Advertisement

ಚಂದ್ರಗಿರಿ ಚಂದ್ರಮ್ಮ ದೇವಿ ಜಾತ್ರೆಯಲ್ಲಿ ಭಕ್ತಿಗಿಲ್ಲ ಬರ

11:12 AM Mar 18, 2019 | |

ಆಲಮಟ್ಟಿ: ಈ ಭಾಗದ ಆರಾಧ್ಯ ದೈವವಾಗಿರುವ ಚಂದ್ರಗಿರಿ ಚಂದ್ರಮ್ಮ ದೇವಿ ಜಾತ್ರೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆದು ಸದರನ್ನು ಇಳಿಸುವುದರೊಂದಿಗೆ ಶನಿವಾರ ಸಂಪನ್ನಗೊಂಡಿತು.

Advertisement

ಮಾ. 14ರಂದು ಆರಂಭವಾದ ಜಾತ್ರೆಯಂಗವಾಗಿ ಸಾಕ್ಷಾತ್‌ ಚಾಮುಂಡೇಶ್ವರಿ ಅವತಾರವೆಂದೇ ಜನ ಜನಿತವಾಗಿರುವ
ಚಂದ್ರಮ್ಮ ದೇವಿಗೆ ವಿಶೇಷ ಪೂಜೆ, ನೈವೇದ್ಯ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಜಾತ್ರೆಗೆ ಚಾಲನೆ ನೀಡಲಾಗಿತ್ತು.

ನೆರೆಯ ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಲಿಂಗಭೇದ ಹಾಗೂ ವಯೋಭೇದವಿಲ್ಲದೇ ಕೃಷ್ಣಾ ನದಿಯಲ್ಲಿ ಮಡಿಸ್ನಾನ ಮಾಡಿ ಶಿವಾಪಾರ್ವತಿ ಹರಹರ ಎನ್ನುತ್ತ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ದೀಡ ನಮಸ್ಕಾರ ಹಾಕಿ ಹರಕೆ ತೀರಿಸಿದರು.

ಭಕ್ತಿಗೆ ಬರವಿಲ್ಲ: ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದಿರುವುದರಿಂದ ರೈತರು ಬಿತ್ತನೆ ಮಾಡಿದ ಬೀಜ ಮೊಳಕೆಯಲ್ಲಿಯೇ ಕಮರಿ ಹೋಗಿದ್ದರೂ ಕೂಡ ನಾಡಿನ ಜನರಲ್ಲಿ ಭಕ್ತಿಗೆ ಬರವಿಲ್ಲ. ಪ್ರತಿ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತನುಮನಧನದಿಂದ ಭಕ್ತಿ ಸಮರ್ಪಿಸಿ ದೇವಿಯ ಕೃಪೆಗೆ ಪಾತ್ರಾದರು.

ಖರೀದಿ ಜೋರು: ಪ್ರತಿ ಬಾರಿಯೂ ಬೇಸಿಗೆ ಆರಂಭದಲ್ಲಿ ನಡೆಯುವ ಜಾತ್ರೆಯಲ್ಲಿ ಈ ಬಾರಿಯೂ ಕೂಡ 1 ಕಿ.ಮೀ.ವರೆಗೆ ವಿವಿಧ ಸಾಮಗ್ರಿಗಳ ಅಂಗಡಿಗಳನ್ನು ಹಾಕಲಾಗಿತ್ತು. ಚಿನ್ನವನ್ನು ನಾಚಿಸುವಂತೆ ಬಂಗಾರ ವರ್ಣದ ಚೈನ್‌, ಲಾಕೆಟ್‌, ಉಂಗುರ ಹೀಗೆ ಆಭರಣಗಳ ಖಜಾನೆಯಂತಿರುವ ಎಲ್ಲ ವಸ್ತುಗಳ ಎಲ್ಲರ ಗಮನ ಸೆಳೆಯುವುದರೊಂದಿಗೆ ಬೆಲೆಯಲ್ಲಿಯೂ ಕೂಡ ವಿಶೇಷವೆನಿಸಿತು.

Advertisement

ನೂರಾರು ರೂ.ಗಳ ದರವೆನ್ನುವಂತೆ ಅನಿಸಿದ ವಸ್ತುಗಳಿಗೆ ಕೇವಲ 10, 20, 30 ರೂ.ಗಳ ದರದಲ್ಲಿ ಆಭರಣಗಳು ಮಾರಾಟವಾಗುತ್ತಿದ್ದರೆ ಇನ್ನು ಮಕ್ಕಳ ವಿವಿಧ ಆಟಿಕೆ ಸಾಮಾನುಗಳು, ಪ್ರವಾಸದಲ್ಲಿ ಅತಿ ಅವಶ್ಯವಾಗುವ ಬ್ಯಾಗುಗಳು, ಒಕ್ಕಲುತನಕ್ಕೆ ಬೇಕಾಗುವ ಕೆಲ ಸಾಮಗ್ರಿಗಳು, ಬಿದಿರಿನಿಂದ ತಯಾರಿಸಿದ ವಿವಿಧ ಅಲಂಕಾರಿಕ ವಸ್ತುಗಳು ಹಾಗೂ ಮೊರ, ಬುಟ್ಟಿ ಮತ್ತು ನೈಜ ಹೂವುಗಳನ್ನು ನಾಚಿಸುವಂತೆ ಕೃತಕ ಹೂಗಳು, ಹೀಗೆ ತರಹೇವಾರಿ ವಸ್ತುಗಳ ಬೆಲೆ ಕಡಿಮೆಯಿದಿದ್ದರಿಂದ ಜಾತ್ರೆಗೆ ಬಂದ ಭಕ್ತರು ಒಂದಿಲ್ಲೊಂದು ಸಾಮಗ್ರಿಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದರು.

ದೇವಸ್ಥಾನಕ್ಕೆ ತೆರಳುವ ಮಾರ್ಗದ ರಾಮಲಿಂಗೇಶ್ವರ ದೇವಸ್ಥಾನದ ವೃತ್ತ ಬಳಿಯಿಂದ ಸಂಗಮ ನರ್ಸರಿ ಶಾಲೆವರೆಗೂ ಎರಡೂ ಬದಿಯಲ್ಲಿ ಲಂಬಾಣಿ ಮಹಿಳೆಯರು ಧರಿಸುವ ವಿವಿಧ ಅಲಂಕಾರಿಕ ವಸ್ತುಗಳು ಹಾಗೂ ಉಡುಪುಗಳ ವ್ಯಾಪಾರ ಜೋರಾಗಿತ್ತು. ಇನ್ನು ಮಹಿಳೆಯರು ಹಾಗೂ ಮಕ್ಕಳ ಮನರಂಜನೆಗಾಗಿ ಇಡಲಾಗಿದ್ದ ಚಕ್ರಗಳಲ್ಲಿ ಕುಳಿತು ರಂಜಿಸಿದರು.

ಬೇಸಿಗೆಯಾದ್ದರಿಂದ ಭಕ್ತರು ಮುಂಜಾನೆಯಂದಲೇ ತಂಪು ಪಾನೀಯಗಳು, ಮಜ್ಜಿಗೆ, ಎಳನೀರು ಸೇವಿಸಿ ಮತ್ತೆ ಶಿವ ಪಾರ್ವತಿ ಹರಹರಾ ಎನ್ನುತ್ತ ದೇವಿಯ ದರ್ಶನಕ್ಕೆ ತೆರಳುತ್ತಿದ್ದರು. ಗುರುವಾರದಿಂದ ಆರಂಭವಾದ ಜಾತ್ರೆಯಲ್ಲಿ ನಾಟಕ ಹಾಗೂ ಭಜನೆ ಹಾಡುಗಳು ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಮಗಳು ಮೂರು ದಿನಗಳ ಕಾಲ ನಡೆದವು. 

Advertisement

Udayavani is now on Telegram. Click here to join our channel and stay updated with the latest news.

Next