ಬೆಂಗಳೂರು: ರಾಜಧಾನಿ ಜನರಿಗೆ ಕಾವೇರಿ ನೀರು ಸರಬರಾಜು ಮಾಡುವ ಹೊಣೆ ಹೊತ್ತಿರುವ ಬೆಂಗಳೂರು ಜಲಮಂಡಳಿ, ತನ್ನ ಜಾಲತಾಣವನ್ನು (ವೆಬ್‌ಸೈಟ್) ಮತ್ತಷ್ಟು ಗ್ರಾಹಕ ಸ್ನೇಹಿಯಾಗುವಂತೆ ಮರು ವಿನ್ಯಾಸಗೊಳಿಸಿದೆ. ಈ ಮೂಲಕ ಜನರಿಗೆ ಸುಲಭ ಹಾಗೂ ಶೀಘ್ರ ಮಾಹಿತಿ ದೊರೆಯುವಂತೆ ಕ್ರಮ ಕೈಗೊಂಡಿದೆ.
ಬೆಂಗಳೂರು ಜಲಮಂಡಳಿ ಹಾಗೂ ಒಳಚರಂಡಿ ಮಂಡಳಿಯು ತನ್ನ ವೆಬ್‌ಸೈಟ್‌ನ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಿಸಿ, ಪ್ರಸಕ್ತ ಸಂದರ್ಭಕ್ಕೆ ಅನುಗುಣವಾಗಿ ರೂಪಿಸಿದೆ. ನೀರು ಬರುವ ಸಮಯ, ದೂರು ನೀಡುವುದು, ಕಿಯೋಸ್ಕ್ಗಳು, ದೂರುಗಳ ಪ್ರಗತಿ ಸೇರಿ ಎಲ್ಲ ಮಾಹಿತಿ ಸುಲಭವಾಗಿ ದೊರೆಯುವಂತಿದೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದ್ದರೂ ಜಲಮಂಡಳಿ ವೆಬ್‌ಸೈಟ್ ಗ್ರಾಹಕರಿಗೆ ಅನುಕೂಲವಾಗುವಂತೆ ಇಲ್ಲ ಎಂಬ ಕುರಿತು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದರು. ಜತೆಗೆ ಕೆಲ ಗ್ರಾಹಕರು ವೆಬ್‌ಸೈಟ್ ಮರು ವಿನ್ಯಾಸಗೊಳಿಸುವಂತೆ ಸಲಹೆ ನೀಡಿದ್ದರು. ಗ್ರಾಹಕರ ಸಲಹೆಗೆ ಜಲಮಂಡಳಿ ಸ್ಪಂದಿಸಿದೆ.
ಈ ಮೊದಲು ಜಲಮಂಡಳಿ ಇತಿಹಾಸ, ಯೋಜನೆಗಳು, ಅಧಿಕಾರಿಗಳ ಸಂಪರ್ಕ ಮಾಹಿತಿ, ಬಿಲ್ ಪಾವತಿಗಷ್ಟೇ ವೆಬ್‌ಸೈಟ್ ಸೀಮಿತವಾಗಿತ್ತು. ಇದೀಗ ಅನಗತ್ಯ ಹಾಗೂ ಗೊಂದಲ ಮೂಡಿಸುವ ಆಯ್ಕೆ, ತಾಂತ್ರಿಕ ಅಂಶಗಳನ್ನು ತೆಗೆದು ಗ್ರಾಹಕರಿಗೆ ಅಗತ್ಯವಾಗಿ ಬೇಕಾಗುವ ಅಂಶಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.
ಗ್ರಾಹಕ ಸ್ನೇಹಿ ವೆಬ್‌ಸೈಟ್: ಹೊಸದಾಗಿ ರೂಪಿಸಿರುವ ವೆಬ್‌ಸೈಟ್‌ನಲ್ಲಿ ಅತ್ಯಂತ ಸರಳವಾದ ಆಯ್ಕೆಗಳನ್ನು ನೀಡಲಾಗಿದೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆ ಆಯ್ಕೆಗಳಿರುವ ಕಾರಣ ಗ್ರಾಹಕರಿಗೆ ಸಮಸ್ಯೆ ಆಗುವುದಿಲ್ಲ. ಉದಾಹರಣೆಗೆ ಗ್ರಾಹಕರೊಬ್ಬರು ತಾವು ನೀಡಿದ ದೂರಿನ ಕುರಿತಾಗಿ ಮಾಹಿತಿ ತಿಳಿಯಬೇಕೆಂದರೆ, ಹೋಮ್ ಪೇಜ್ ನಲ್ಲಿರುವ ದೂರು ಐಕಾನ್ ಒತ್ತಿ ಆರ್.ಆರ್.ಸಂಖ್ಯೆ, ಸೇವಾಠಾಣೆ ಹಾಗೂ ಉಪವಿಭಾಗದ ಮಾಹಿತಿ ಆಯ್ಕೆ ಮಾಡಿದರೆ ನೀಡಿರುವ ದೂರು ಯಾವ ಹಂತದಲ್ಲಿದೆ ಎಂಬುದು ತಿಳಿಯಲಿದೆ. ಅದೇ ರೀತಿ ಹೊಸ ಸಂಪರ್ಕ, ಹತ್ತಿರದ ಕಿಯೋಸ್ಕ್ಗಳ ವಿಳಾಸ, ಹೊಸ ಕಾಮಗಾರಿಗಳು, ಅಧಿಕಾರಿಗಳ ಮಾಹಿತಿಯೊಂದಿಗೆ, ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಫೋಟೋ, ವಿಡಿಯೋಗಳೂ ಲಭ್ಯವಿವೆ.