ಹುಬ್ಬಳ್ಳಿ: ಸಿದ್ಧಾರೂಢಸ್ವಾಮಿ ಮಹಾರಾಜ ಕೀ ಜೈ, ಹರ ಹರ ಮಹಾದೇವ ಎಂಬ ಜಯ ಘೋಷಗಳೊಂದಿಗೆ ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿಯ 115ನೇ ರಥೋತ್ಸವ ಶನಿವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಸಿದ್ಧಾರೂಢಸ್ವಾಮಿ ರಥೋತ್ಸವ ಸಂಜೆ 6:10 ಗಂಟೆಗೆ ಶ್ರೀಮಠದಿಂದ ಆರಂಭಗೊಂಡು ಮುಖ್ಯ ದ್ವಾರದವರೆಗೆ ತೆರಳಿ ಮರಳಿ ಶ್ರೀಮಠದ ಸ್ವಸ್ಥಾನಕ್ಕೆ ಆಗಮಿಸಿತು.
ದಾರಿಯುದ್ದಕ್ಕೂ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು. ರಥಕ್ಕೆ ಉತ್ತತ್ತಿ, ಲಿಂಬೆಹಣ್ಣು, ಬಾಳೆಹಣ್ಣು, ಮೋಸಂಬಿ, ಕಿತ್ತಲೆ ಹಣ್ಣು ಎಸೆದು ಸದ್ಗುರುಗಳಿಗೆ ನಮನ ಸಲ್ಲಿಸಿದರು. ಓಂ ನಮಃ ಶಿವಾಯ, ಸಿದ್ಧಾರೂಢ ಮಹಾರಾಜ ಕೀ ಜೈ, ಗುರುನಾಥಾರೂಢ ಮಹಾರಾಜ ಕೀ ಜೈ, ಹರ ಹರ ಮಹಾದೇವ…! ಎಂಬ ಘೋಷಣೆಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆ ಸೇರಿದಂತೆ ನೆರೆಯ ಮಹಾರಾಷ್ಟ್ರ, ಗೋವಾ ಇನ್ನಿತರ ರಾಜ್ಯಗಳ ಸಹಸ್ರಾರು ಭಕ್ತರು ಆಗಮಿಸಿ ಉಭಯ ಶ್ರೀಗಳ ದರ್ಶನ ಪಡೆದು ಪುನೀತರಾದರು. ಜಾತ್ರಾ ಮಹೋತ್ಸವ ಅಂಗವಾಗಿ ಸಿದ್ಧಾರೂಢಸ್ವಾಮಿ ಹಾಗೂ ಗುರುನಾಥರೂಢ ಸ್ವಾಮೀಜಿ ಗದ್ದುಗೆಗೆ ಬೆಳಗ್ಗೆಯಿಂದಲೇ ಪೂಜೆ, ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಬೆಳಗ್ಗೆ ಶ್ರೀಮಠದಿಂದ ಪಲ್ಲಕ್ಕಿ ಉತ್ಸವವು ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಂಜೆ 6 ಸುಮಾರಿಗೆ ಶ್ರೀಮಠ ತಲುಪಿದ ನಂತರ ರಥೋತ್ಸವ ಆರಂಭಗೊಂಡಿತು.
ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಶ್ರೀಮಠದ ಟ್ರಸ್ಟ್ ಕಮಿಟಿ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಹಲವೆಡೆ ಪ್ರಸಾದ, ಮಜ್ಜಿಗೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಿಗೆ ಜಾತ್ರಾ ಮಹೋತ್ಸವದಲ್ಲಿ ತೊಂದರೆಯಾಗಬಾರದು ಎನ್ನುವ ದೃಷ್ಟಿಯಿಂದ ಕೈಲಾಸ ಮಂಟಪದ ಮುಂಭಾಗದಲ್ಲಿ ಎಲ್‌ಇಡಿ ಸ್ಕ್ರೀನ್ ಅಳವಡಿಸುವ ಮೂಲಕ ದರ್ಶನದ ಸೌಲಭ್ಯ ಕಲ್ಪಿಸಲಾಗಿತ್ತು.
ರಥೋತ್ಸವಕ್ಕೆ ಚಾಲನೆ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಧೀಶ ಹಾಗೂ ಶ್ರೀಮಠದ ಮುಖ್ಯ ಆಡಳಿತಾಧಿಕಾರಿ ವಿ.ಶ್ರೀಶಾನಂದ ಹಾಗೂ ಹಲವು ಮಠಾಧೀಶರು ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀಮಠದ ಚೇರ್ಮನ್ ಧರಣೇಂದ್ರ ಜವಳಿ, ವೈಸ್ ಚೇರ್ಮನ್ ಜ್ಯೋತಿ ಸಾಲಿಮಠ, ಗೌರವ ಕಾರ್ಯದರ್ಶಿ ಗೀತಾ ಎಸ್.ಜಿ.,ಧರ್ಮದರ್ಶಿಗಳಾದ ಬಸವರಾಜ ಕಲ್ಯಾಣಶೆಟ್ಟರ, ನಾರಾಯಣ ನಿರಂಜನ, ನಾರಾಯಣಸಾ ಮೇಹರವಾಡೆ, ನಾರಾಯಣಪ್ರಸಾದ ಪಾಠಕ,ಯಲ್ಲಪ್ಪ ದೊಡ್ಡಮನಿ, ಮಹೇಂದ್ರ ಸಿಂ , ಶಾಮಾನಂದ ಪೂಜೇರಿ ಮೊದಲಾದವರು ಇದ್ದರು.
ಮಠದ ಸುತ್ತಲೂ ಪ್ರಸಾದ ವಿತರಣೆ: ಸಿದ್ಧಾರೂಢಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ರಾಜ್ಯ ಹಾಗೂ ನೆರೆಯ ರಾಜ್ಯದಿಂದ ಆಗಮಿಸಿದ್ದ ಜನರಿಗೆ ನೂರಾರು ಭಕ್ತರು ಮಠದ ಸುತ್ತಮುತ್ತ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಆಗಮಿಸಿದ ಸಾವಿರಾರು ಭಕ್ತರಿಗೆ ಪಲಾವ್, ಉಪ್ಪಿಟ್ಟು, ಸಿರಾ, ಗೋಧಿ ಹುಗ್ಗಿ, ಅವಲಕ್ಕಿ, ಶರಬತ್, ಮಜ್ಜಗಿ ಕೊಡಲಾಯಿತು. ಮಠದ ಸುತ್ತಲಿರುವ ನಿವಾಸಿಗಳು ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ವಿತರಿಸಿ ಸದ್ಗುರುವಿನ ಕೃಪೆ ಪಾತ್ರರಾದರು.
ಉಚಿತ ಆಟೋ ಸೇವೆ: ಸದ್ಗುರು ಶ್ರೀ ಸಿದ್ಧಾರೂಢರ ಜಾತ್ರಾ ಮಹೋತ್ಸವಕ್ಕೆ ಪರ ಊರುಗಳಿಂದ ಆಗಮಿಸುವ ಭಕ್ತರಿಗೆ ಕೆಲ ಆಟೋಗಳ ಮಾಲಿಕರು ರೈಲ್ವೆ ನಿಲ್ದಾಣ, ಹಳೇ ಬಸ್ ನಿಲ್ದಾಣ ಹಾಗೂ ಅಕ್ಷಯ ಪಾರ್ಕ್‌ನಿಂದ ಶ್ರೀಮಠದವರೆಗೆ ಉಚಿತ ಸಂಚಾರ ಸೇವೆ ಕಲ್ಪಿಸಿದ್ದರು. ಜಾತ್ರೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತಲ್ಲದೆ, ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು.