ಮುಂಡಾಜೆ: ಬೆಳ್ತಂಗಡಿ ತಾ|ನ ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ ಮಳೆಗಾಲದಲ್ಲಿ ಮೃತ್ಯುಂಜಯ ನದಿಯ ಭೀಕರ ಪ್ರವಾಹಕ್ಕೆ ಕೊಚ್ಚಿ ಹೋದ ರಸ್ತೆ, ಸೇತುವೆಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವಿವಾರ ಕಾಮಗಾರಿಗಳ ವೀಕ್ಷಣೆ ನಡೆಸಿದರು.
ಸಣ್ಣನೀರಾವರಿ, ಲೋಕೋಪಯೋಗಿ ಇಲಾಖೆಗಳ ವಿವಿಧ ಯೋಜನೆಗಳಡಿ ಚಾರ್ಮಾಡಿ ಗ್ರಾಮದ ಅನಾರು, ಮುಗುಳಿತ್ತಡ್ಕ, ಬರಮೇಲು ಫರ್ಲಾಣಿಗೆ 2 ಕೋ.ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ, ಫರ್ಲಾಣಿ ಸೇತುವೆ ದುರಸ್ತಿ, ತಡೆಗೋಡೆ ನಿರ್ಮಾಣ, 1.60 ಕೋ.ರೂ.ಗಳ ಕಾಂಕ್ರೀಟ್ ಕಾಮಗಾರಿ, ತೋಟತ್ತಾಡಿ ಗ್ರಾಮದ ಶಿಶು ಮಂದಿರದಿಂದ ಪಾದೇ ಬೈಲಿಗೆ ಸಂಪರ್ಕ ಕಲ್ಪಿಸುವ 50 ಲ.ರೂ. ವೆಚ್ಚದ ಸೇತುವೆ ನಿರ್ಮಾಣ ವೀಕ್ಷಿಸಿದರು.
ಬಳಿಕ ಅಧಿಕಾರಿಗಳೊಂದಿಗೆ ಮಾತನಾಡಿದ ಶಾಸಕರು ಮಳೆಗಾಲ ಆರಂಭಕ್ಕೆ ಮುನ್ನ ಗುಣಮಟ್ಟದ ಕಾಮಗಾರಿ ಜತೆಗೆ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು. ಇದೇ ವೇಳೆ ಕ್ಯಾನ್ಸರ್‌ನಿಂದ ಬಳಲುತ್ತಿರುವ ಕಕ್ಕಿಂಜೆಯ ಪದ್ಮನಾಭ ಅವರ ಮನೆಗೆ ತೆರಳಿ ಧನ ಸಹಾಯ ನೀಡಿದರು.
ಧನ ಸಹಾಯ ವಿತರಣೆ
ವಿಶ್ವ ಹಿಂದೂ ಪರಿಷತ್, ಬಜರಂಗದಳ, ದಾನಿಗಳ ಸಹಕಾರದಲ್ಲಿ ಚಾರ್ಮಾಡಿಯ ಪಾಂಡಿಕಲ್ಲು ಎಂಬಲ್ಲಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಮನೆ ನಿರ್ಮಾಣವಾಗುತ್ತಿದ್ದು, ಅಲ್ಲಿಗೂ ತೆರಳಿದ ಶಾಸಕರು ಊರ ಯುವಕರ ಪರಿಶ್ರಮಕ್ಕೆ ಮೆಚ್ಚುಗೆ ಸೂಚಿಸಿ ಧನ ಸಹಾಯ ನೀಡಿದರು.
ಚಾರ್ಮಾಡಿ ತಾ.ಪಂ.ಸದಸ್ಯ ಕೊರಗಪ್ಪ ಗೌಡ, ಚಾರ್ಮಾಡಿ ಗ್ರಾ.ಪಂ.ಅಧ್ಯಕ್ಷೆ ಶೈಲಜಾ, ಗ್ರಾ.ಪಂ.ಸದಸ್ಯರು, ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ ಸಮಿತಿ ಅಧ್ಯಕ್ಷ ದಿನೇಶ್ ಹೊಸಮಠ, ಮುಂಡಾಜೆ ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ಪ್ರಕಾಶ ನಾರಾಯಣ ರಾವ್, ಅಶೋಕ್ ಜೈನ್, ಕಮಲಾಕ್ಷ ಪೂಜಾರಿ, ನಿತಿನ್ ರಾವ್, ದಿವಿನ್, ಲೋಕೇಶ್ ಉಪಸ್ಥಿತರಿದ್ದರು.