ನವದೆಹಲಿ: ಇದೇ ಮೊದಲ ಬಾರಿಗೆ ಚಂದ್ರನಲ್ಲಿ ಹೇರಳವಾಗಿ ಸೋಡಿಯಂ ಇರುವ ನಿಕ್ಷೇಪವನ್ನು “ಕ್ಲಾಸ್’ (ಚಂದ್ರಯಾನ-2 ಲಾರ್ಜ್ ಏರಿಯಾ ಸಾಪ್ಟ್ ಎಕ್ಸ್‌ರೇ ಸ್ಪೆಕ್ಟ್ರೋಮೀಟರ್) ಗುರುತಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
ಈ ಹಿಂದೆ ಚಂದ್ರಯಾನ-1 ಎಕ್ಸ್‌ರೇ ಪ್ಲೋರೆಸೆನ್ಸ್ ಸ್ಪೆಕ್ಟ್ರೋಮೀಟರ್ (ಸಿ1ಎಕ್ಸ್‌ಎಸ್) ಚಂದ್ರನಲ್ಲಿ ಸೋಡಿಯಂ ಇರುವುದನ್ನು ಪತ್ತೆಹಚ್ಚಿತ್ತು. ಇದರಿಂದ ಚಂದ್ರನಲ್ಲಿ ಹೇರಳವಾಗಿ ಸೋಡಿಯಂ ಇರುವ ಸಾಧ್ಯತೆ ಬಗ್ಗೆ ಸಂಶೋಧನೆ ಮುಂದುವರಿಯಿತು ಎಂದು ಇಸ್ರೊ ಹೇಳಿದೆ.
“ದಿ ಆಸ್ಟ್ರೋಫಿಸಿಕಲ್ ಜರ್ನಲ್ ಲೆಟರ್’ ಎಂಬ ವೈಜ್ಞಾನಿಕ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಲೇಖನದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.
ಬೆಂಗಳೂರಿನಲ್ಲಿರುವ ಇಸ್ರೋದ ಪ್ರಧಾನ ಕಚೇರಿಯಲ್ಲಿ ಇರುವ ಇಸ್ರೊದ ಯು.ಆರ್.ರಾವ್ ಉಪಗ್ರಹ ಕೇಂದ್ರದಲ್ಲಿ ನಿರ್ಮಿಸಲಾದ “ಕ್ಲಾಸ್’ ಸ್ಪೆಕ್ಟ್ರೋಮೀಟರ್ ಚಂದ್ರನಲ್ಲಿರುವ ಸೋಡಿಯಂ ಬಗ್ಗೆ ಸ್ಟಷ್ಟ ಚಿತ್ರಣ ಒದಗಿಸಿದೆ.
ಅಧ್ಯಯನದ ಪ್ರಕಾರ, ಚಂದ್ರನ ಮೇಲೆ ಸೋಡಿಯಂ ಇರುವ ಕುರುಹುಗಳು ಬಹುಶಃ ಸೋಡಿಯಂ ಪರಮಾಣುಗಳ ತೆಳುವಾದ ಪದರದಿಂದ ಹುಟ್ಟಿಕೊಂಡಿರಬಹುದು. ಇದು ಚಂದ್ರನ ಕಣಗಳಿಗೆ ದುರ್ಬಲವಾಗಿ ಜೋಡಿಸಲ್ಪಟ್ಟಿದೆ. ಈ ಸೋಡಿಯಂ ಪರಮಾಣುಗಳನ್ನು ಸೌರ ಮಾರುತ ಅಥವಾ ನೇರಳಾತೀತ ವಿಕಿರಣದ ಮೂಲಕ ಚಂದ್ರನ ಮೇಲ್ಮೈಯಿಂದ ಸುಲಭವಾಗಿ ಹೊರಹಾಕಬಹುದು ಎಂದು ಇಸ್ರೊ ತಿಳಿಸಿದೆ.
ಸೋಡಿಯಂ ಇರುವ ಚಂದ್ರನ ಮೇಲ್ಮೈಯನ್ನು “ಎಕೊಸ್ಪಿಯರ್’ ಎಂದು ಕರೆಯಲಾಗುತ್ತದೆ. ಇದು ಚಂದ್ರನ ಮೇಲ್ಮೈಯಿಂದ ಪ್ರಾರಂಭವಾಗುತ್ತದೆ ಮತ್ತು ಸಾವಿರಾರು ಕಿಲೋ ಮೀಟರ್ ಗಳವರೆಗೆ ವಿಸ್ತರಿಸುತ್ತದೆ.
ಈ ಹೊಸ ಸಂಶೋಧನೆಗಳು, ಚಂದ್ರನ ಮೇಲ್ಮೈ-ಎಕೊಸ್ಪಿಯರ್ ಪರಸ್ಪರ ಕ್ರಿಯೆಯನ್ನು ಅಧ್ಯಯನ ಮಾಡಲು ಹಾಗೂ ನಮ್ಮ ಸೌರವ್ಯೂಹದ ಇತರ ಗ್ರಹಗಳು ಮತ್ತು ಅದರ ಉಪಗ್ರಹಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲು ಅವಕಾಶ ಒದಗಿಸುತ್ತದೆ ಎಂದು ಇಸ್ರೊ ಹೇಳಿದೆ.