Advertisement

ರಿಲ್ಯಾಕ್ಸ್‌ ಮೂಡ್‌ಗೆ ಜಾರಿದ ನಾಯಕರು

11:20 PM May 11, 2023 | Team Udayavani |

ಬೆಂಗಳೂರು: ಕಳೆದ ಮೂರು ತಿಂಗಳಿನಿಂದ ಚುನಾವಣೆ ಬಿಸಿಯಲ್ಲಿ “ಬ್ಯುಸಿ”ಯಾಗಿದ್ದ ವಿವಿಧ ಪಕ್ಷಗಳ ನಾಯಕರು, ಮತದಾನದ ಮರುದಿನ ಅಂದರೆ ಗುರುವಾರ ರಿಲ್ಯಾಕ್ಸ್‌ ಆಗಿದ್ದರು.

Advertisement

ಕುಟುಂಬದ ಸದಸ್ಯರು, ಆತ್ಮೀಯರೊಂದಿಗೆ ಹರಟಿದರು. ಹತ್ತಿರದ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಕ್ಷೇತ್ರದ ಅಚ್ಚುಮೆಚ್ಚಿನ ಹೊಟೇಲ್‌ಗ‌ಳಿಗೆ ತೆರಳಿ ಕಾಫಿ-ತಿಂಡಿ ಸವಿದರು. ಸ್ನೇಹಿತರೊಂದಿಗೆ ಬೋಟಿಂಗ್‌ ಆಡಿದರು. ಮತದಾನೋತ್ತರ ಕ್ಷೇತ್ರದ ಟ್ರೆಂಡ್‌ ಬಗ್ಗೆ ಮಾಹಿತಿ ಪಡೆದರು. ಕೆಲವರು ಕಣ್ತುಂಬ ನಿದ್ದೆ ಮಾಡಿ ತಡವಾಗಿ ಎದ್ದರು. ಮತ್ತೆ ಸಂಜೆಯಾಗುತ್ತಿದ್ದಂತೆ ನಿಧಾನವಾಗಿ ಎಂದಿನಂತೆ ರಾಜಕೀಯದ ಹಳಿಗೆ ಮರಳಿದರು.

ಸತತ ಮೂರು ತಿಂಗಳು ಬಿಸಿಲಿನ ಧಗೆಯನ್ನೂ ಲೆಕ್ಕಿಸದೆ ಚುನಾವಣ ಪ್ರಚಾರ ನಡೆಸಿ ಮತದಾರರನ್ನು ಸೆಳೆಯುವ ಇನ್ನಿಲ್ಲದ ಕಸರತ್ತು ನಡೆಸಿದ್ದರು. ರಾಜ್ಯ ನಾಯಕರಂತೂ ಕಾಲಿಗೆ ಚಕ್ರ ಕಟ್ಟಿಕೊಂಡು ಊರೂರು ತಿರುಗಿದ್ದರು. ಹಗಲು-ರಾತ್ರಿ ಪ್ರಯಾಣ, ಪ್ರಚಾರ, ತಂತ್ರ-ಪ್ರತಿತಂತ್ರಗಳು, ರಾಷ್ಟ್ರೀಯ ನಾಯಕರೊಂದಿಗೆ ಚರ್ಚೆ, ಸಾರ್ವಜನಿಕ ಸಭೆಗಳು ಹೀಗೆ ಒಂದಿಲ್ಲೊಂದು ಒತ್ತಡದಲ್ಲಿದ್ದರು. ಬುಧವಾರ ಮತದಾನ ಮುಗಿಯುತ್ತಿದ್ದಂತೆ ಆ ಎಲ್ಲ ಒತ್ತಡಕ್ಕೆ ಅಲ್ಪವಿರಾಮ ಕೊಟ್ಟು, ರಿಲ್ಯಾಕ್ಸ್‌ ಮೂಡ್‌ಗೆ ಜಾರಿದರು.
ಬೋಟಿಂಗ್‌ ಮಾಡಿದ ಸಿದ್ದು

ಪ್ರಮುಖ ನಾಯಕರ ಪೈಕಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸವದತ್ತಿಯ ಎಲ್ಲಮನ ಗುಡ್ಡಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪತ್ನಿ ಚನ್ನಮ್ಮ ಬೊಮ್ಮಾಯಿ, ಸಚಿವ ಸಿ.ಸಿ. ಪಾಟೀಲ್‌ ಜತೆಗಿದ್ದರು. ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್‌.ಡಿ. ಕೋಟೆಯ ಕಬಿನಿ ಹಿನ್ನೀರಿನಲ್ಲಿ ಬೋಟಿಂಗ್‌ ಮಾಡಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಹೊತ್ತು ಸುತ್ತಾಡಿ ವಾಪಸಾದರು. ಈ ವೇಳೆ ಅವರಿಗೆ ಮಾಜಿ ಸಚಿವ ಡಾ| ಎಚ್‌.ಸಿ. ಮಹದೇವಪ್ಪ, ಶಾಸಕ ಅನಿಲ ಚಿಕ್ಕಮಾದು ಮತ್ತಿತರರು ಸಾಥ್‌ ನೀಡಿದರು. ಅನಂತರ ಸಿದ್ದರಾಮಯ್ಯ ಬೆಂಗಳೂರಿಗೆ ಹಿಂತಿರುಗಿದರು.

ತಾಯಿಯ ಆಶೀರ್ವಾದ ಪಡೆದ ಡಿಕೆಶಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇರ್‌ ಕಟ್‌ ಮಾಡಿಸಿಕೊಂಡು ಕನಕಪುರದ ಕೆಎನ್‌ಎಸ್‌ ವೃತ್ತದ ವಾಸು ಹೋಟೆಲ್‌ನಲ್ಲಿ ಇಡ್ಲಿ ಸವಿದರು. ಅನಂತರ ಕೋಡಿಹಳ್ಳಿ ನಿವಾಸಕ್ಕೆ ತೆರಳಿ ತಾಯಿ ಗೌರಮ್ಮ ಅವರ ಆಶೀರ್ವಾದ ಪಡೆದರು. ಈ ಮಧ್ಯೆ ಸ್ಥಳೀಯ ಮುಖಂಡರೊಂದಿಗೆ ಚುನಾವಣೆ ಬಗ್ಗೆ ಚರ್ಚೆ ನಡೆಸಿದರು. ಇನ್ನು ಗೋಕಾಕ್‌ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಮಾರ್ಕಂಡೇಯ ನದಿ ಪಕ್ಕದಲ್ಲಿರುವ ಯೋಗಿಕೊಳ್ಳದ ಬಳಿ ಉಪಾಹಾರ ಸವಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸಲೀಂ ಅಹಮ್ಮದ್‌, ಸಚಿವ ಆರ್‌. ಅಶೋಕ್‌ ತಮ್ಮ ಬೆಂಗಳೂರು ನಿವಾಸಗಳಲ್ಲಿ ಕುಟುಂಬದ ಸದಸ್ಯರು, ಆತ್ಮೀಯರೊಂದಿಗೆ ಕಾಲಕಳೆದರು. ಸಭೆ, ಸಮಾರಂಭಗಳು ಇದಾವುದೂ ಇರಲಿಲ್ಲ. ಇದರಿಂದ ಬೆಂಬಲಿಗರು ಮತ್ತು ಕಾರ್ಯಕರ್ತರು ಕೂಡ ರಜೆ ಮೂಡ್‌ನ‌ಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next