Advertisement

Chandrayaan-3; ಗಗನಯಾನದತ್ತ ತಿರುಗಿದ ವಿಜ್ಞಾನಿಗಳು

09:20 PM Jul 15, 2023 | Team Udayavani |

ಶ್ರೀಹರಿಕೋಟಾ:ಚಂದ್ರಯಾನ-3ರ ಯಶಸ್ವಿ ಉಡಾವಣೆಯ ಬಳಿಕ ಈಗ ಇಸ್ರೋದ ಗಮನ “ಗಗನಯಾನ’ದತ್ತ ನೆಟ್ಟಿದೆ. ಚಂದ್ರಯಾನ-3 ಅನ್ನು ಹೊತ್ತ ಎಲ್‌ವಿಎಂ3-ಎಂ4 ರಾಕೆಟ್‌ ಚಂದಿರನತ್ತ ಪ್ರಯಾಣ ಬೆಳೆಸಿರುವುದು ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆಗೆ ಹೊಸ ಶಕ್ತಿ ತುಂಬಿದೆ. ಇದೇ ಬಾಹ್ಯಾಕಾಶ ನೌಕೆಯನ್ನು ತನ್ನ ಮಹತ್ವಾಕಾಂಕ್ಷಿ ಗಗನಯಾನ ಯೋಜನೆಗೂ ಬಳಸಲು ಇಸ್ರೋ ಸಜ್ಜಾಗುತ್ತಿದೆ.

Advertisement

400 ಕಿ.ಮೀ.ಗಳ ಕಕ್ಷೆಗೆ ಮೂವರು ಮಾನವರನ್ನು 3 ದಿನಗಳ ಕಾಲ ಕಳುಹಿಸಿ, ನಂತರ ಅವರನ್ನು ಸುರಕ್ಷಿತವಾಗಿ ವಾಪಸ್‌ ಭೂಮಿಗೆ ಕರೆತರುವ ಗಗನಯಾನ ಯೋಜನೆಯನ್ನು ಯಶಸ್ವಿಯಾಗಿಸಲು ಈಗ ವಿಜ್ಞಾನಿಗಳು ಶ್ರಮಿಸತೊಡಗಿದ್ದಾರೆ.

ಗಗನಯಾನಕ್ಕಾಗಿ ಎಲ್‌ವಿಎಂ3 ರಾಕೆಟ್‌ ಅನ್ನು ಮರುವಿನ್ಯಾಸಗೊಳಿಸಿ, ಗಗನಯಾತ್ರಿಗಳ ಸುರಕ್ಷಿತ ಸಾಗಣೆಗೆ ಬೇಕಾದ ಅಗತ್ಯತೆಗಳನ್ನು (ಹ್ಯೂಮನ್‌ ರೇಟಿಂಗ್‌ ರಿಕ್ವಾರ್‌ಮೆಂಟ್ಸ್‌) ಪೂರೈಸಲಾಗುತ್ತದೆ. ನಂತರ ಇದನ್ನು “ಹ್ಯೂಮನ್‌ ರೇಟೆಡ್‌ ಎಲ್‌ವಿಎಂ3′ ಎಂದು ಕರೆಯಲಾಗುತ್ತದೆ. ಆಗಸ್ಟ್‌ ತಿಂಗಳ ಅಂತ್ಯದಲ್ಲಿ ಗಗನಯಾನದ ಮೊದಲ ಅಬಾರ್ಟ್‌ ಮಿಷನ್‌ ನಡೆಸಲಾಗುತ್ತದೆ. ಮುಂದಿನ ವರ್ಷಾಂತ್ಯದಲ್ಲಿ ಮಾನವರಹಿತ ಉಡಾವಣೆ ನಡೆಸಲು ಯೋಜಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.

ಭಾರತ ಮೂಲದವರಿಗೆ ಹೆಮ್ಮೆ:
ಇತ್ತ ಚಂದ್ರಯಾನ-3ರ ಉಡಾವಣೆ ಯಶಸ್ವಿಯಾಗುತ್ತಿದ್ದಂತೆ, ಅತ್ತ ಅಮೆರಿಕದಲ್ಲಿರುವ ಭಾರತೀಯ ಮೂಲದವರ ದೊಡ್ಡ ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟಪ್‌ಗಳ ಪ್ರತಿನಿಧಿಗಳು ಸಂಭ್ರಮಿಸಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿರುವುದನ್ನು ಈ ಉಡಾವಣೆಯು ಸಾಬೀತುಪಡಿಸಿದೆ ಎಂದಿದ್ದಾರೆ.

ಚಂದಿರನೆಂಬ ಕುತೂಹಲದೊಳಗೆ ಶೋಧನೆ
ಚಂದ್ರನ ಬಗ್ಗೆ ಮಾಹಿತಿ ಸಂಗ್ರಹಿಸುವುದು, ಚಂದ್ರನಲ್ಲಿ ಲಭ್ಯವಿರುವ ವಸ್ತುಗಳು ಮತ್ತು ಅವುಗಳ ಗುಣವಿಶೇಷಗಳನ್ನು ಅರಿಯುವುದು ಇಸ್ರೋದ ಉದ್ದೇಶವಾಗಿದೆ ಎಂದು ಇಸ್ರೋದ ಯುಆರ್‌ ರಾವ್‌ ಉಪಗ್ರಹ ಕೇಂದ್ರದ ನಿರ್ದೇಶಕರಾದ ಡಾ. ಶಂಕರನ್‌ ಹೇಳಿದ್ದಾರೆ.

Advertisement

“ನ್ಯೂಸ್‌ 18′ ಚಾನೆಲ್‌ಗೆ  ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಚಂದ್ರನಲ್ಲಿ ಕೆಲವು ಅಮೂಲ್ಯ ರಾಸಾಯನಿಕಗಳು ಮತ್ತು ಖನಿಜಗಳು ಇವೆ ಎಂದು ಹೇಳಲಾಗುತ್ತಿದೆ. ಅವುಗಳನ್ನು ಅನ್ವೇಷಿಸಿ, ಬಳಸಿಕೊಳ್ಳಬಹುದೇ ಎಂಬುದನ್ನು ತಿಳಿಯಬೇಕು. ಅಲ್ಲದೇ, ಇಡೀ ಜಗತ್ತೇ ಭವಿಷ್ಯದ ಅಂತರ್‌ಗ್ರಹೀಯ ಪರಿಶೋಧನೆಗೆ ಚಂದ್ರನನ್ನೇ ಆಧಾರವಾಗಿಟ್ಟುಕೊಳ್ಳಬಹುದೇ? ಚಂದ್ರನ ಮೇಲ್ಮೈನಲ್ಲೇ ಕೆಲವೊಂದು ಪ್ರಾಪೆಲ್ಲೆಂಟ್‌ಗಳು ಮತ್ತು ಇತರೆ ಉಪಕರಣಗಳನ್ನು ಸಿದ್ಧಪಡಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next