ಉಡುಪಿ: ನಗರ ಸಭೆ ವೆಟ್‌ವೆಲ್‌ನಿಂದ ಬಾವಿ ನೀರು ಹಾಳಾಗಿದೆ ಎಂಬ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು, ಸಂತ್ರಸ್ತರಿಗೆ ಉಚಿತವಾಗಿ ನಳ್ಳಿ ನೀರಿನ ಸಂಪರ್ಕ ನೀಡುವ ಅವಕಾಶ ಇದ್ದರೆ ಪರಿಶೀಲಿಸಲಾ ಗುವುದು ಎಂದು ತಿಳಿಸಿದ್ದಾರೆ.
ಮಾ. 11ರ ಉದಯವಾಣಿ ಸಂಚಿಕೆಯಲ್ಲಿ “ನಗರ ಸಭೆ ತಪ್ಪಿಗೆ ದಂಡ ಕಟ್ಟುತ್ತಿರುವ ಶ್ರೀಸಾಮಾನ್ಯ’ ಎಂಬ ಶೀರ್ಷಿಕೆಯಲ್ಲಿ ಕಿನ್ನಿಮೂಲ್ಕಿಯ ನಾಗರಿಕ ದಾಮೋದರ್ ಅವರ ಸಮಸ್ಯೆ ಪ್ರಕಟವಾಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಯವರು ಉಡುಪಿಯಲ್ಲಿ ಯುಜಿಡಿ ಸಮಸ್ಯೆ ತೀವ್ರವಾಗಿದ್ದು ಅದನ್ನು ಸರಿಪಡಿಸಬೇಕಿದೆ. ಒಂದು ದಿನದಲ್ಲಿ ಆಗುವ ಕೆಲಸವಲ್ಲ; ಇದರಿಂದ ಬಾವಿ ನೀರು ಹಾಳಾಗಿದ್ದರೆ ಸಂಬಂಧಪಟ್ಟವರಿಗೆ ಉಚಿತ ನಳ್ಳಿ ನೀರಿನ ಸಂಪರ್ಕ ಕಲ್ಪಿಸಲು ಸಾಧ್ಯವೇ ಎಂದು ಪರಿಶೀಲಿಸುವೆ ಎಂದು ತಿಳಿಸಿದ್ದಾರೆ.
ಇದೇ ವರದಿಗೆ ಪ್ರತಿಕ್ರಿಯಿಸಿರುವ ನಗರ ಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್, ಈ ಸಮಸ್ಯೆ ಕುರಿತು ಪ್ರಧಾನಿ ಕಾರ್ಯಾಲಯದಿಂದ ಬಂದಿರುವ ಪತ್ರದ ಕುರಿತು ಈಗ ನನ್ನಲ್ಲಿ ಮಾಹಿತಿ ಇಲ್ಲ. ಅಧೀನ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು. ನಿರ್ದಿಷ್ಟ ಸಮಸ್ಯೆಯನ್ನು ಗಮನಿಸಿ ಅಗತ್ಯ ಕ್ರಮಕೈಗೊಳ್ಳುವೆ ಎಂದು ತಿಳಿಸಿದ್ದಾರೆ.
ದಾಮೋದರ್ ತಮ್ಮ ಸಮಸ್ಯೆ ಕುರಿತು ಪ್ರಧಾನಿ ಕಾರ್ಯಾಲಯಕ್ಕೂಪತ್ರ ಬರೆದಿದ್ದರು. ಪ್ರಧಾನಿ ಕಾರ್ಯಾಲಯ ದಿಂದ ಆಗಿನ ಡಿಸಿ ಅವರಿಗೆ ಕ್ರಮ ಕೈಗೊಳ್ಳಲು ಆದೇಶವಾಗಿತ್ತು. ವೆಟ್‌ವೆಲ್‌ಅಸಮರ್ಪಕ ನಿರ್ವಹಣೆ ಮತ್ತು ಇಂದ್ರಾಣಿ ನದಿ ಕಲುಷಿತಗೊಂಡ ಪರಿಣಾಮ ಹತ್ತಿರದ ಪ್ರದೇಶದ ನೂರಾರು ಬಾವಿಗಳ ನೀರು ಹಾಳಾಗಿದೆ.