ಬೆಂಗಳೂರು: ಭಾರತದ ಅತ್ಯಂತ ಬಲಿಷ್ಠ ರಾಕೆಟ್ ಎಂಜಿನ್ ಪರೀಕ್ಷೆಯ ಕೊನೇ ಹಂತದಲ್ಲಿ ನಡೆದ ತಾಂತ್ರಿಕ ಸಮಸ್ಯೆಯಿಂದಾಗಿ ಅದರ ಪ್ರಯೋಗವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ.
ಟರ್ಬೈನ್ ಒತ್ತಡದಲ್ಲಿ ಅನಿರೀಕ್ಷಿತ ಹೆಚ್ಚಳ ಮತ್ತು ಟರ್ಬೈನ್ ವೇಗದಲ್ಲಿ ಕಡಿತದ ಹಿನ್ನೆಲೆಯಲ್ಲಿ ಸೆಮಿ ಕ್ರಯೋಜೆನಿಕ್ ಎಂಜಿನ್‌ನ ಮಧ್ಯಂತರ ಸಂರಚನೆಯ ಮೊದಲ ಪರೀಕ್ಷೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಸದ್ಯದ ಮಟ್ಟಿಗೆ ಸ್ಥಗಿತಗೊಳಿಸಿದೆ. ಮುಂದಿನ ದಿನಗಳಲ್ಲಿ ಈ ಪರೀಕ್ಷೆಯನ್ನು ಇಸ್ರೋ ನಡೆಸಲಿದೆ.ಸೆಮಿ ಕ್ರಯೋಜೆನಿಕ್ ಎಂಜಿನ್‌ನ ಮಧ್ಯಂತರ ಸಂರಚನೆಯನ್ನು ಪವರ್ ಹೆಡ್ ಟೆಸ್ಟ್ ಆರ್ಟಿಕಲ್(ಪಿಎಚ್‌ಟಿಎ) ಎಂದು ಕೂಡ ಕರೆಯಲಾಗುತ್ತದೆ.
ತಮಿಳುನಾಡಿನ ಮಹೇಂದ್ರಗಿರಿಯ ಇಸ್ರೋ ಪ್ರೊಪಲ್ಶನ್ ಕಾಂಪ್ಲೆಕ್ಸ್(ಐಪಿಆರ್‌ಸಿ)ನಲ್ಲಿ ಜು.1ರಂದು ಈ ಪರೀಕ್ಷೆ ನಡೆಸಲು ಯೋಜಿಸಲಾಗಿತ್ತು. ಭವಿಷ್ಯದ ಉಡಾವಣಾ ವಾಹಕಗಳ ಬೂಸ್ಟರ್ ಹಂತಗಳಿಗೆ ಶಕ್ತಿ ನೀಡಲು 2,000 ಕಿಲೋನ್ಯೂಟನ್ ಸೆಮಿ ಕ್ರಯೋಜೆನಿಕ್ ಎಂಜಿನ್ ಅನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು ಎಂದು ಇಸ್ರೋ ತಿಳಿಸಿದೆ.
ಜು.13ರಂದು ಚಂದ್ರಯಾನ-3?: ಭಾರತದ ಮಹ ತ್ವಾಕಾಂಕ್ಷೆಯ ಚಂದ್ರಯಾನ-3 ಉಪಗ್ರಹ ಉಡಾವಣೆಯು ಜು.19ರ ಒಳಗಾಗಿ ನಡೆಯಲಿದೆ. ಬಹುತೇಕ ಜು.13ರಂದು ನಡೆಯುವ ಸಾಧ್ಯತೆ ಇದೆ ಎಂದು ಇಸ್ರೋ ಮುಖ್ಯಸ್ಥ ಸೋಮನಾಥ್ ತಿಳಿಸಿದ್ದಾರೆ.
ಇನ್ನೊಂದೆಡೆ ಚಂದ್ರಯಾನ-3 ಉಡಾವಣೆಗೂ ಮುನ್ನ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಸಂಶೋಧನ ಕೇಂದ್ರದಲ್ಲಿ ಮೊದಲ ಬಾರಿಗೆ ಪುಸ್ತಕವೊಂದು ಬಿಡುಗಡೆಯಾಗಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಿನೆಮಾ ನಿರ್ದೇಶಕ ವಿನೋದ್ ಮನ್‌ಕಾರಾ ಅವರ ವಿಜ್ಞಾನ ಲೇಖನಗಳ ಸಂಗ್ರಹ “ಪ್ರಿಸಮ್: ದಿ ಆ್ಯನ್‌ಸೆಸ್ಟ್ರಲ್ ಅಬೋಡ್ ಆಫ್ ರೈನ್‌ಬೋ’ ಕೃತಿಯು ಲೋಕಾರ್ಪಣೆಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.