ಗದಗ: ಮಧುಮೇಹವನ್ನು ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳಬೇಕು. ಉತ್ತಮ ಆಹಾರ ಸೇವನೆ ಹಾಗೂ ನಿಯಮಿತವಾಗಿ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಸರಕಾರದಿಂದ ದೊರೆಯುವ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾ ಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ| ಎಸ್.ಜಿ. ಸಲಗರೆ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರೈಲ್ವೆ ಹೆಲ್ತ್ ಯುನಿಟ್, ಜಿಲ್ಲಾ ಸಮೀಕ್ಷಾ ಘಟಕ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಆಶ್ರಯದಲ್ಲಿ ರೈಲ್ವೆ ಕಮ್ಯುನಿಟಿ ಹಾಲ್ ಆಯೋಜಿಸಿದ್ದ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಅಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಯೋಗಾಸನ, ಅಸಾಂಕ್ರಾಮಿಕ ರೋಗಗಳ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಸಾಂಕ್ರಾಮಿಕ ರೋಗಗಳಲ್ಲಿ ಮಧುಮೇಹ ಪ್ರಮುಖವಾಗಿದ್ದು, ನಮ್ಮ ದೇಶ ಹಾಗೂ ರಾಜ್ಯದಲ್ಲಿ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿದೆ. ಪ್ರಸ್ತುತ ನಮ್ಮ ಜೀವನ ಶೈಲಿ, ಆಹಾರ ಪದ್ಧತಿ, ದೈಹಿಕ ಚಟವಟಿಕೆ ಇಲ್ಲದೇ ಇರುವುದು, ತಂಬಾಕು ಹಾಗೂ ಮಧ್ಯಪಾನ ಸೇವನೆಯಿಂದಾಗಿ ಮಧುಮೇಹ ಕಾಯಿಲೆ ಹೆಚ್ಚುತ್ತಿದೆ. ಸಾವಯವ ಹಾಗೂ ಸಿರಿಧಾನ್ಯಗಳು, ಸೊಪ್ಪು, ತರಕಾರಿಯುಕ್ತ ಆಹಾರ ಸೇವನೆಯಿಂದ ಸಕ್ಕರೆ ಕಾಯಿಲೆಯಿಂದ ದೂರವಿರಬಹುದು ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ(ಪ್ರಭಾರ) ಡಾ| ಜಗದೀಶ ನುಚ್ಚಿನ್ ಮಾತನಾಡಿ, ವಿಶ್ವ ಮಧುಮೇಹ ದಿನಾಚರಣೆ ಈ ವರ್ಷದ ಘೋಷವಾಖ್ಯ “ಮಧುಮೇಹ ಆರೈಕೆ ಅವಕಾಶ. ಇಗಿಲ್ಲವಾದರೆ ಮತ್ತೆ ಯಾವಾಗ’ ಆಗಿದೆ. ಬಹಳಷ್ಟು ಜನರಿಗೆ ಮಧುಮೇಹದ ಬಗ್ಗೆ ಅರಿವು ಇರದಿರುವುದರಿಂದ 30 ವರ್ಷ ಮೇಲ್ಪಟ್ಟವರು ವರ್ಷದಲ್ಲಿ ಕನಿಷ್ಟ ಒಂದು ಬಾರಿ ಕಡ್ಡಾಯವಾಗಿ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆ ಮಾಡಿಸಿಕೊಳ್ಳಬೇಕು. ಇದರಿಂದ ಅಸಾಂಕ್ರಾಮಿಕ ರೋಗಗಳನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆಹಚ್ಚಿ ಮುಂದೆ ಆಗಬಹುದಾದ ತೊಂದರೆ (ತೊಡಕುಗಳನ್ನು) ತಡೆಗಟ್ಟಬಹುದು ಎಂದು ತಿಳಿಸಿದರು.
ವಿಶ್ವದಲ್ಲಿ ಒಂದು ವರ್ಷದಲ್ಲಿ ಸುಮಾರು 6 ಕೋಟಿ ಜನರು ಮರಣ ಹೊಂದುತ್ತಿದ್ದು, ಇದರಲ್ಲಿ 4 ಕೋಟಿ ಜನ ಅಸಾಂಕ್ರಾಮಿಕ ಕಾಯಿಲೆಗಳಿಂದಲೇ ಮರಣ ಹೊಂದುತ್ತಿದ್ದಾರೆ. ಅದೇ ರೀತಿ ಭಾರತದಲ್ಲಿ ಒಂದು ವರ್ಷದಲ್ಲಿ 1 ಕೋಟಿ ಮರಣ ಹೊಂದುತ್ತಿದ್ದು, ಈ ಪೈಕಿ 67 ಲಕ್ಷ ಜನ ಅಸಾಂಕ್ರಾಮಿಕ ಕಾಯಿಲೆಗಳಿಂದ ಮರಣ ಹೊಂದುತ್ತಿದ್ದಾರೆ. ನಮ್ಮ ದೇಶದಲ್ಲಿ ಒಂದು ಸಾವಿರ ಜನಸಂಖ್ಯೆಯಲ್ಲಿ ಸುಮಾರು 67 ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಭಾರತ ದೇಶವು ಈಗ ಮಧುಮೇಹದ ರಾಜಧಾನಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಅಸಾಂಕ್ರಾಮಿಕ ಕಾಯಿಲೆಗಳ ಪ್ರಾಥಮಿಕ ಹಂತದ ತಪಾಸಣೆ ಪ್ರತಿ ಗ್ರಾಮಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಒಟ್ಟು 7 ಎನ್‌ಸಿಡಿ ಕ್ಲಿನಿಕ್ ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಅಸಾಂಕ್ರಾಮಿಕ ಕಾಯಿಲೆಗಳಿಗೆ ಉಚಿತ ತಪಾಸಣೆ ಔಷಧ ವಿತರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು 2025ರೊಳಗಾಗಿ ಸುಮಾರು ಶೇ. 25ರಷ್ಟು ಅಸಾಂಕ್ರಾಮಿಕ ಕಾಯಿಲೆಗಳಿಂದ ಮರಣ ಹೊಂದುವುದನ್ನು ತಡೆಯುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ| ಮಲ್ಲಿಕಾರ್ಜುನ ಎಸ್. ಉಪ್ಪಿನ ಮಾತನಾಡಿದರು. ರೈಲ್ವೇ ಇಲಾಖೆ ವಿಭಾಗೀಯ ಮುಖ್ಯ ವೈದ್ಯಾದಿಕಾರಿ ಡಾ| ಕವಿರಾಜ ಕೊಟ್ಟೂರ, ರೈಲ್ವೆ ಸಹಾಯಕ ವಿಭಾಗೀಯ ಅಭಿಯಂತರ ಬಶೀರ ಅಡೇನ, ಆಯುಷ್ ಇಲಾಖೆಯ ಡಾ| ಅಶೋಕ ಮತ್ತಿಗಟ್ಟಿ, ಡಾ| ರಾಜೇಂದ್ರ ಬಸರೀಗಿಡದ, ಡಾ| ರವಿ ಕಡಗಾವಿ ಉಪಸ್ಥಿತರಿದ್ದರು.