ಮೈಸೂರಿನ ಚಾಮುಂಡಿಬೆಟ್ಟದಲ್ಲಿ ರಸ್ತೆ ಕುಸಿತ ಹಾಗೂ ಇಲ್ಲಿನ ಅಭಿವೃದ್ಧಿ ಕುರಿತು ವ್ಯಾಪಕ ಚರ್ಚೆ ಆಗುತ್ತಿದೆ. ಬೆಟ್ಟದ ಕುಸಿತ ಹಾಗೂ ಬೆಟ್ಟದ ಅಭಿವೃದ್ಧಿಗೆ ಸರಕಾರದ ಯೋಜನೆಗಳು ಆತಂಕಕ್ಕೀಡು ಮಾಡಿವೆ. ಬೆಟ್ಟಕ್ಕೆ ಆಗುತ್ತಿರುವ ಹಾನಿಯನ್ನು ತಡೆಯಬೇಕೆಂದು ನಾಗರಿಕರು ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ. ಹಿರಿಯ ಸಾಹಿತಿ ಡಾ| ಎಸ್ .ಎಲ್. ಭೈರಪ್ಪ, ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಗ್ರೀನ್ ಆಸ್ಕರ್ ಪ್ರಶಸ್ತಿ ಪುರಸ್ಕೃತ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ್ ಸೇನಾನಿ ಹೀಗೆ ಅನೇಕ ಗಣ್ಯರು ಚಾಮುಂಡಿಬೆಟ್ಟ ಉಳಿಸಿ ಹೋರಾಟಕ್ಕೆ ಕೈಜೋಡಿಸಿದ್ದಾರೆ.
ಚಾಮುಂಡಿಬೆಟ್ಟವು ಇಲ್ಲಿನ ಮಿತಿಮೀರಿದ ಅಭಿವೃದ್ಧಿಗೆ ಕುಸಿಯುತ್ತಿದೆ. ಇಂತಹ ಹೊತ್ತಲ್ಲೇ ರಾಜ್ಯ ಸರಕಾರ ಮತ್ತೆ ಇಲ್ಲಿ ಹಂಪಿ ಮಾದರಿ ಅಭಿವೃದ್ಧಿ ಯೋಜನೆಯ ಪ್ರಸ್ತಾವವನ್ನು ಕೇಂದ್ರ ಸರಕಾರದ ಮುಂದಿಟ್ಟು ಗಾಯದ ಮೇಲೆ ಬರೆ ಎಳೆದಿದೆ. ಚಾಮುಂಡಿಬೆಟ್ಟ ಮೈಸೂರಿನ ಅಸ್ಮಿತೆ. ಚಾಮುಂಡೇಶ್ವರಿ ದೇವಿ ನೆಲೆಸಿರುವ ಶಕ್ತಿಪೀಠ. ಭಕ್ತರ ಯಾತ್ರಾ ಸ್ಥಳ. ನಿಸರ್ಗ ರಮಣೀಯ ಈ ತಾಣದಲ್ಲಿ ಅಭಿವೃದ್ಧಿ ಹೆಸರಲ್ಲಿ ವಾಣಿಜ್ಯ ಚಟುವಟಿಕೆಗಳು ಬೆಟ್ಟಕ್ಕೆ ಸಂಚಕಾರ ತಂದೊಡ್ಡಿವೆ. ಇದರ ದುಷ್ಪರಿಣಾಮಗಳು ರಸ್ತೆ ಕುಸಿತ, ಬಂಡೆಕಲ್ಲುಗಳು ಉರುಳುವುದು, ವಸತಿ ಪ್ರದೇಶಕ್ಕೆ ವನ್ಯಮೃಗಗಳು ನುಗ್ಗುವುದು ಹೀಗೆ ವಿವಿಧ ಬಗೆಗಳಲ್ಲಿ ಗೋಚರಿಸುತ್ತಿವೆ. ಇಷ್ಟಾದರೂ ಸರಕಾರ, ಸ್ಥಳೀಯ ಗ್ರಾಮ ಪಂಚಾಯತ್ ಮತ್ತೆ ಅಭಿವೃದ್ಧಿ ಹೆಸರಿನಲ್ಲಿ ಹಸುರು ನಾಶಪಡಿಸಿ ಕಾಂಕ್ರೀಟ್ ಕಾಡನ್ನು ನಿರ್ಮಿಸಲು ಹೊರಟಿರುವುದು ಮೂರ್ಖತನದ ಪರಮಾವಧಿಯೇ ಸರಿ. ಯಾವುದೇ ಒಂದು ಸರಕಾರಕ್ಕೆ, ಸ್ಥಳೀಯ ಸಂಸ್ಥೆಗೆ ಪರಿಸರದ ಬಗೆಗೆ ಕಾಳಜಿ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಚಾಮುಂಡಿಬೆಟ್ಟ ಇವತ್ತು ನಮ್ಮ ಮುಂದೆ ಉದಾಹರಣೆಯಾಗಿ ನಿಂತಿದೆ.
ಇದನ್ನೂ ಓದಿ:ಭೂಮಿ ಮರಳಿಸಿ: ಅರಣ್ಯ ಇಲಾಖೆಗೆ ಸೂಚನೆ
ಚಾಮುಂಡಿಬೆಟ್ಟದ ಪ್ರಕೃತಿ ಹಾಗೂ ಇಲ್ಲಿನ ಪಾವಿತ್ರ್ಯವನ್ನು ಮೊದಲು ಉಳಿಸಿಕೊಳ್ಳಬೇಕು. ಇಲ್ಲಿನ ಜಲಮೂಲಗಳನ್ನು ಸಂರಕ್ಷಿಸಬೇಕು. ಪರಿಸರ, ವನ್ಯಜೀವಿಗಳ ರಕ್ಷಣೆ ಆಗಬೇಕು. ಚಾಮುಂಡಿಬೆಟ್ಟದಲ್ಲಿರುವ ಕಲ್ಲು, ಬಂಡೆಕಲ್ಲು, ಮಣ್ಣು, ಝರಿ, ನೀರನ್ನು ಕಾಪಾಡಿಕೊಳ್ಳಬೇಕು. ಬೆಟ್ಟದ ಸುತ್ತ ವಸತಿ ಬಡಾವಣೆಗಳು ತಲೆ ಎತ್ತಿ ಅನೇಕ ವರ್ಷಗಳೇ ಉರುಳಿವೆ. ಇದನ್ನು ತಡೆಯುವ ಪ್ರಯತ್ನಗಳು ಇನ್ನಾದರೂ ಆಗಬೇಕು. ಬೆಟ್ಟದಲ್ಲಿ ಕಳೆದ 20 ವರ್ಷಗಳಲ್ಲಿ ಜನ ವಸತಿ ಹೆಚ್ಚಿದೆ. ಇದಕ್ಕೆ ಕಡಿವಾಣ ಬೀಳಬೇಕು. ಚಾಮುಂಡಿಬೆಟ್ಟದ ಉಸ್ತುವಾರಿಯನ್ನು ರಾಜ್ಯ ಸರಕಾರದ ಅರಣ್ಯ ಇಲಾಖೆ, ಮುಜರಾಯಿ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ನೋಡಿಕೊಳ್ಳುತ್ತಿವೆ. ಬೆಟ್ಟದ ಉಳಿವಿಗೆ ಇವು ಪರಿಸರಕ್ಕೆ ಪೂರಕವಾದ ಹೆಜ್ಜೆ ಇಡಬೇಕು. ಪ್ರವಾಸೋದ್ಯಮ ಇಲಾಖೆಯೂ ಅಷ್ಟೇ. ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಬೆಟ್ಟದಲ್ಲಿ ಹಂಪಿ ಮಾದರಿ ಯೋಜನೆಗೆ ಮುಂದಾಗಿರುವುದನ್ನು ಮೊದಲು ಕೈಬಿಡಬೇಕು. ಬೆಟ್ಟದಲ್ಲಿ ಆಗಬೇಕಿರುವುದು ಪ್ರವಾಸೋದ್ಯಮ ಅಭಿವೃದ್ಧಿ ಅಲ್ಲ. ಈ ನಿಸರ್ಗ ತಾಣದ ಸಂರಕ್ಷಣೆ ಎಂಬುದನ್ನು ಅರಿಯಬೇಕು.
ಬೆಟ್ಟಕ್ಕೆ ಆಗುವ ಮತ್ತಷ್ಟು ಹಾನಿಯನ್ನು ತಡೆಯುವುದು ಇಂದಿನ ತುರ್ತು ಅಗತ್ಯವಾಗಿದೆ. ಬೆಟ್ಟದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ವ್ಯಾಪಾರ ವಹಿವಾಟು ಹೆಚ್ಚು ಮಾಡುವುದು, ಕಟ್ಟಡಗಳನ್ನು ಕಟ್ಟುವುದರಲ್ಲಿ ಅರ್ಥವೇ ಇಲ್ಲ. ಪ್ರಕೃತಿ ತಿರುಗಿ ಬಿದ್ದ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದ್ದರೂ ಸರಕಾರ ಕುರುಡಾಗಿದೆ.