Advertisement

ಚಾತುರ್ಮಾಸ್ಯ: ಭವ್ಯ ಶೋಭಾಯಾತ್ರೆ

09:35 AM Aug 06, 2018 | Team Udayavani |

ಕಲಬುರಗಿ: ಎರಡು ತಿಂಗಳು ಕಾಲ 23ನೇ ಚಾತುರ್ಮಾಸ್ಯ ವ್ರತವನ್ನು ಜಗದ್ಗುರು ಶ್ರೀಮಧ್ವಾಚಾರ್ಯರ ಮೂಲ
ಮಹಾಸಂಸ್ಥಾನದ 42ನೇ ಯತಿಗಳಾದ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ನಗರದಲ್ಲಿ ಕೈಗೊಳ್ಳುತ್ತಿರುವ ಅಂಗವಾಗಿ ರವಿವಾರ ಸಂಜೆ ನಗರದಲ್ಲಿ ಭವ್ಯ ಶೋಭಾಯಾತ್ರೆ ಜನ ಸಾಗರದೊಂದಿಗೆ ನಡೆಯಿತು.

Advertisement

ಚಾತುರ್ಮಾಸ್ಯದ ನಿಮಿತ್ಯ 52 ದಿನಗಳ ನಿರಂತರ ಕಾರ್ಯಕ್ರಮಗಳು ನಗರದ ಬ್ರಹ್ಮಪುರದ ಉತ್ತರಾದಿಮಠದ ನೂತನ ಕಟ್ಟಡ ಪ್ರಾಂಗಣದಲ್ಲಿ ನಡೆಯಲಿದ್ದು, ಚಾತು ರ್ಮಾಸ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರವಿವಾರ ನಗರಕ್ಕೆ ಆಗಮಿಸಿದ ಶ್ರೀ ಸತ್ಯಪ್ರಮೋದ ತೀರ್ಥರ ಕರಕಮಲ ಸಂಜಾತ, ವೈರಾಗ್ಯದ ಸಾಕಾರ ಮೂರ್ತಿ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ಭವ್ಯ ಶೋಭಾಯಾತ್ರೆ ಜಗತ್‌ ವೃತ್ತದಿಂದ ಭಕ್ತರ ಜೈಘೋಷಗಳೊಂದಿಗೆ ಮುಖ್ಯ ರಸ್ತೆ ಮೂಲಕ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದವರೆಗೆ ಸಂಭ್ರಮದಿಂದ ನಡೆಯಿತು. ತದನಂತರ ನೂತನ ವಿದ್ಯಾಲಯ ಸಂಸ್ಥೆಯ ಶ್ರೀ ಸತ್ಯಪ್ರಮೋದ ತೀರ್ಥ ಸಭಾ ಮಂಟಪಕ್ಕೆ ತೆರಳಿತು. 

1989ರಲ್ಲಿ ಸತ್ಯ ಪ್ರಮೋದತೀರ್ಥರು ನಗರದಲ್ಲಿ ನಾಲ್ಕು ತಿಂಗಳು ಚಾತುರ್ಮಾಸ್ಯ ಕೈಗೊಂಡಿದ್ದರು. ಬರೊಬ್ಬರಿ 29 ವರ್ಷಗಳ ನಂತರ ಈಗ ಚಾತುರ್ಮಾಸ್ಯವನ್ನು ಎರಡು ತಿಂಗಳವರೆಗೆ ನಡೆಯುತ್ತಿರುವುದರಿಂದ ಮಹಾನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಇದಕ್ಕೆ ಶೋಭಾಯಾತ್ರೆಯಲ್ಲಿ  ಪಾಲ್ಗೊಂಡ ಭಕ್ತ ಸಮೂಹಕ್ಕೆ ಸಾಕ್ಷಿಯಾಗಿತ್ತು.

ಅಲಂಕೃತ ರಥದಲ್ಲಿ ಕುಳಿತ ಶ್ರೀಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಶ್ರೀಗಳು ವಿರಾಜಮಾನರಾಗಿ ದಾರಿಯುದ್ದಕ್ಕೂ ಭಕ್ತರನ್ನು ಆಶೀರ್ವದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಶೋಭಾಯಾತ್ರೆಗೆ ಅಲಂಕೃತ ಕುದುರೆಗಳು, ಒಂಟೆಗಳು, ವಟುಗಳು ನೋಡುಗರ ಗಮನ ಸೆಳೆದವಲ್ಲದೇ ಪುಣೆಯ ನಾದಬ್ರಹ್ಮ ಕಲಾ ತಂಡದ ಕಲಾವಿದರ ವಾದ್ಯ ನುಡಿತ ಆಕರ್ಷಕವಾಗಿತ್ತು. ಚಿಕ್ಕ ಮಕ್ಕಳು ದಶವಾತಾರ ಮತ್ತು ದಾಸರ ವೇಷಧರಿಸಿ ಗಮನ ಸೆಳೆದರು.
 
ಹೈದ್ರಾಬಾದ ಕರ್ನಾಟಕ ಭಾಗವಲ್ಲದೇ ಇತರ ಕಡೆಗಳಿಂದ ಆಗಮಿಸಿದ್ದ ಭಜನಾ ಮಂಡಳಿಗಳ ಸದಸ್ಯೆಯರು
ಹರಿನಾಮ ಸಂಕೀರ್ತನೆ ಮಾಡುತ್ತ ಸಾಗಿದರು. ಯಾತ್ರೆಯುದ್ದಕ್ಕೂ ಭಕ್ತರು ಪಟಾಕಿ ಸಿಡಿಸಿದರು.

ಚಾತುರ್ಮಾಸ್ಯ ಸೇವಾ ಸಮಿತಿಯ ಕಾರ್ಯದರ್ಶಿ ರಾಮಾಚಾರ್ಯ ಘಂಟಿ, ವಿನೋದಾಚಾರ್ಯ ಗಲಗಲಿ,
ಪಂಡಿತ ವಿದ್ಯಾಧೀಶಾಚಾರ್ಯ ಗುತ್ತಲ, ಮಠದ ದಿವಾನರಾದ ಶಶಿ ಆಚಾರ್ಯ, ವಿದ್ಯಾಸಿಂಹಾಚಾರ್ಯ
ಮಾಹುಲಿ, ರಾಮಾಚಾರ್ಯ ಅವಧಾನಿ, ವೆಂಕಣ್ಣಾಚಾರ್ಯ ಮಳಖೇಡ, ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ
ಚಂದ್ರಕಾಂತ ದೇಶಮುಖ, ಮಾಜಿ ಅಧ್ಯಕ್ಷ ಭೀಮಸೇನರಾವ ಮಾಡ್ಯಾಳಕರ್‌ ಹಾಗೂ ಪ್ರಮುಖ ಗಣ್ಯರು ಪಾಲ್ಗೊಂಡಿದ್ದರು. ಚಾತುರ್ಮಾಸ್ಯದ ನಿಮಿತ್ಯ 52 ದಿನಗಳ ನಿರಂತರ ಕಾರ್ಯಕ್ರಮಗಳು ನಗರದ ಬ್ರಹ್ಮಪುರದ ಉತ್ತರಾದಿಮಠದ ನೂತನ ಕಟ್ಟಡ ಪ್ರಾಂಗಣದಲ್ಲಿ ಜರುಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next