಚದ ಸೇತುವೆ-ಚೆಕ್‌ಡ್ಯಾಂ, ಕಸಬಾ ಬಸವನಹಳ್ಳಿ ಬಳಿ 1 ಕೋಟಿ ವೆಚ್ಚದ ಚೆಕ್‌ಡ್ಯಾಂ, ಜಡೆಗೊಂಡನಹಳ್ಳಿ ಹಾಗೂ ಬನವೇನಹಳ್ಳಿ ಬಳಿ 1.5 ಕೋಟಿ ವೆಚ್ಚದ ಚೆಕ್‌ಡ್ಯಾಂ ಹಾಗೂ ಗಿರಿಯಮ್ಮನಪಾಳ್ಯದ ಬಳಿ 75 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
54 ಕೆರೆಗಳಿಗೆ ಎತ್ತಿನಹೊಳೆ ನೀರು: ಎತ್ತಿನಹೊಳೆ ಪೂರ್ಣವಾಗುವವರೆಗೆ ಮಳೆ ನೀರು ಇಂಗಲು ಚೆಕ್‌ಡ್ಯಾಂಗಳ ಅಗತ್ಯವಿದೆ. ಈಗಾಗಲೇ 20 ಕೋಟಿಗೂ ಹೆಚ್ಚಿನ ಕಾಮಗಾರಿಗೆ ಚಾಲನೆ ನೀಡಿದ್ದು, ಹಲವು ಪೂರ್ಣಗೊಂಡಿದೆ. ಈಗ ಹೆಚ್ಚುವರಿಯಾಗಿ ಮತ್ತೆ 10 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿ ನೀರಿಲ್ಲದೆ ಬೇಸಾಯ ಕಳೆಗುಂದಿದ್ದು, ಯುವಕರು ಉದ್ಯೋಗ ಅರಸಿ ಗುಳೆ ಹೋಗುತ್ತಿದ್ದಾರೆ.
ಇವರ ಸಂಕಷ್ಟದ ದಿನಗಳು ಮುಂದಿನ 2-3 ವರ್ಷದಲ್ಲಿ ಮರೆಯಾಗಲಿದ್ದು, ತಾಲೂಕಿಗೆ ಎತ್ತಿನಹೊಳೆ ನೀರು ಸುಮಾರು 54 ಕೆರೆಗಳಿಗೆ ಹರಿಯಲಿದೆ. ಇದಕ್ಕಾಗಿ ಈಗಾಗಲೇ ಸಂಬಂಧಿಸಿದ ಕೆರೆಗಳ ಅಭಿವೃದ್ಧಿಗೂ ಅಗತ್ಯ ಪ್ಯಾಕೇಜ್ ನೀಡಲು ಸರ್ಕಾರ ಘೋಷಿಸಿದ್ದು, ಇದರಿಂದ ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಾಗಲಿದೆ. ಎತ್ತಿನಹೊಳೆ ಯೋಜನೆ 20 ಸಾವಿರ ಕೋಟಿ ವೆಚ್ಚದಲ್ಲಿ 7 ಜಿಲ್ಲೆಗಳ 400ಕ್ಕೂ ಹೆಚ್ಚು ಕೆರೆಗಳಿಗೆ ನೀರು ಒದಗಿಸಿ ಲಕ್ಷಾಂತರ ಹೆಕ್ಟೇರ್ ಭೂಮಿ ಹಸಿರುಗೊಳಿಸಲಿದೆ.
ಸರ್ಕಾರ ಮುತುವರ್ಜಿ ವಹಿಸಿ ಕಾಮಗಾರಿ ವೇಗಕ್ಕೆ ಆದ್ಯತೆ ನೀಡುತ್ತಿದೆ. ಇದರಿಂದ ತಾಲೂಕಿನಲ್ಲಿಯೂ ಕಾಮಗಾರಿ ಆರಂಭವಾಗುತ್ತಿದೆ ಎಂದು ಹೇಳಿದರು. ಭೂಮಿಯ ಆಳದಲ್ಲಿ ಯೋಜನೆಯ ಪೈಪು ಹಾದು ಹೋಗಲಿದ್ದು, ಮೇಲ್ಭಾಗದಲ್ಲಿ ಬೆಳೆ ಬೆಳೆಯಬಹುದು. ಇದಕ್ಕಾಗಿ ಸರ್ಕಾರ ಅಗತ್ಯ ಪರಿಹಾರ ನೀಡುತ್ತಿದೆ. ಈ ಯೋಜನೆಗೆ ರೈತರು ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸ್ಥಳೀಯ ಮುಖಂಡ ವೆಂಕಟಾಪುರ ಗೋವಿಂದರಾಜು ಮಾತನಾಡಿ, ಕಳೆದ ಅವಧಿಯಲ್ಲೇ ಕಾಮಗಾರಿಯ ಅಗತ್ಯತೆ ಹಿಂದಿನ ಶಾಸಕರಿಗೆ ಮನವರಿಕೆ ಮಾಡಿದ್ದರೂ ಸ್ಪಂದಿಸಿರಲಿಲ್ಲ. ಆದರೆ ಹಾಲಿ ಶಾಸಕರು 1.5 ಕೋಟಿ ವೆಚ್ಚದ 2 ಚೆಕ್‌ಡ್ಯಾಂ ಮತ್ತು ಗ್ರಾಮದ ಸಂಪರ್ಕ ರಸ್ತೆ ಕಾಮಗಾರಿಗೂ ಅನುದಾನ ನೀಡಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ ಎಂದರು.
ತಹಶೀಲ್ದಾರ್ ನಂದೀಶ್, ಮುಖಂಡರಾದ ತುಂಗೋಟಿ ರಾಮಣ್ಣ, ತಾಲೂಕು ಜೆಡಿಎಸ್ ಎಸ್ಸಿ,ಎಸ್ಟಿ ಘಟಕದ ಅಧ್ಯಕ್ಷ ಗುಂಡಗಲ್ಲು ಶಿವಣ್ಣ, ತಾಪಂ ಮಾಜಿ ಅಧ್ಯಕ್ಷ ಸುನಂದಾ, ಸಣ್ಣ ನೀರಾವರಿ ಇಲಾಖೆಯ ಎಇಇ ಪ್ರಸನ್ನ ಕುಮಾರ್, ಗುತ್ತಿಗೆದಾರ ವೀರಣ್ಣ, ಸ್ಥಳೀಯ ಮುಖಂಡರಾದ ಚೌಡಪ್ಪ, ಸತೀಶ್, ಹನುಮಂತೇಗೌಡ, ಕದರಪ್ಪ, ಶಿವಲಿಂಗಯ್ಯ, ರಂಗಣ್ಣ, ಕಿತ್ತಗಳಿ ಮಂಜಣ್ಣ ಸಿದ್ದೇಶ್, ನಾಗಭೂಷಣ್, ಪಕೋಡಿ ರಂಗನಾಥ್, ಬಜ್ಜಾ ರಘು, ನರಸಪ್ಪ ಇತರರು ಇದ್ದರು.
ಎತ್ತಿನಹೊಳೆ ನೀರು ಹರಿಯುವ ಕೆರೆಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಅದಕ್ಕೆ ಜಲಸಂಗ್ರಹಾಗಾರ ಸದೃಢಗೊಳಿಸಬೇಕಿದೆ. ಅಲ್ಲದೆ ಯೋಜನೆಯ ಪೈಪುಗಳು ರೈತರ ನೆಲದ ಆಳದಲ್ಲಿ ಹಾದುಹೋಗಲಿದ್ದು, ಬೆಳೆ ಬೆಳೆಯಲು ಯಾವುದೇ ಅಡ್ಡಿ ಇರುವುದಿಲ್ಲ. ಜೊತೆಗೆ ಸೂಕ್ತ ಪರಿಹಾರ ಲಭಿಸಲಿದ್ದು, ಮಧುಗಿರಿಗೆ ಶಾಶ್ವತ ಬರಗಾಲ ತಪ್ಪಿಸಲು ಬರುತ್ತಿರುವ ಎತ್ತಿನಹೊಳೆ ಯೋಜನೆಗೆ ರೈತರು ಸಹಕಾರ ನೀಡಬೇಕು.
-ಎಂ.ವಿ.ವೀರಭದ್ರಯ್ಯ, ಶಾಸಕ