ಬೆಂಗಳೂರು: ಚಂದ್ರಯಾನ 2ರ ವೈಫಲ್ಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಇಸ್ರೋ ಚಂದ್ರಯಾನ -3ರ ವಿಕ್ರಮ್ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಚಂದ್ರನ ಮೇಲೆ ಇಳಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಈ ಸಂಬಂಧ ಮಾಹಿತಿ ನೀಡಿರುವ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್, ಒಂದು ವೇಳೆ ನೌಕೆಯ ಎಲ್ಲ ಸೆನ್ಸರ್‌ಗಳು ಮತ್ತು ಅದರ ಎರಡು ಎಂಜಿನ್‌ಗಳು ವಿಫಲವಾದರೂ ವಿಕ್ರಮ್ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿಸುತ್ತೇವೆ ಎಂದಿದ್ದಾರೆ.
ಲ್ಯಾಂಡರ್ ವಿಕ್ರಮ್ ಅನ್ನು ವೈಫಲ್ಯದ ನಡುವೆಯೂ ಕಾರ್ಯನಿರ್ವಹಿಸುವಂತೆ ರೂಪಿಸಿದ್ದೇವೆ. ಒಂದು ವೇಳೆ ಎಲ್ಲ ವಿಫಲವಾದರೂ ಎಲ್ಲ ಸೆನ್ಸರ್‌ಗಳು ಸ್ಥಗಿತವಾದರೂ ಏನೂ ಕೆಲಸ ಮಾಡದಿದ್ದರೂ ಆಗಲೂ ವಿಕ್ರಮ್ ಸುರಕ್ಷಿತವಾಗಿ ಇಳಿಯಲಿದೆ. ಈ ರೀತಿಯಲ್ಲಿ ನಾವು ಅದನ್ನು ವಿನ್ಯಾಸಗೊಳಿಸಿದ್ದೇವೆ. ಪ್ರೊಪಲ್ಶನ್ ವ್ಯವಸ್ಥೆ ಉತ್ತಮವಾಗಿ ಕೆಲಸ ಮಾಡುವಂತೆ ತಯಾರಿಸಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಂದ್ರಯಾನ 3 ಆ. 23ರಂದು ಚಂದ್ರನ ಮೇಲೆ ಇಳಿಯಲಿದೆ. ಇದಕ್ಕೆ ಮುನ್ನ ಆ. 9, ಆ. 14 ಮತ್ತು ಆ. 16ರಂದು ನೌಕೆಯನ್ನು ಚಂದ್ರನಿಗೆ ಇನ್ನಷ್ಟು ಹತ್ತಿರದ ಕಕ್ಷೆಗೆ ಇಳಿಸುತ್ತೇವೆ ಎಂದು ಸೋಮವಾಥ್ ಹೇಳಿದ್ದಾರೆ.