Advertisement
“ಚಾಣಾಕ್ಷ’ ಎನ್ನುವ ಹೆಸರಲ್ಲೇ ಒಂದು ಫೋರ್ಸ್ ಇದೆ. ಆ ಫೋರ್ಸ್ ನಾಯಕನಲ್ಲೂ ಇದೆ. ಇಲ್ಲಿ ನಾಯಕ ಕಳ್ಳನಾ, ರೌಡಿನಾ ಅಥವಾ, ಕೊಲೆಗಾರನಾ? ಈ ಅಂಶಗಳೊಂದಿಗೆ ಸಾಗುವ ಚಿತ್ರದಲ್ಲಿ ಸಾಕಷ್ಟು ತಿರುವುಗಳಿವೆ. ಅಂತೆಯೇ ಜೋರಾದ ಹೊಡೆದಾಟ, ಬಡಿದಾಟವೂ ಇದೆ. ಅವೆಲ್ಲಾ ಯಾಕೆ ಎಂಬ ಪ್ರಶ್ನೆ ಎದುರಾದರೆ, ಒಮ್ಮೆ “ಚಾಣಾಕ್ಷ’ನ ಚಾತುರ್ಯವನ್ನು ನೋಡಲು ಅಡ್ಡಿಯಿಲ್ಲ. ಕಥೆ ತುಂಬಾ ಸರಳ. ಆದರೆ, ಅದನ್ನು ನಿರೂಪಿಸಿರುವ ರೀತಿ ಕೊಂಚ ಭಿನ್ನ ಎನ್ನಬಹುದಷ್ಟೇ.
Related Articles
Advertisement
ಕೆಲವು ಕಡೆ ಚಿತ್ರಕಥೆಯಲ್ಲಿ ಹಿಡಿತ ತಪ್ಪಿಹೋಗಿದ್ದರೂ, ಅಲ್ಲಲ್ಲಿ ಕಾಣುವ ಚಿಟಿಕೆಯಷ್ಟು ಹಾಸ್ಯ ದೃಶ್ಯಗಳು ಮತ್ತು ಡೈಲಾಗ್‌ಗಳು ಆ ತಪ್ಪನ್ನು ಮರೆ ಮಾಚಿಸುತ್ತವೆ. ಇನ್ನೂ ಕೆಲವೆಡೆ ಸಣ್ಣ ಪುಟ್ಟ ಗೊಂದಲಗಳು ಹಲವು ಪ್ರಶ್ನೆಗಳಿಗೆ ಕಾರಣವಾಗುತ್ತವೆ. ಆದರೂ, ಜಬರ್‌ದಸ್ತ್ ಆಗಿರುವ ಆ್ಯಕ್ಷನ್ ದೃಶ್ಯಗಳು ಅವೆಲ್ಲವನ್ನು ಪಕ್ಕಕ್ಕೆ ಸರಿಸುತ್ತವೆ. ರಿಸ್ಕೀ ಸ್ಟಂಟ್ಸ್ ಹೇರಳವಾಗಿದ್ದರೂ, ಫ್ಯಾಮಿಲಿ ಸೆಂಟಿಮೆಂಟ್‌ಗೂ ಜಾಗವಿದೆ, ಎಮೋಷನಲ್ ಜೊತೆಗೆ ಬೊಗಸೆಯಷ್ಟು ಪ್ರೀತಿಯ ಅಂಶಕ್ಕೂ ಒತ್ತು ಕೊಡಲಾಗಿದೆ.
ಮುಖ್ಯವಾಗಿ ಇಲ್ಲೊಂದು ಸಂದೇಶವಿದೆ. ಅದನ್ನು ತಿಳಿದುಕೊಳ್ಳುವ ಸಣ್ಣ ಕುತೂಹಲವಿದ್ದರೆ, “ಚಾಣಾಕ್ಷ’ನ ಚಾಕಚಕ್ಯತೆ ಹೇಗೆಲ್ಲಾ ಇದೆ ಎಂಬುದನ್ನು ತಿಳಿಯಬಹುದು. ಸೂರ್ಯ ಒಬ್ಬ ಅನಾಥ. ಚಿಕ್ಕಂದಿನಲ್ಲೇ ಒಬ್ಬ ಡಾನ್ ಪ್ರಾಣ ಉಳಿಸಿರುತ್ತಾನೆ. ಆಗಿನಿಂದ ಡಾನ್ ಮನೆಯ ಹಿರಿ ಮಗನಾಗಿ ಬೆಳೆಯುತ್ತಾನೆ. ಸಣ್ಣ ವಯಸ್ಸಲ್ಲೇ ಯಾವುದಕ್ಕೂ ಹೆದರದ ಸೂರ್ಯ, ದೊಡ್ಡವನಾದ ಮೇಲೂ ಹಾಗೇ ಬದುಕುತ್ತಿರುತ್ತಾನೆ.
ಒಂದು ದಿನ ರಾಜಕಾರಣಿಯೊಬ್ಬನ 50 ಕೋಟಿ ರುಪಾಯಿ ಎಗರಿಸುವ ಸಂಚು ರೂಪಿಸಿ, ಅದರಲ್ಲಿ ಯಶಸ್ಸು ಪಡೆಯುತ್ತಾನೆ. ಆಮೇಲೆ ನಡೆಯೋದೆಲ್ಲಾ ರೋಚಕ ಸನ್ನಿವೇಶಗಳು. ಆ ಹಣ ಎಗರಿಸಿಕೊಂಡು ಸಿಟಿಯಿಂದ ಹಳ್ಳಿಯೊಂದಕ್ಕೆ ಕಾಲಿಡುವ ನಾಯಕ, ಅಲ್ಲೊಂದು ತುಂಬು ಕುಟುಂಬದ ಮನೆಗೆ ಕಾಲಿಡುತ್ತಾನೆ. ಅಲ್ಲೊಂದು ವಿಶೇಷವೂ ಇದೆ.
ಕೊನೆಗೆ ಅವರ ಮನೆಯಲ್ಲೊಬ್ಬ ಸದಸ್ಯನಾಗಿ ಅಲ್ಲಿನ ರೈತರ ಸಮಸ್ಯೆಗೆ ನೆರವಾಗುತ್ತಾನೆ, ಊರ ರೌಡಿ ಕಪಿಮುಷ್ಠಿಯಲ್ಲಿರುವ ಜನರನ್ನೂ ರಕ್ಷಿಸುತ್ತಾನೆ. 50 ಕೋಟಿ ಎಗರಿಸಿಕೊಂಡು ಬಂದ ಸೂರ್ಯನನ್ನು ಹುಡುಕಿಕೊಂಡು ಪೊಲೀಸರು ಆ ಹಳ್ಳಿಗೆ ಬರುತ್ತಾರೆ. ಸೂರ್ಯ ಕೆಟ್ಟವನು ಅನ್ನೋದು ಎಲ್ಲರಿಗೂ ಗೊತ್ತಾಗುತ್ತೆ. ಆಮೇಲೆ ಏನಾಗುತ್ತೆ ಅನ್ನುವುದೇ ಸಸ್ಪೆನ್ಸ್. ಧರ್ಮ ಕೀರ್ತಿರಾಜ್ ಇಲ್ಲಿ ಎಂದಿಗಿಂತ ಹೆಚ್ಚು ಇಷ್ಟವಾಗುವುದೇ ಅವರ ಆ್ಯಕ್ಷನ್‌ನಿಂದ.
ಕ್ಯಾಡ್‌ಬರೀಸ್ ಫೀಲ್‌ನಿಂದ ಆಚೆ ಬಂದಿದ್ದಾರೆ ಎಂಬುದಕ್ಕೆ ಅವರ ಫೈಟ್ಸ್, ಮಾಸ್ ಡೈಲಾಗ್ ಸಾಕ್ಷಿಯಾಗಿದೆ. ಕ್ಲಾಸ್ ಜೊತೆಗೆ ಮಾಸ್‌ಗೂ ಜೈ ಎನ್ನುವಂತೆ ಚೇಸಿಂಗ್, ಆ್ಯಕ್ಷನ್‌ನಲ್ಲಿ ರಿಸ್ಕ್ ತಗೊಂಡಿದ್ದಾರೆ. ಇನ್ನು, ನಾಯಕಿ ಸುಶ್ಮಿತಾ ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದಾರೆ. ವಿನೋದ್ ಆಳ್ವ, ಶೋಭರಾಜ್, ಸುನೀಲ್, ಪಾತ್ರಕ್ಕೆ ಬೇಕಾದ್ದೆಲ್ಲ ಕೊಟ್ಟಿದ್ದಾರೆ. ಅಭಿಮಾನ್ ರಾಯ್ ಸಂಗೀತದಲ್ಲಿ ಒಂದು ಹಾಡು ಪರವಾಗಿಲ್ಲ. ಹಿನ್ನೆಲೆ ಸಂಗೀತಕ್ಕೆ ಇನ್ನಷ್ಟು ಧಮ್ ಇರಬೇಕಿತ್ತು. ಸಿ.ಎಚ್.ರಮೇಶ್ ಕ್ಯಾಮೆರಾ ಕೈಚಳಕದಲ್ಲಿ “ಚಾಣಾಕ್ಷ’ ಕಲರ್‌ಫುಲ್ ಆಗಿದ್ದಾನೆ.
ಚಿತ್ರ: ಚಾಣಾಕ್ಷನಿರ್ಮಾಣ: ನಳಿನ ಜೆ.ವೆಂಕಟೇಶ್‌ಮೂರ್ತಿ
ನಿರ್ದೇಶನ: ಮಹೇಶ್ ಚಿನ್ಮಯ್
ತಾರಾಗಣ: ಧರ್ಮಕೀರ್ತಿರಾಜ್, ವಿನೋದ್ ಆಳ್ವ, ಸುಶ್ಮಿತಾಗೌಡ, ಅರ್ಚನಗೌಡ, ಶೋಭರಾಜ್, ಚಿತ್ರಾಶೆಣೈ, “ಕುರಿ’ ಸುನೀಲ್ ಇತರರು. * ವಿಭ