Advertisement

ಇನ್ನೂ ದುರಸ್ತಿಯಾಗದ ಚಾರ್ಮಾಡಿ ಘಾಟ್‌

06:40 AM Jun 14, 2018 | |

ಬೆಂಗಳೂರು: ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಹಲವೆಡೆ ಭೂಕುಸಿತಗಳು ಸಂಭವಿಸಿವೆ.
ಭಾರೀ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ಶೃಂಗೇರಿ ತಾಲೂಕುಗಳ ಶಾಲೆಗಳಿಗೆ ಗುರುವಾರವೂ ರಜೆ ಘೋಷಿಸಲಾಗಿದೆ.

Advertisement

ಚಾರ್ಮಾಡಿ ಘಾಟಿಯಲ್ಲಿ ಬುಧವಾರ ಇಡೀ ದಿನ ರಸ್ತೆಯಲ್ಲಿ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆದಿದ್ದು, ವಾಹನ ಸಂಚಾರವನ್ನು ಸಂಪೂರ್ಣ ನಿಷೇ ಧಿಸಲಾಗಿತ್ತು. ಈ ಮಧ್ಯೆ, ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ರಾಜ್ಯದ ಲ್ಲಿಯೇ ಅಧಿಕ, 23 ಸೆಂ. ಮೀ. ಮಳೆ ಸುರಿಯಿತು.

ರಾಜಧಾನಿ ಬೆಂಗಳೂರಿನ ಕೆಲವೆಡೆ ಬುಧವಾರ ಮಧ್ಯಾಹ್ನದ ನಂತರ ಮಳೆಯಾಯಿತು. ಈ ಮಧ್ಯೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹೇಮಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಮಳೆಯಿಂದಾಗಿ ಬಣಕಲ್‌ ಸಮೀಪದ ಬಂಕೇನಹಳ್ಳಿ ಗ್ರಾಮದಲ್ಲಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯ ಅಕ್ಕ
ಪಕ್ಕದ ಮಣ್ಣು ಕುಸಿಯುತ್ತಿದೆ. ಉದುಸೆ ಗ್ರಾಮದಲ್ಲಿ ಹೇಮಾವತಿ ನದಿ ನೀರು ಅಕ್ಕ ಪಕ್ಕದ ಜಮೀನುಗಳಿಗೆ
ನುಗ್ಗಿದ್ದು, ಲಕ್ಷಾಂತರ ರೂ.ಮೌಲ್ಯದ ಭತ್ತ, ಅಡಕೆ, ಶುಂಠಿ ಹಾಗೂ ಕಾಫಿ ಬೆಳೆಗೆ ಹಾನಿಯಾಗಿದೆ.

ನರಸಿಂಹರಾಜಪುರ ತಾಲೂಕಿನ ಶೆಟ್ಟಿಕೊಪ್ಪ ನೇರ್ಲೆಕೊಪ್ಪ ರಸ್ತೆಯ ಸೇತುವೆ ಮೇಲೆ ನೀರು ಹರಿದು ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ಕೊಪ್ಪ ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿ ಭಾರೀ ಗಾತ್ರದ ಮರವೊಂದು ರಸ್ತೆಯ ಮೇಲೆ ಬಿದ್ದಿದ್ದರಿಂದ ಅಲ್ಲಿಯೂ ಕೆಲ ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನರಸಿಂಹರಾಜಪುರ ತಾಲೂಕಿನಲ್ಲಿ ಬುಧವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಕೊಪ್ಪ ಮತ್ತು ಶೃಂಗೇರಿ ತಾಲೂಕುಗಳಲ್ಲಿ ಬುಧವಾರ ಮತ್ತು ಗುರುವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

Advertisement

ಶಿವಮೊಗ್ಗ ಜಿಲ್ಲೆಯಲ್ಲಿಯೂ ಮಳೆಯಾಗುತ್ತಿದ್ದು, ಆನಂದಪುರದಲ್ಲಿ ಗಾಳಿ-ಮಳೆಯಿಂದ ಬೃಹತ್‌ ಅರಳಿ ಮರವೊಂದು ಮಂಗಳವಾರ ರಾತ್ರಿ 2 ಮನೆಗಳ ಮೇಲೆ ಬಿದ್ದು ಐವರು ಗಾಯಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಜೋಗಿನಮಠದ ಬಳಿ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206ರಲ್ಲಿನ ರಸ್ತೆ ಪಕ್ಕದ ಗುಡ್ಡ ಕುಸಿದಿದ್ದು, ಬುಧವಾರ ನಸುಕಿನ ಜಾವ ಕೆಲ ಹೊತ್ತು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.

ಹಾಸನ ಜಿಲ್ಲೆಯಲ್ಲಿ ಮಳೆ ಬೀಳುತ್ತಿದ್ದು, ಹೇಮಾವತಿ, ಯಗಚಿ ನದಿಯ ಒಳ ಹರಿವು ದಾಖಲೆಯ ಪ್ರಮಾಣದಲ್ಲಿದೆ. ಜಲಾನಯನ ಪ್ರದೇಶದಲ್ಲಿ ಇತ್ತೀಚಿಗೆ ಸುರಿಯುತ್ತಿರುವ ಮಳೆಯಿಂದಾಗಿ ಯಗಚಿ ಜಲಾಶಯದ ನೀರಿನ ಮಟ್ಟದಲ್ಲಿ 2 ಅಡಿ ಹೆಚ್ಚಾಗಿದೆ. ಹೇಮಾವತಿ ಜಲಾಶಯಕ್ಕೆ 37946 ಕ್ಯೂಸೆಕ್‌ ಒಳ ಹರಿವಿದ್ದು, ಜಲಾಶಯದ ನೀರಿನ ಮಟ್ಟ ಒಂದೇ ದಿನ 8.5 ಅಡಿಗಳಿಗೆ ಏರಿದೆ.

ಬದಲಿ ಮಾರ್ಗವೂ ಅಪಾಯಕಾರಿ ಸುಳ್ಯ: ಚಾರ್ಮಾಡಿ ಘಾಟಿ ಗುಡ್ಡ ಕುಸಿದು ಸಂಚಾರ ನಿರ್ಬಂಧದ ಬೆನ್ನಲ್ಲೆ, ಬದಲಿ ಮಾರ್ಗಗಳಲ್ಲಿ ಒಂದಾದ ಮಂಗಳೂರು-ಸಂಪಾಜೆ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿಯಲು ಬಾಯ್ದೆರೆದು ನಿಂತಿದೆ.

ಚಾರ್ಮಾಡಿ ಘಟನೆ ಹಿನ್ನೆಲೆಯಲ್ಲಿ ಉದಯವಾಣಿ ವತಿಯಿಂದ ಸಂಪಾಜೆ-ಮಡಿಕೇರಿ ರಸ್ತೆಯನ್ನು ಪರಿಶೀಲಿಸಿದ ಸಂದರ್ಭ ಇಂತಹ ಹಲವು ಅಪಾಯಕಾರಿ ಸ್ಥಳಗಳು ಕಂಡು ಬಂದಿವೆ. ವಾಹನ ಓಡಾಟ ಸಂಖ್ಯೆ ಹೆಚ್ಚಾಗಿರುವುದಲ್ಲದೆ ಕೊಡಗಿನಾದ್ಯಂತ ಭಾರಿ ಮಳೆ ಆಗುತ್ತಿರುವುದರಿಂದ ಹಲವು ಕಡೆಗಳಲ್ಲಿ ಮಣ್ಣು ಶಿಥಿಲಗೊಂಡು ಬೃಹತ್‌ ಗಾತ್ರದ ಮರಗಳು ರಸ್ತೆ ಕಡೆ ವಾಲಿವೆ. ಮಡಿಕೇರಿ ಪೇಟೆಗೆ ಕೆಲ ಕಿ.ಮೀ. ಸನಿಹದಲ್ಲಿರುವ ಮದೆನಾಡು ಬಳಿ ಪ್ರತಿ ಬಾರಿ ಗುಡ್ಡ ಕುಸಿತ ಆಗುತ್ತಿದ್ದು, ಅಲ್ಲಿ ತಿರುವೊಂದರ ಬಳಿ ರಕ್ಷಣಾ ಗೋಡೆ ನಿರ್ಮಿಸಲಾಗಿದೆ. ಅದು ಕೂಡ ಬಿರುಕು ಬಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next