Advertisement

ಚನ್ನರಾಯಪಟ್ಟಣ: ಗೌರಿ, ಗಣೇಶೋತ್ಸವಕ್ಕೆ ಸಕಲ ಸಿದ್ಧತೆ

04:41 PM Sep 09, 2021 | Team Udayavani |

ಚನ್ನರಾಯಪಟ್ಟಣ: ಗೌರಿ-ಗಣೇಶ ಹಬ್ಬ ಹಿನ್ನೆಲೆಯಲ್ಲಿ ಪಟ್ಟಣದ ರಸ್ತೆ ಬದಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸಾವಿರಾರು ವಿಘ್ನ ವಿನಾಯಕ ಮೂರ್ತಿ ಮಾರಾಟಕ್ಕೆ ಕಲಾವಿದರು ಮುಂದಾಗಿದ್ದಾರೆ.

Advertisement

ಆತಂಕದಲ್ಲಿ ಇದ್ದ ಕಲಾವಿದರು:6 ತಿಂಗಳಿನಿಂದ ಜೇಡಿಮಣ್ಣಿನ ಮೂರ್ತಿ ತಯಾರು ಮಾಡುವ ತಾಲೂಕಿನ ಹಲವು ಮಂದಿ ಕಲಾವಿದರಿಗೆ ಸಾಕಷ್ಟು ಆತಂಕ ಉಂಟಾಗಿತ್ತು. ಸಕಾರ ಷರತ್ತುಬದ್ಧ ಹಬ್ಬ ಆಚರಣೆಗೆ ಅನುಮತಿ ನೀಡಿದ್ದರಿಂದ ಕಲಾವಿದರು ನಿಟ್ಟುಸಿರು ಬಿಟ್ಟಿದ್ದು ತಾವು ತಯಾರಿಸಿದ ಮೂರ್ತಿಯನ್ನು ಮಾರುಕಟ್ಟೆಗೆ ರವಾನೆ ಮಾಡಿದ್ಧಾರೆ.

ಪರಿಸರ ಸ್ನೇಹಿಗೆ ಹೆಚ್ಚು ಆಸಕ್ತಿ: ತಾಲೂಕಿನ ವಿವಿಧ ಬಡಾವಣೆಯಲ್ಲಿ ಕಲಾವಿದರು ಜೇಡಿಮಣ್ಣಿನ ಗಣೇಶ ಮೂರ್ತಿಯನ್ನು ತಯಾರಿಸಿದ್ದು ಭರ್ಜರಿ ಮಾರಾಟ ನಡೆಯುತ್ತಿದೆ. ಕಳೆದೆಲ್ಲಾ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಪರಿಸರ ಸ್ನೇಹಿ ಜೇಡಿಮಣ್ಣಿನ ಗಣಪತಿ ಮೂರ್ತಿ ತಯಾರಿಕೆ ಹೆಚ್ಚಾಗಿದೆ. ಅಲ್ಲದೇ, ಖರೀದಿಯೂ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

ವಿವಿಧ ಜಿಲ್ಲೆಗೆ ರವಾನೆ: ತಾಲೂಕುಕೇಂದ್ರದಲ್ಲಿ ಜೇಡಿ ಮಣ್ಣಿನಿಂದತಯಾರಾಗಿರುವ ವಿನಾಯಕ ಮೂರ್ತಿ ತಾಲೂಕಿನ ಆರು ಹೋಬಳಿ ಕೇಂದ್ರ ಗಳಲ್ಲಿ ಮಾತ್ರ ಮಾರಾಟವಾಗದೆ, ತಿಪಟೂರು, ಕೃಷ್ಣರಾಜಪೇಟೆ, ನಾಗಮಂಗಲ, ತುಮಕೂರು, ಮೈಸೂರು, ಮಂಡ್ಯ ಶಿವಮೊಗ್ಗ, ಬೆಳಗಾವಿ, ಹಾಸನ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ತಾಲೂಕು ಹಾಗೂ ಜಿಲ್ಲಾಕೇಂದ್ರಕ್ಕೆ ಈಗಾಗಲೇ ರವಾನೆ ಆಗಿವೆ.

ಇದನ್ನೂ ಓದಿ:ಪರವಾನಿಗೆ ಪಡೆದರೂ ಗಣಪತಿ ಪೆಂಡಾಲ್ ಕಿತ್ತ ವ್ಯವಸ್ಥೆ ವಿರುದ್ಧ ಹಿಂದೂಪರ ಸಂಘಟನೆಗಳ ಪ್ರತಿಭಟನೆ

Advertisement

100 ರೂ.ನಿಂದ ಸಾವಿರ ರೂ.ವರೆಗೆ:ಕನಿಷ್ಠ100 ರೂ.ಗಳಿಂದ ಸಾವಿರ ರೂ. ಮೌಲ್ಯದ ವಿಘ್ನೇಶ್ವರ ಮೂರ್ತಿಗಳು ದೊರೆಯುತ್ತಿವೆ. ಗ್ರಾಹಕರು ಇಂತಹದ್ದೇ ವಿನ್ಯಾಸದ ಮೂರ್ತಿಗಾಗಿ ಮುಂಚಿತವಾಗಿ ಬೇಡಿಕೆ ಸಲ್ಲಿಸಿದ್ದು ಅವರಿಗೆ ಮೂರ್ತಿ ಸಿದ್ಧಪಡಿಸಿ ನೀಡಿದ್ದಾರೆ. ಮನೆಯಲ್ಲಿ ಪ್ರತಿಷ್ಠಾಪಿಸುವ ಮೂರ್ತಿಗಳಿಗೆ ದರಕಡಿಮೆಯಾಗಿದ್ದರೆ, ಸಾರ್ವಜನಿಕ ಮೂರ್ತಿಗಳ ಗಾತ್ರ ಮತ್ತು ವಿನ್ಯಾಸ ವಿಶಿಷ್ಟವಾಗಿ ಇರುವುದರಿಂದ ಸ್ವಲ್ಪ ಮಟ್ಟಿಗೆ ದರವೂ ಹೆಚ್ಚಾಗಿದೆ.

ರಾಜ್ಯ ಸರ್ಕಾರ ಕೋವಿಡ್‌ ಸೋಂಕು ಹಿನ್ನೆಲೆಯಲ್ಲಿ ಗಣೇಶ ಚತುರ್ಥಿಗೆ ಅವಕಾಶ ನೀಡುವುದಿಲ್ಲ ಎಂದುಕೊಂಡಿದ್ದೆವು. ಹಲವು ಮಾರ್ಗಸೂಚಿ ವಿಧಿಸಿ ವಿಘ್ನೇಶ್ವರ ಪ್ರತಿಷ್ಠಾಪನೆಗೆ ಅವಕಾಶ ನೀಡಿದೆ.ಕಳೆದ ಮೂರು ದಿನದಿಂದ ಗ್ರಾಹಕರು ಆಗಮಿಸಿ ಮೂರ್ತಿಖರೀದಿಸುತ್ತಿದ್ದಾರೆ.
-ರಮೇಶ್‌, ವಿಘ್ನೇಶ್ವರ ಮಾಡೆಲ್‌
ವರ್ಕ್ಸ್ ಮಾಲೀಕ

ಚನ್ನರಾಯಪಟ್ಟಣದಲ್ಲಿ ವಾರ್ಡ್‌ಗೆ ಒಂದು, ತಾಲೂಕಿನಲ್ಲಿ ಗ್ರಾಮಕ್ಕೆ ಒಂದರಂತೆ ಸಾರ್ವಜನಿಕರು ವಿಘ್ನೇಶ್ವರ ಮೂರ್ತಿ ಪ್ರತಿಷ್ಠಾಪನೆ, ವಿಶೇಷ ಪೂಜೆಗೆ ಅವಕಾಶಕಲ್ಪಿಸಲಾಗಿದೆ. ಮೂರ್ತಿ ಪ್ರತಿಷ್ಠಾಪಿಸಿದ 3-5 ದಿನದ ಒಳಗೆ ಮೂರ್ತಿ ವಿಸರ್ಜನೆ ಮಾಡಬೇಕು. ಸಾಂಸ್ಕೃತಿ ಕಾರ್ಯಕ್ರಮ ನಿಷೇಧಿಸಲಾಗಿದೆ.
– ಜೆ.ಬಿ.ಮಾರುತಿ, ತಹಶೀಲ್ದಾರ್‌

ಗಣ್ಯಾತಿ ಗಣ್ಯರ ಮನೆಗೆ ಗಣಪನ ಮೂರ್ತಿ
ಬೆಂಗಳೂರಿನ ಪದ್ಮನಾಭನಗರದಲ್ಲಿನ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ, ನಾಗಮಂಗಲತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠಕ್ಕೆ, ತುರುವೇಕರೆ ತಾಲೂಕಿನ ನೋಣನಕೆರೆ ಕಾಡುಸಿದ್ದೇಶ್ವರ ಮಠ, ಕುಂದೂರು ಮಹಾ ಸಂಸ್ಥಾನ ಮಠ, ಕಬ್ಬಳಿ ಕ್ಷೇತ್ರ, ತಾಲೂಕಿನಲ್ಲಿರುವ ರಂಭಾಪುರಿ ಶಾಖಮಠ, ಮಾಜಿ ಮುಖ್ಯ ಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮಂತ್ರಿ ಎಚ್‌.ಡಿ.ರೇವಣ್ಣ ಅವರ ಮನೆಗೂ ಚನ್ನರಾಯಪಟ್ಟಣತಾಲೂಕಿನ ಕಲಾವಿದರು ತಯಾರಿಸಿರುವ ಜೇಡಿಮಣ್ಣಿನ ಗಣೇಶ ಮೂರ್ತಿಗಳು ಪ್ರತಿ ವರ್ಷದಂತೆಈ ಬಾರಿಯೂ
ರವಾನೆಯಾಗಿದೆ.

– ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next