Advertisement

ಉರ್ದು ಮಾತನಾಡದ ಕಾರಣಕ್ಕೇ ಚಂದ್ರು ಕೊಲೆ: ಪುನರುಚ್ಚರಿಸಿದ ಬಿಜೆಪಿ

07:42 PM Apr 06, 2022 | Team Udayavani |

ಬೆಂಗಳೂರು: ಗೋರಿಪಾಳ್ಯದಲ್ಲಿ ಮುಸ್ಲಿಂ ಯುವಕರು ಹಿಂದೂ ಯುವಕ ಚಂದ್ರು ಹತ್ತಿರ ಉರ್ದುವಿನಲ್ಲಿ ಮಾತನಾಡಬೇಕು ಎಂದು ಬಲವಂತ ಮಾಡಿದ್ದಾರೆ, ತನಗೆ ಉರ್ದು ಬರುವುದಿಲ್ಲ ತಮಿಳು- ಕನ್ನಡ ಬರುತ್ತದೆ ಎಂದು ಆತ ಹೇಳಿದ್ದು, ಅದೇ ಕಾರಣಕ್ಕಾಗಿ ಆತನ ಹತ್ಯೆ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆಯನ್ನು ಬಿಜೆಪಿ ಪುನರುಚ್ಚರಿಸಿದೆ.

Advertisement

ಬುಧವಾರ ಬಿಜೆಪಿ ನಿಯೋಗ ಹತ್ಯೆಗೀಡಾದ ಚಂದ್ರುವಿನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ, 5 ಲಕ್ಷ ರೂ.  ಪರಿಹಾರ ನೀಡಿದೆ.

ಪೊಲೀಸ್ ಇಲಾಖೆಯವರು ತಣ್ಣಗೆ ಮಾಡಲು ನೋಡುತ್ತಾರೆ

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಚಂದ್ರು ಹತ್ಯೆ ವಿಚಾರದಲ್ಲಿ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಹತ್ಯೆಗೀಡಾದ ಚಂದ್ರು ಅವರ ಸಹೋದರ ನವೀನ್ ನಮ್ಮ ಪಕ್ಷದ ಬೂತ್ ಸಮಿತಿ ಕಾರ್ಯದರ್ಶಿ ಎಂದ ಅವರು, ಏಕಾಏಕಿ ಹತ್ಯೆ ನಡೆದಿದೆ. ಅಂಗಡಿಯವರೂ ನೆರವಿಗೆ ಬರಲಿಲ್ಲ. ಇಲ್ಲಿ ಪೂರ್ವದ್ವೇಷ ಇರಲಿಲ್ಲ, ಬೈಕ್ ತಾಗಿದ್ದನ್ನೇ ನೆಪ ಮಾಡಿ, ಕನ್ನಡ ಮತ್ತು ತಮಿಳು ಮಾತ್ರ ಬರುವುದಾಗಿ ಹೇಳಿದ ಚಂದ್ರುವನ್ನು ಉರ್ದುವಿನಲ್ಲಿ ಮಾತನಾಡಿಲ್ಲ ಎಂಬ ಕಾರಣಕ್ಕೆ ಚಾಕುವಿನಿಂದ ಚುಚ್ಚಿದ್ದಾರೆ ಎಂಬುದಾಗಿ ಮನೆಯವರು ಹೇಳುತ್ತಿದ್ದಾರೆ ಎಂದು ವಿವರಿಸಿದರು.

ಪೊಲೀಸ್ ಇಲಾಖೆಯವರು ಬಹಳಷ್ಟು ಸಾರಿ ವಾಸ್ತವಿಕ ಸಂಗತಿಗಳ ಕಡೆ ಹೋಗುವುದಕ್ಕಿಂತ ಈ ವಿಚಾರವನ್ನು ಇಲ್ಲಿಗೇ ತಣ್ಣಗೆ ಮಾಡಬೇಕೆಂದು ಯೋಚಿಸುತ್ತಾರೆ. ಅದು ತಪ್ಪೇನೂ ಅಲ್ಲ. ಆದರೆ, ಇನ್ನೊಂದು ಕಡೆ ಇಂಥ ಘಟನೆ ಮರುಕಳಿಸಬಾರದು. ಕನ್ನಡನಾಡಿನಲ್ಲಿ ಕನ್ನಡ ಮಾತನಾಡಲಿಲ್ಲ ಎಂದರೆ ಸ್ವಲ್ಪ ಯೋಚಿಸಬೇಕಾದ ವಿಷಯ. ಇಲ್ಲಿ ಉರ್ದು ಮಾತನಾಡುವುದು ಕಡ್ಡಾಯ ಎಂದು ಯಾರೂ ಹೇಳಿಲ್ಲ. ಆ ಕಾರಣಕ್ಕೆ ಸಣ್ಣ ನೆಪಕ್ಕಾಗಿ ಹತ್ಯೆ ಮಾಡಿದ್ದು ಖಂಡನೀಯ. ಆರೋಪಿಗಳು ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆ ಆಗಿದ್ದಾರೆಂಬ ಮಾಹಿತಿ ಲಭಿಸಿದೆ. ಘಟನೆಯ ಕುರಿತು ಸಮಗ್ರ ತನಿಖೆ ಅತ್ಯಗತ್ಯ ಎಂದರು.

Advertisement

ರಾತ್ರಿ 2 ಗಂಟೆಗೆ ಈ ಘಟನೆ ನಡೆದಿದೆ. ಅಲ್ಲಿ ಇದ್ದ ಯಾರೂ ಕೂಡ ಆತನ ಸಹಾಯಕ್ಕೆ ಬಾರದಿದ್ದಾಗ ತೀವ್ರ ರಕ್ತಸ್ರಾವದಿಂದ ಆತನು ನರಳಿ ನರಳಿ ಸತ್ತಿದ್ದಾನೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ತಿಳಿಸಿದ್ದಾರೆ.

ಆತನ ಜತೆಗಾರನಾದ ಸೈಮನ್ ಮೇಲೆ ಕೂಡ ದಾಳಿ ಮಾಡಲಾಗಿತ್ತು.  ಆತ ತಪ್ಪಿಸಿಕೊಂಡು ಓಡಿ ಹೋಗಿದ್ದ ಘಟನೆಯ ಅರ್ಧ ಗಂಟೆ ನಂತರ ಸೈಮನ್ ಬಂದು ನೋಡಿದಾಗ ಚಂದ್ರು ಮೃತನಾಗಿದ್ದ. ಆತನನ್ನು ಆಟೋದಲ್ಲಿ ತೆಗೆದುಕೊಂಡು ಹೋಗಿದ್ದರೂ ಪ್ರಯೋಜನವಾಗಿಲ್ಲ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ :  ಚಂದ್ರು ಕೊಲೆ : ವಿವಾದದ ಬಳಿಕ ‘ನನ್ನಿಂದ ತಪ್ಪು ಹೇಳಿಕೆ’ ಎಂದ ಆರಗ ಜ್ಞಾನೇಂದ್ರ

ಈ ನಿಯೋಗದಲ್ಲಿ, ಸಂಸದರಾದ ಪಿ.ಸಿ. ಮೋಹನ್, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಜಿ. ಮಂಜುನಾಥ್ ಅವರು ಉಪಸ್ಥಿತರಿದ್ದರು.

ಭೇಟಿ ನೀಡಿದ ಸಂದರ್ಭದಲ್ಲಿ ಮೃತನ ತಾಯಿ, ಅಣ್ಣ ಮತ್ತು ಅಜ್ಜಿ “ಉರ್ದುವಿನಲ್ಲಿ ಮಾತನಾಡಲು ಬಾರದ ಕಾರಣವೇ ಆತನ ಕೊಲೆಯಾಗಿದೆ, ಉರ್ದು ಮಾತನಾಡಲು ಬಾರದ ಕಾರಣಕ್ಕೆ ಕೊಲೆ ಮಾಡಬಹುದಾ? ನಮಗೆ ನ್ಯಾಯ ಕೊಡಿಸಿ, ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗವನ್ನು ಕೊಡಿಸಿ ಹಾಗೂ ನಮಗೆ ರಕ್ಷಣೆ ಕೊಡಿ” ಎಂದು ಮನವಿ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next