Advertisement

ಶಿಶಿರನ ಊರಿಗೆ ಭಾರತದ ಕನಸಿನ ತೇರು: ಚಂದ್ರಯಾನ-3 ಉಪಗ್ರಹ ಹೊತ್ತ ನೌಕೆ ಯಶಸ್ವಿ ಉಡಾವಣೆ

02:33 PM Jul 14, 2023 | Team Udayavani |

ಶ್ರೀಹರಿಕೋಟಾ: 9.8.7.6.5.4.3…2…1..0 ಅಗ್ನಿ ಜ್ವಾಲೆಯನ್ನು ಉಗುಳುತ್ತಾ ಕೋಟಿ ಕೋಟಿ ಭಾರತೀಯರ ಕನಸಾದ ಚಂದ್ರಯಾನ -3 ಉಪಗ್ರಹವನ್ನು ಹೊತ್ತ ಮಾರ್ಕ್ 3 ನೌಕೆ ನಭಕ್ಕೆ ಹಾರಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋದ ಮಹಾತ್ವಕಾಂಕ್ಷೆಯ ಚಂದ್ರಯಾನ -3 ಶಶಾಂಕ ದಕ್ಷಿಣ ಧ್ರುವದತ್ತ ಪ್ರಯಾಣ ಬೆಳೆಸಿದೆ.

Advertisement

ಚಂದ್ರಯಾನ-3 ಗಗನನೌಕೆಯು ಪ್ರೊಪಲ್ಷನ್‌ ಮಾಡ್ಯೂಲ್‌, ಲ್ಯಾಂಡರ್‌, ರೋವರ್‌ ಹೊತ್ತೊಯ್ದಿದೆ. ಇದರ ಒಟ್ಟು ತೂಕ 3,926 ಕೆಜಿ. ಪ್ರೊಪಲ್ಷನ್‌ ಮಾಡ್ಯೂಲ್‌ ತೂಕವು 2,148 ಕೆಜಿ, ಲ್ಯಾಂಡರ್‌ (ರೋವರ್‌ ಸಹಿತ) 1,752 ಕೆಜಿ, ರೋವರ್‌ 26 ಕೆಜಿ ತೂಕವಿದೆ. ಪ್ರೊಪಲ್ಷನ್‌ ಮಾಡ್ಯೂಲ್‌ 3 ರಿಂದ 6 ತಿಂಗಳ ಜೀವಿತಾವಧಿ ಹೊಂದಿದೆ. ಲ್ಯಾಂಡರ್‌, ರೋವರ್‌ ಜೀವಿತಾವಧಿ 1 ಚಂದ್ರನ ದಿನ (14 ಭೂಮಿ ದಿನಗಳು) ಇರಲಿದೆ (ಚಂದ್ರನ ಹಗಲಿನಲ್ಲಿ ಚಾರ್ಜ್‌ ಆಗಲಿದೆ). ಈ ನೌಕೆ ಚಂದ್ರನಲ್ಲಿ ತಲುಪಲು 42 ದಿನಗಳನ್ನು ತೆಗೆದುಕೊಳ್ಳಲಿದೆ. ಅಂದರೆ ಆಗಸ್ಟ್ 23 ಅಥವಾ 24ರಂದು ಚಂದ್ರನಲ್ಲಿ ಇಳಿಯಲಿದೆ.

ಈವರೆಗೆ ಯಾವುದೇ ಉಪಕರಣಗಳು ಹೋಗದ ಚಂದ್ರನ ದಕ್ಷಿಣ ಧ್ರುವದಲ್ಲಿ ಇಸ್ರೋ ತನ್ನ ನೌಕೆಯನ್ನು ಇಳಿಸುವ ಸಾಹಸಕ್ಕೆ ಮುಂದಾಗಿದೆ. ಚಂದ್ರನ ಅಧ್ಯಯನಕ್ಕೆ 2019ರ ಜು.22ರಂದು ಇಸ್ರೋ ಕೈಗೊಂಡಿದ್ದ ಚಂದ್ರಯಾನ-2 ಯೋಜನೆ ವಿಫಲವಾದ ಕಾರಣ ಮತ್ತೊಂದು ಚಂದ್ರಯಾನ ಯೋಜನೆಯನ್ನು ಇಸ್ರೋ ಕೈಗೆತ್ತಿಕೊಂಡಿದೆ. ಈ ಬಾರಿ ನೌಕೆ ಇಳಿಸಲು 4 ಕಿ.ಮೀ. X 2.5 ಕಿ.ಮೀ.ನ ವಿಶಾಲ ಸ್ಥಳವನ್ನು ಗುರುತಿಸಲಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಉಷ್ಣಾಂಶ -230 ಡಿ.ಸೆ. ಗಿಂತ ಕಡಿಮೆ ಇದ್ದು, ಇಲ್ಲಿ ಬಹುಕಾಲದವರಗೆ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪಳೆಯುಳಿಕೆಗಳು ಇರುವ ಅಂದಾಜಿದೆ. ಅಲ್ಲದೆ, 2008ರಲ್ಲಿ ಕೈಗೊಂಡ ಚಂದ್ರಯಾನ-1 ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿದೆ ಎಂಬುದು ಪತ್ತೆ ಹಚ್ಚಿದ ಹಿನ್ನೆಲೆಯಲ್ಲಿ ದಕ್ಷಿಣ ಧ್ರುವವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ದಕ್ಷಿಣ ಧ್ರುವದಲ್ಲಿ ಈ ವರೆಗೂ ಬೆಳಕನ್ನೇ ಕಾಣದ ಹಲವು ಪ್ರದೇಶಗಳಿರುವ ಕಾರಣ ಇದು ವಿಜ್ಞಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಚಂದ್ರಯಾನ 3 ಯಾಕೆ?

ಲ್ಯಾಂಡರ್‌ ನಲ್ಲಿ ಅಳವಡಿಸಿರುವ ಲ್ಯಾಂಗ್‌ ಮುಯಿರ್‌ ಪ್ರೋಬ್‌ ಚಂದ್ರನ ಮೇಲಿನ ಪ್ಲಾಸ್ಮಾ ಸಾಂದ್ರತೆ ಮತ್ತು ಅದರಲ್ಲಿರುವ ವ್ಯತ್ಯಾಸವನ್ನು ಪತ್ತೆ ಮಾಡಲಿದೆ. ಜತೆಗೆ ಇದರಲ್ಲಿ ಅಳವಡಿಸಲಾಗಿರುವ ಚಂದ್ರನ ಮೇಲ್ಮೈ ಥರ್ಮೊಫಿಸಿಕಲ್‌ ಮಾದರಿಯು ಚಂದ್ರನ ಮೇಲ್ಮೈನ ತಾಪಮಾನವನ್ನು ಅಧ್ಯಯನ ಮಾಡಲಿದೆ. ಅದೇ ರೀತಿ ಇನ್ಸ್‌ಸ್ಟ್ರೆಮೆಂಟ್‌ ಫಾರ್‌ ಲೂನಾರ್‌ ಸೀಸ್ಮಿಕ್‌ ಆ್ಯಕ್ಟಿವಿಟಿ ಚಂದ್ರನ ಮೇಲ್ಮೈನ ಭೂಕಂಪಗಳ ಬಗ್ಗೆ ಅಧ್ಯಯನ ನಡೆಸಲಿದೆ.

Advertisement

ಚಂದ್ರನ ಕತ್ತಲೆಯ ಭಾಗ ಅನ್ವೇಕ್ಷಣೆ: ಇನ್ನೊಂದೆಡೆ, ಚಂದ್ರನಲ್ಲಿರುವ ಖನಿಜಗಳು, ಮಣ್ಣು ಮತ್ತು ಅವುಗಳ ರಾಸಾಯನಿಕ ಮಿಶ್ರಣವನ್ನು ಅಧ್ಯಯನ ನಡೆಸಲು ರೋವರ್‌ನಲ್ಲಿ ಲೇಸರ್‌ ಇಂಡ್ನೂಸ್ಡ್ ಬ್ರೇಕ್‌ಡೌನ್‌ ಸ್ಪೆಕ್ಟ್ರೋಸ್ಕೋಪ್‌ ಮತ್ತು ಆಲ್ಫಾ ಪಾರ್ಟಿಕಲ್‌ ಎಕ್ಸ್‌ರೇ ಸ್ಪೆಕ್ಟ್ರೋ ಮೀಟರ್‌ ಅಳವಡಿಕೆಯಾಗಿದೆ. ಅದೇ ರೀತಿ ಉಪಗ್ರಹವು ಚಂದ್ರನಲ್ಲಿರುವ ನೀರಿನ ಅಂಶದ ಕುರಿತು ಅಧ್ಯಯನ ನಡೆಸಲಿದೆ. ಪ್ರಮುಖವಾಗಿ ಚಂದ್ರನ ದಕ್ಷಿಣ ಧ್ರುವದ ಕತ್ತಲಿನ ಭಾಗದ ಅನ್ವೇಕ್ಷಣೆ ನಡೆಸಲಿದ್ದು, ಅದರ ಮೇಲ್ಮೈಯನ್ನು ಅಧ್ಯಯನ ನಡೆಸಲಿದೆ.

ಪರಸ್ಪರ ಸಂವಹನ: ಪ್ರೊಪಲನ್‌ ಪೇಲೋಡ್‌ ಚಂದ್ರನಿಂದ ಇಸ್ರೋದ ಇಂಡಿಯನ್‌ ಡೀಪ್‌ ಸ್ಪೇಸ್‌ ನೆಟ್‌ವರ್ಕ್‌(ಐಡಿಎಸ್‌ಎನ್‌)ನೊಂದಿಗೆ ಸಂವಹನ ನಡೆಸಲಿದೆ. ಅದೇ ರೀತಿ ಲ್ಯಾಂಡರ್‌ ಮಾಡ್ನೂಲ್‌ ಐಡಿಎಸ್‌ಎನ್‌ ಮತ್ತು ರೋವರ್‌ನೊಂದಿಗೆ ಸಂವಹನ ನಡೆಸಲಿದೆ. ಆದರೆ ರೋವರ್‌, ಲ್ಯಾಂಡರ್‌ನೊಂದಿಗೆ ಮಾತ್ರ ಸಂವಹನ ನಡೆಸುತ್ತದೆ.

ಈ ಯೋಜನೆಯ ಮೂಲಕ ಚಂದ್ರನಲ್ಲಿ ನೀರು ಇರುವ ಸ್ಥಳವನ್ನು ಪತ್ತೆ ಮಾಡಲು, ನೀರಿನ ಪ್ರಮಾಣ ತಿಳಿಯಲು, ಚಂದ್ರನ ಕತ್ತಲಿನ ಭಾಗದ ಅನ್ವೇಕ್ಷಣೆ, ಖನಿಜಗಳ ಅಧ್ಯಯನ ಸೇರಿದಂತೆ ಚಂದ್ರನ ವೈಜ್ಞಾನಿಕ ಅಧ್ಯಯನ ನಡೆಸಲು ಭಾರತೀಯ ವಿಜ್ಞಾನಿಗಳಿಗೆ ಸಾಧ್ಯವಾಗಲಿದೆ. ಇದುವರೆಗೂ ಅಮೆರಿಕ, ರಷ್ಯಾ, ಚೀನಾ ಮಾತ್ರ ಚಂದ್ರನಲ್ಲಿ ಯಶಸ್ವಿಯಾಗಿ ತಮ್ಮ ನೌಕೆಗಳನ್ನು ಇಳಿಸಿವೆ. ಚಂದ್ರಯಾನ-3 ಯಶಸ್ವಿಯಾದರೆ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ.

Advertisement

Udayavani is now on Telegram. Click here to join our channel and stay updated with the latest news.

Next