Advertisement

Belthangady; ದ.ಕನ್ನಡ ಜಿಲ್ಲೆಯ ದಲಿತ ಚಳವಳಿಯ ಮುಂಚೂಣಿ ನಾಯಕ ಚಂದು ಎಲ್ ನಿಧನ

08:09 AM Jun 20, 2024 | Team Udayavani |

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಚಳವಳಿಯ ಮುಂಚೂಣಿ ನಾಯಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್ (52) ಅವರು ಅಲ್ಪ ಕಾಲದ‌ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಜೂ.19 ರಂದು ರಾತ್ರಿ ನಿಧನರಾಗಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಲಿತ ಚಳವಳಿಯನ್ನು ಕಟ್ಟಿ ಬೆಳೆಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದ ಚಂದು ಎಲ್. ಅವರು ಬೆಳ್ತಂಗಡಿ ತಾ.ಪಂ.ಉಪಾಧ್ಯಕ್ಷರಾಗಿ, ಗೇರು ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವಾರ ರಾತ್ರಿ ನಿಧನರಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನಲ್ಲಿ ಡಿ.ಸಿ. ಮನ್ನಾ ಜಮೀನಿಗಾಗಿನ ಹೋರಾಟ, ನಿಡ್ಲೆ ದೈವಸ್ಥಾನದ ಸಾರ್ವಜನಿಕ ಊಟದ ಪಂಕ್ತಿಯಿಂದ ದಲಿತ ಯುವತಿಯನ್ನು ಬಲಾತ್ಕಾರವಾಗಿ ಎಬ್ಬಿಸಿದ ಘಟನೆ ಮುಂದಿಟ್ಟು ನಡೆದ ಹೋರಾಟಗಳ ನೇತೃತ್ವವನ್ನು ವಹಿಸಿದ್ದರು. ಜತೆಗೆ ತಾಲೂಕಿನಲ್ಲಿ ಹಾಗೂ ಜಿಲ್ಲೆಯಲ್ಲಿ ನೂರಾರು ದಲಿತ, ಸಾಮಾಜಿಕ ಹೋರಾಟಗಳಿಗೆ ಮುಂಚೂಣಿ ನಾಯಕತ್ವ ವಹಿಸಿದ್ದರು.

ತಾಲೂಕಿನಲ್ಲಿ ಬಿ.ಎಸ್.ಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಚಂದು ಎಲ್. ಅವರು ವಿಧಾನಸಭಾ ಚುನಾವಣೆಗೂ ಸ್ಪರ್ಧಿಸಿದ್ದರು. ಲಾಯಿಲ ಗ್ರಾ.ಪಂ. ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ಜನತಾದಳ ಪಕ್ಷದಿಂದ ಬೆಳ್ತಂಗಡಿ ತಾ.ಪಂ. ನ ಸದಸ್ಯರಾಗಿ ಆಯ್ಕೆಯಾದ ಅವರು ತಾ.ಪಂ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರು 2013 ರಿಂದ 2018 ರ ತನಕ ಕರ್ನಾಟಕ ರಾಜ್ಯ ಸರಕಾರದ ಗೇರು ಅಭಿವೃದ್ಧಿ ನಿಗಮದ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

Advertisement

ಮಾಜಿ ಶಾಸಕ ವಸಂತ ಬಂಗೇರ ಅವರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಬಂದ ಚಂದು ಎಲ್. ಅವರು ಕಳೆದ ಎರಡು ದಶಕದಲ್ಲಿ ಕಾಂಗ್ರೆಸ್ ಪಕ್ಷದಲ್ಲಿಯೂ ಹಲವು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.

ದಲಿತ ಸಂಘರ್ಷ ಸಮಿತಿಯ ವಿವಿಧ ಪದಾಧಿಕಾರಿಗಳ ಜವಾಬ್ದಾರಿ ವಹಿಸಿದ್ದ ಅವರು ಬಳಿಕ ಮಾವಳ್ಳಿ ಶಂಕರ್ ನೇತೃತ್ವದ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ದ ಜೊತೆಗೆ ಗುರುತಿಸಿಕೊಂಡು ಬೆಳ್ತಂಗಡಿ ತಾಲೂಕು ಘಟಕದ ಸಂಚಾಲಕರಾಗಿ, ಜಿಲ್ಲಾ ಸಂಚಾಲಕರಾಗಿ, ಮೈಸೂರು ವಿಭಾಗದ ಸಂಘಟನಾ ಸಂಚಾಲಕರಾಗಿ, ಪ್ರಸ್ತುತ ರಾಜ್ಯ ಸಂಘಟನಾ ಸಂಚಾಲಕರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next