ಬೆಂಗಳೂರು: ಬಹುನಿರೀಕ್ಷೆಯ ಚಂದ್ರಯಾನ 3ರ ಬಾಹ್ಯಾಕಾಶ ನೌಕೆಯ 5ನೇ ಹಂತದ ಕಕ್ಷೆ ಏರಿಸುವ ಪ್ರಕ್ರಿಯೆಯನ್ನು ಮಂಗಳವಾರ (ಜುಲೈ 25) ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.
ಇದನ್ನೂ ಓದಿ:Udupi ಕಾಲೇಜು ಘಟನೆ;ತಪ್ಪೊಪ್ಪಿಕೊಂಡ ವಿದ್ಯಾರ್ಥಿನಿಯರನ್ನು ಸಸ್ಪೆಂಡ್ ಮಾಡಿದ್ದೇವೆಂದ ಕಾಲೇಜು
ಬೆಂಗಳೂರಿನಲ್ಲಿರುವ ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ ವರ್ಕ್ (ISTRAC) ಚಂದ್ರಯಾನ-3ರ ನೌಕೆಯ ಕಕ್ಷೆಯನ್ನು ಯಶಸ್ವಿಯಾಗಿ ಏರಿಸಿರುವುದಾಗಿ ವಿವರಿಸಿದೆ.
ಭೂಮಿಯಿಂದ ಚಂದ್ರನ ಪಥಕ್ಕೆ ವರ್ಗಾಯಿಸುವ ಕಾರ್ಯದಲ್ಲಿ ನಿರತವಾಗಿದ್ದ ಇಸ್ರೋ ಈಗಾಗಲೇ ಜುಲೈ15 ಮತ್ತು 20ರ ನಡುವೆ ನಾಲ್ಕನೇ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಇದರೊಂದಿಗೆ ಆಗಸ್ಟ್ 1ರಂದು ಅಂತಿಮ ಹಂತದ ಕಕ್ಷೆ ಏರಿಸುವ ಪ್ರಕ್ರಿಯೆ ಆರಂಭಗೊಳ್ಳಲಿದೆ ಮಾಹಿತಿ ನೀಡಿದೆ.
ಟ್ರಾನ್ಸ್ ಲೂನಾರ್ ಇಂಜೆಕ್ಷನ್ (TLI) ಆಗಸ್ಟ್ 1ರಿಂದ ಆಗಸ್ಟ್ 12ರ ಮಧ್ಯರಾತ್ರಿಯ ನಡುವೆ ಪ್ರಕ್ರಿಯೆ ನಡೆಸಲು ಸಿದ್ಧತೆ ನಡೆಸಲಾಗಿದೆ.
ಜುಲೈ 14ರಂದು ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಈ ಬಾರಿಯ ಚಂದ್ರಯಾನ ಯಶಸ್ವಿಗೊಂಡಲ್ಲಿ(ನಿರೀಕ್ಷಿತ ದಿನಾಂಕ ಆಗಸ್ಟ್ 23 ಅಥವಾ 24) ಚಂದ್ರನ ದಕ್ಷಿಣ ಅಂಗಳಕ್ಕೆ ಕಾಲಿಟ್ಟ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಇತಿಹಾಸ ಸೃಷ್ಟಿಸಲಿದೆ.