Advertisement

Chandrayaan 3 ಲ್ಯಾಂಡಿಂಗ್‌ಗೂ ಮುನ್ನ ಚಂದಿರನ ಕ್ಲೋಸಪ್‌ ಕ್ಲಿಕ್‌!

07:51 AM Aug 22, 2023 | Team Udayavani |

ನವದೆಹಲಿ:ಚಂದಿರನ ದಕ್ಷಿಣ ಧ್ರುವದಲ್ಲಿ ಇಳಿಯುವ ಮೂಲಕ ಇತಿಹಾಸ ನಿರ್ಮಿಸಲು ಸಜ್ಜಾಗಿರುವ ಚಂದ್ರಯಾನ-3 ಈಗ ಶಶಾಂಕನ ನೆಲದಿಂದ ಕೈಗೆಟಕುವಷ್ಟು ದೂರದಲ್ಲಿದ್ದು, ಚಂದ್ರನ ಮೇಲ್ಮೈನ ಚಿತ್ರಗಳನ್ನು ಸೆರೆಹಿಡಿದು ಭೂಮಿಗೆ ರವಾನಿಸಿದೆ.

Advertisement

ಚಂದ್ರಯಾನ-3ರ ಲ್ಯಾಂಡರ್‌ ಹಜಾರ್ಡ್‌ ಡಿಟೆಕ್ಷನ್‌ ಆ್ಯಂಡ್‌ ಅವಾಯೆxನ್ಸ್‌ ಕ್ಯಾಮೆರಾ(ಎಚ್‌ಎಲ್‌ಡಿಎಸಿ) ಸೆರೆಹಿಡಿದಿರುವ ಶಶಾಂಕನ ದಕ್ಷಿಣ ಧ್ರುವದಲ್ಲಿನ ಕುಳಿಗಳ ಕ್ಲೋಸ್‌ಅಪ್‌ ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಬಿಡುಗಡೆ ಮಾಡಿದೆ. ಇದೇ ವೇಳೆ, ಎಲ್ಲ ವ್ಯವಸ್ಥೆಗಳೂ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದು, ಎಲ್ಲವೂ ಸುಸ್ಥಿತಿಯಲ್ಲಿವೆ ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್‌ ಅವರಿಗೆ ಇಸ್ರೋ ಮಾಹಿತಿ ನೀಡಿದೆ. ಬುಧವಾರ ಸಂಜೆ 6.04 ನಿಮಿಷಕ್ಕೆ ಲ್ಯಾಂಡರ್‌ ಮಾಡ್ಯೂಲ್‌ ಚಂದಿರನ ಮೇಲ್ಮೈಯನ್ನು ಸ್ಪರ್ಶಿಸಲಿದೆ.

ಆರ್ಬಿಟರ್‌ ಜತೆ ಸಂಪರ್ಕ:
ಮತ್ತೊಂದು ಮಹತ್ವದ ಬೆಳವಣಿಗೆಯೊಂದರಲ್ಲಿ ಈಗಾಗಲೇ ಚಂದಿರನ ಕಕ್ಷೆಯಲ್ಲಿ ಸುತ್ತುತ್ತಿರುವ ಚಂದ್ರಯಾನ-2ರ ಆರ್ಬಿಟರ್‌ ಸೋಮವಾರ ಚಂದ್ರಯಾನ-3ರ ಲ್ಯಾಂಡರ್‌ ಮಾಡ್ಯೂಲ್‌ನೊಂದಿಗೆ ಸಂಪರ್ಕ ಸಾಧಿಸಿದೆ. ಈ ಕುರಿತು ಎಕ್ಸ್‌(ಟ್ವಿಟ್‌ರ್‌) ಜಾಲತಾಣದ ಮೂಲಕ ಮಾಹಿತಿ ನೀಡಿರುವ ಇಸ್ರೋ, “ವೆಲ್‌ಕಂ, ಬುಡ್ಡಿ! ಚಂದ್ರಯಾನ-2ರ ಆರ್ಬಿಟರ್‌ ಅಧಿಕೃತವಾಗಿ ಇಂದು ಚಂದ್ರಯಾನ-3ರ ಲ್ಯಾಂಡರ್‌ ಮಾಡ್ಯೂಲ್‌ ಅನ್ನು ಸ್ವಾಗತಿಸಿದೆ. ಇವೆರಡರ ಮಧ್ಯೆ ಸಂವಹನವೂ ಏರ್ಪಟ್ಟಿದೆ’ ಎಂದು ಹೇಳಿಕೊಂಡಿದೆ.

2019ರಲ್ಲಿ ಚಂದ್ರಯಾನ-2 ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್‌ ಆಗುವಲ್ಲಿ ವಿಫ‌ಲಗೊಂಡಿತ್ತಾದರೂ, ಆರ್ಬಿಟರ್‌ ಮಾತ್ರ ಸುಗಮವಾಗಿ ಕಾರ್ಯ ನಿರ್ವಹಿಸುತ್ತಿತ್ತು. ನಂತರದಲ್ಲಿ ಆರ್ಬಿಟರ್‌ನ ಬಾಳಿಕೆ ಅವಧಿಯನ್ನು 7 ವರ್ಷಗಳಿಗೆ ವಿಸ್ತರಿಸಲಾಗಿತ್ತು. ಈ ಆರ್ಬಿಟರ್‌ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿದ್ದು, ಸೋಮವಾರ ತನ್ನ ಗೆಳೆಯ ಚಂದ್ರಯಾನ-3ರ ಜತೆ ಸಂಪರ್ಕ ಸಾಧಿಸಿದೆ.

ಏನೇ ಆದರೂ ಸುರಕ್ಷಿತ ಲ್ಯಾಂಡಿಂಗ್‌: ಪ್ರೊ.ರಾಧಾಕೃಷ್ಣ
“ಚಂದ್ರಯಾನ-3 ರ ವಿಕ್ರಮ್‌ ಲ್ಯಾಂಡರ್‌ನಲ್ಲಿ ಅಂತರ್ಗತ ಸುರಕ್ಷಿತ ಸಾಧನ ಅಳವಡಿಸಲಾಗಿದೆ. ಇದರಿಂದ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್‌ ಲ್ಯಾಂಡರ್‌ ಇಳಿಯುವ ಸಂದರ್ಭದಲ್ಲಿ ಯಾವುದೇ ತೊಂದರೆಯಾದರೂ ಸುರಕ್ಷಿತವಾಗಿ ಇಳಿಯಬಲ್ಲದು’ ಎಂದು ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯ ಬಾಹ್ಯಾಕಾಶ ವಿಜ್ಞಾನಿ ಪ್ರೊ. ರಾಧಾಕಾಂತ್‌ ಪಡಿ ಹೇಳಿದ್ದಾರೆ. “ಚಂದ್ರಯಾನ-2 ವಿಫ‌ಲವಾದ ನಂತರ ಅನೇಕ ಸುಧಾರಣೆಗಳನ್ನು ಮಾಡಲಾಗಿದೆ. ಚಂದ್ರಯಾನ-2 ಯೋಜನೆಯಲ್ಲಿ ವಿಕ್ರಮ್‌ ಲ್ಯಾಂಡರ್‌ನ ವೇಗ ನಿಯಂತ್ರಣಕ್ಕೆ ಬರಲಿಲ್ಲ. ಈಗಾಗಿ ಅದು ಚಂದ್ರನ ಮೇಲ್ಮೈಗೆ ಅಪ್ಪಳಿಸಿತ್ತು. ಅಂದಿನ ತಪ್ಪುಗಳನ್ನು ಈಗ ಸರಿಪಡಿಸಲಾಗಿದೆ. ವಿಕ್ರಮ್‌ ಲ್ಯಾಂಡರ್‌ ಸುರಕ್ಷಿತವಾಗಿ ಚಂದ್ರನ ಅಂಗಳಕ್ಕೆ ಇಳಿಯಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದು “ಎನ್‌ಡಿಟಿವಿ’ಗೆ ನೀಡಿದ ಸಂದರ್ಶದಲ್ಲಿ ತಿಳಿಸಿದ್ದಾರೆ.

Advertisement

“ಚಂದ್ರಯಾನ-3 ಉಡಾವಣೆಗೆ ಪೂರ್ವಭಾವಿಯಾಗಿ ಅನೇಕ ಕಠಿಣ ಪರೀಕ್ಷೆಗಳನ್ನು ನಡೆಸಲಾಗಿದೆ. ಚಂದ್ರಯಾನ-2ರಲ್ಲಿ ವಿಕ್ರಮ್‌ ಲ್ಯಾಂಡರ್‌ ಒಂದು ಆನ್‌ಬೋರ್ಡ್‌ ಕಂಪ್ಯೂಟರ್‌ ಹೊಂದಿತ್ತು. ಚಂದ್ರಯಾನ-3ರ ವಿಕ್ರಮ್‌ ಲ್ಯಾಂಡರ್‌ ಎರಡು ಆನ್‌ಬೋರ್ಡ್‌ ಕಂಪ್ಯೂಟರ್‌ಗಳನ್ನು ಹೊಂದಿದೆ’ ಎಂದು ಹೇಳಿದ್ದಾರೆ.

ನಾಸಾ, ಇಎಸ್‌ಎ ಸಹಾಯ ಹೇಗೆ ಮಾಡಲಿವೆ?
ಚಂದ್ರಯಾನ-3 ಯೋಜನೆಯು ಸುಗಮವಾಗಿ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಇಸ್ರೋಗೆ ಅಮೆರಿಕದ ನ್ಯಾಷನಲ್‌ ಏರೋನಾಟಿಕ್ಸ್‌ ಆ್ಯಂಡ್‌ ಸ್ಪೇಸ್‌ ಅಡ್ಮಿನಿಸ್ಟ್ರೇಶನ್‌(ನಾಸಾ) ಮತ್ತು ಯೂರೋಪಿಯನ್‌ ಸ್ಪೇಸ್‌ ಏಜೆನ್ಸಿ (ಇಎಸ್‌ಎ) ಸಹಾಯ ಮಾಡುತ್ತಿದೆ. ಚಂದ್ರಯಾನ-3 ಉಡಾವಣೆ ಆರಂಭವಾದಗಿನಿಂದಲೂ ಗಗನನೌಕೆಯ ಮೇಲೆ ನಿರಂತರವಾಗಿ ನಿಗಾ ಇಟ್ಟಿರುವ ಇಎಸ್‌ಎ, ತನ್ನ ಎರಡು ಬಾಹ್ಯಾಕಾಶ ನಿಲ್ದಾಣಗಳ ಮೂಲಕ ಮಾಹಿತಿಯನ್ನು ಸಂಗ್ರಹಿಸಿ, ಇಸ್ರೋ ಕೇಂದ್ರಕ್ಕೆ ಕಳುಹಿಸುತ್ತಿದೆ. “ಡೀಪ್‌ ಸ್ಪೇಸ್‌ ನೆಟÌರ್ಕ್‌ ಮೂಲಕ ಗಗನನೌಕೆ ಸಾಗುತ್ತಿರುವ ಮಾರ್ಗದ ಮಾಹಿತಿ ಮತ್ತು ಗಗನನೌಕೆಯ ಸ್ಥಿತಿ-ಗತಿ ಒಳಗೊಂಡ ಮಾಹಿತಿಯ ಟೆಲಿಮಿಟ್ರಿಯನ್ನು ನಾಸಾ ಪಡೆಯಲಿದೆ. ಇದನ್ನು ಇಸ್ರೋಗೆ ಕಳುಹಿಸಲಿದೆ’ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.

ಚಂದ್ರನ ಅಧ್ಯಯನಕ್ಕೆ ರಷ್ಯಾ ಕಳುಹಿಸಿದ್ದ ಲೂನಾ-25 ಗಗನನೌಕೆಯು ಪತನಗೊಂಡಿತು. ಆ ದೇಶದ ವಿಫ‌ಲತೆ  ಚಂದ್ರಯಾನ-3ರ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರದು. ಚಂದ್ರಯಾನ-3 ಯೋಜನೆಯ ಪ್ರಕಾರವೇ ಎಲ್ಲವೂ ನಡೆಯುತ್ತಿದೆ. ಸಾಫ್ಟ್ ಲ್ಯಾಂಡಿಂಗ್‌ ಕೂಡ ನಿರೀಕ್ಷೆಯಂತೆ ನಡೆಯುವ ಸಂಪೂರ್ಣ ವಿಶ್ವಾಸವಿದೆ.
-ಕೆ.ಶಿವನ್‌, ಇಸ್ರೋ ಮಾಜಿ ಅಧ್ಯಕ್ಷ

ನಿಜವಾದ ಸವಾಲು ಈಗ ಆರಂಭವಾಗಿದೆ. ಚಂದ್ರಯಾನ-3ರ ವಿಕ್ರಮ್‌ ಲ್ಯಾಂಡರ್‌ನ ಸಾಫ್ಟ್ ಲ್ಯಾಂಡಿಂಗ್‌ ಅತ್ಯಂತ ಸಂಕೀರ್ಣ ವಿಷಯವಾಗಿದೆ. ಇದೀಗ ನಾವು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಯಶಸ್ಸಿಗಾಗಿ ಎಲವೂ ಸುಗಮವಾಗಿ ನಡೆಯಬೇಕಿದೆ.
-ಮಾಧವನ್‌ ನಾಯರ್‌, ಇಸ್ರೋ ಮಾಜಿ ಅಧ್ಯಕ್ಷ

ಭಾರತಕ್ಕೆ ಇದೊಂದು ಅದ್ಭುತ ವಿಷಯವಾಗಿದೆ. ಇದು ಪ್ರತಿಯೊಬ್ಬ ಭಾರತೀಯ ಗರ್ವಪಡುವ ಕ್ಷಣವಾಗಿದೆ. ಹೃದಯಾಂತರಾಳದಿಂದ ನಮಗೆ ಹೆಮ್ಮೆ ಎನಿಸುತ್ತಿದೆ. ಮಕ್ಕಳೊಂದಿಗೆ ನಾನು ಈ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತೇನೆ.
-ಕರೀನಾ ಕಪೂರ್‌, ಬಾಲಿವುಡ್‌ ನಟಿ

Advertisement

Udayavani is now on Telegram. Click here to join our channel and stay updated with the latest news.

Next