ಹುಣಸೂರು: ಚೆಕ್‌ಬೌನ್ಸ್ ಪ್ರಕರಣಕ್ಕೆ ಸಂಬಂಸಿದಂತೆ ಹುಣಸೂರಿನ ಶಿಕ್ಷಕರೊಬ್ಬರನ್ನು ನಗರ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿರುವ ಘಟನೆ ನಡೆದಿದೆ.
ಸೋಮನಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಚ್.ಎ.ರೇವಣ್ಣ ನ್ಯಾಯಾಂಗ ಬಂಧನಕ್ಕೊಳಗಾದವರು.
ನಗರದ ಬಾಲಕೃಷ್ಣಕಾಂಪೌಂಡ್ ಬಡಾವಣೆಯ ರವೀಶ್ ಎಂಬುವವರಿಗೆ ಶಿಕ್ಷಕ ರೇವಣ್ಣ 3 ಲಕ್ಷ ರೂ. ಹಣ ನೀಡಬೇಕಿತ್ತು. ಹಣ ವಾಪಸ್ ನೀಡಲು ಸತಾಯಿಸುತ್ತಿದ್ದರಿಂದ 2020ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ರೇವಣ್ಣ ಒಂದು ಲಕ್ಷರೂ ಮರುಪಾವತಿ ಮಾಡಿದ್ದರು. ಬಾಕಿ ಉಳಿದ ಹಣ ನೀಡಲು ಸತಾಯಿಸುತ್ತಿದ್ದರು. ಜೊತೆಗೆ ನಿಗದಿತವಾಗಿ ನ್ಯಾಯಾಲಯಕ್ಕೂ ಹಾಜರಾಗಿರಲಿಲ್ಲ.
ಇದನ್ನೂ ಓದಿ:ಹಳೆಯಂಗಡಿ: ಸೆಲೂನ್ ಮಾಲಿಕ ಆತ್ಮಹತ್ಯೆ
ಶಿಕ್ಷಕ ರೇವಣ್ಣನ ವಿರುದ್ದ ನ್ಯಾಯಾಲಯದಿಂದ ವಾರೆಂಟ್ ಜಾರಿ ಮಾಡಿದ್ದು, ನಗರ ಠಾಣೆ ಇನ್‍ಸ್ಪೆಕ್ಟರ್ ಸಿ.ವಿ.ರವಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಚಂದ್ರಪ್ಪ, ಮಂಜುನಾಥ್,ಜಗದೀಶ್ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಈ ವೇಳೆ ನ್ಯಾಯಾಧೀಶರಾದ ಶರಿನ್ ಜೆ.ಅನ್ಸಾರಿಯವರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಶಿಕ್ಷಕ ರೇವಣ್ಣ ಹಲವಾರು ಜನರಿಂದ ಚೆಕ್ ನೀಡಿ ಹಣ ಪಡೆದಿದ್ದು, ಹಿಂದೆಯೂ ಸಹ ಪ್ರಕರಣವೊಂದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದರು, ಶಿಕ್ಷಕನ ವಿರುದ್ದ ನಗರಠಾಣೆಯಲ್ಲಿ ಕೆಲವರು ದೂರು ಸಲ್ಲಿಸಿದ್ದು, ಕೆಲವು ರಾಜಿ ಮೂಲಕ ಇತ್ಯರ್ಥವಾಗಿದ್ದರೆ, ಹಲವು ಇನ್ನೂ ವಿಚಾರಣೆ ನಡೆಯಬೇಕಿದೆ ಎಂದು ತಿಳಿದುಬಂದಿದೆ.