ನವದೆಹಲಿ: ಚಂದ್ರಯಾನ 2 ಯೋಜನೆಗೆ ಒಟ್ಟಾರೆಯಾಗಿ 970 ಕೋಟಿ ರೂಪಾಯಿ ವೆಚ್ಚ ತಗಲಿದೆ ಎಂದು ಕೇಂದ್ರ ಸರಕಾರ ಇಂದು ಸಂಸತ್ತಿನಲ್ಲಿ ಮಾಹಿತಿ ನೀಡಿದೆ. ಚಂದ್ರಯಾನ ಯೋಜನೆಯ ಪೂರ್ವತಯಾರಿಗೆ ಒಟ್ಟು 603 ಕೋಟಿ ರೂಪಾಯಿಗಳಷ್ಟು ವೆಚ್ಚ ತಗಲಿದ್ದರೆ ಅದರ ಉಡ್ಡಯನಕ್ಕೆ 367 ಕೋಟಿ ರೂಪಾಯಿಗಳಷ್ಟು ವೆಚ್ಚ ತಗಲಿದೆ.
ಚಂದ್ರಯಾನ -2ರ ವೆಚ್ಚಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಸದನಕ್ಕೆ ಈ ಮಾಹಿತಿಯನ್ನು ನೀಡಿದ್ದಾರೆ. ಒಂದು ಕಕ್ಷೆ ವಾಹಕ, ಲ್ಯಾಂಡರ್ ಮತ್ತು ಆರ್ಬಿಟರ್ ಸಹಿತ ಚಂದ್ರಯಾನ –2ನ್ನು ಸಂಪೂರ್ಣವಾಗಿ ದೇಶೀಯವಾಗಿಯೇ ತಯಾರಿಸಲಾಗಿತ್ತು ಮತ್ತು ಈ ಯೋಜನೆಯ ಬಹುತೇಕ ಉದ್ದೇಶಗಳು ಈಡೇರಿವೆ ಎಂದು ಸಚಿವರು ಮಾಹಿತಿ ನೀಡಿದರು.
ಚಂದ್ರಯಾನ ನೌಕೆಯನ್ನು ಕಳೆದ ಜುಲೈ 22ರಂದು ಜಿ.ಎಸ್.ಎಲ್.ವಿ. ಎಂ.ಕೆ. III-ಎಂ.1 ರಾಕೆಟ್ ಮೂಲಕ ಯಶಸ್ವಿಯಾಗಿ ನಭಕ್ಕೆ ಹಾರಿಸಲಾಗಿತ್ತು. ಇದು ಭಾರತದ ಎರಡನೇ ಚಂದ್ರಯಾನ ಯೋಜನೆಯಾಗಿದೆ.
ನಾಲ್ಕು ಭೂಕಕ್ಷೆ ಎತ್ತರಿಸುವಿಕೆ ಮತ್ತು ಚಂದ್ರನ ಕಕ್ಷೆಗೆ ಸೇರಿಸುವ ಪ್ರಕ್ರಿಯೆ ಯಶಸ್ವಿಗೊಂಡ ಬಳಿಕ ಚಂದ್ರಯಾನ ನೌಕೆ ಆಗಸ್ಟ್ 20ರಂದು ಯಶಸ್ವಿಯಾಗಿ ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. ಆದರೆ ನೌಕೆಯಿಂದ ಬೇರ್ಪಟ್ಟಿದ್ದ ವಿಕ್ರಂ ಲ್ಯಾಂಡರ್ ಸೆಪ್ಷಂಬರ್ 07ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗುವ ಕೊನೇ ಕ್ಷಣದಲ್ಲಿ ವಿಫಲಗೊಂಡಿತ್ತು.
ಆದರೆ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಚಂದ್ರನ ವಾತಾವರಣಕ್ಕೆ ಸಂಬಂಧಿಸಿದ ಉಪಯುಕ್ತ ಮಾಹಿತಿಗಳನ್ನು ಇಸ್ರೋ ನಿಯಂತ್ರಣ ಕೇಂದ್ರಕ್ಕೆ ರವಾನಿಸುತ್ತಿದೆ.