ಗಾಲೆ: ಶ್ರೀಲಂಕಾ ವನಿತಾ ತಂಡ ಮೊದಲ ಬಾರಿಗೆ ನ್ಯೂಜಿಲ್ಯಾಂಡ್ ವಿರುದ್ಧ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ. ಗಾಲೆಯಲ್ಲಿ ಸೋಮವಾರ ನಡೆದ 3ನೇ ಪಂದ್ಯದಲ್ಲಿ ಲಂಕಾ ಡಿ-ಎಲ್ ನಿಯಮದಂತೆ ಕಿವೀಸ್‌ಗೆ 8 ವಿಕೆಟ್‌ಗಳ ಸೋಲುಣಿಸಿತು. ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು.
ಮಳೆಯಿಂದಾಗಿ ನ್ಯೂಜಿಲ್ಯಾಂಡ್‌ಗೆ 31 ಓವರ್‌ಗಳಲ್ಲಿ 2 ವಿಕೆಟಿಗೆ 127 ರನ್ ಬಾರಿಸಿತು. ಲಂಕೆಗೆ 29 ಓವರ್‌ಗಳಲ್ಲಿ 196 ರನ್ ಬಾರಿಸುವ ಕಠಿನ ಸವಾಲು ಲಭಿಸಿತು. ಆದರೆ ನಾಯಕಿ ಚಾಮರಿ ಅತಪಟ್ಟು ಈ ಸವಾಲನ್ನು ದಿಟ್ಟ ರೀತಿಯಲ್ಲಿ ಸ್ವೀಕರಿಸಿ ತಂಡವನ್ನು ದಡ ಮುಟ್ಟಿಸಿದರು. ಶ್ರೀಲಂಕಾ 26.5 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 196 ರನ್ ಬಾರಿಸಿತು.
ಚಾಮರಿ ಅತಪಟ್ಟು ಕೇವಲ 80 ಎಸೆತಗಳಲ್ಲಿ 140 ರನ್ ಬಾರಿಸಿ ಕಿವೀಸ್ ದಾಳಿಯನ್ನು ಧ್ವಂಸಗೊಳಿಸಿದರು. ಇದು ಅವರ 8ನೇ ಸೆಂಚುರಿ. 13 ಬೌಂಡರಿ ಜತೆಗೆ 9 ಸಿಕ್ಸರ್ ಸಿಡಿಸಿದ ಚಾಮರಿ ವನಿತಾ ಏಕದಿನದ ಸ್ಮರಣೀಯ ಇನ್ನಿಂಗ್ಸ್ ಒಂದಕ್ಕೆ ಸಾಕ್ಷಿಯಾದರು. ಇವರೊಂದಿಗೆ ನೀಲಾಕ್ಷಿ ಡಿ ಸಿಲ್ವ 48 ರನ್ ಮಾಡಿ ಅಜೇಯರಾಗಿ ಉಳಿದರು. 6 ರನ್‌ಗೆ 2 ವಿಕೆಟ್ ಕಳೆದುಕೊಂಡು ಅಪಾಯದಲ್ಲಿದ್ದ ಲಂಕೆಗೆ ಇವರಿಬ್ಬರು ಆಪತಾºಂಧವರಾದರು. ಮುರಿಯದ 3ನೇ ವಿಕೆಟಿಗೆ 190 ರನ್ ಹರಿದು ಬಂತು.
ಮೊದಲ ಏಕದಿನವನ್ನು ಶ್ರೀಲಂಕಾ 9 ವಿಕೆಟ್‌ಗಳಿಂದ ಜಯಿಸಿತ್ತು. ದ್ವಿತೀಯ ಪಂದ್ಯವನ್ನು 111 ರನ್ನುಗಳಿಂದ ಜಯಿಸಿದ ನ್ಯೂಜಿಲ್ಯಾಂಡ್ ಸರಣಿಯನ್ನು ಸಮಬಲಕ್ಕೆ ತಂದಿತ್ತು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-31 ಓವರ್‌ಗಳಲ್ಲಿ 2 ವಿಕೆಟಿಗೆ 127 (ಬೇಟ್ಸ್ ಔಟಾಗದೆ 63, ಡಿವೈನ್ ಔಟಾಗದೆ 38). ಶ್ರೀಲಂಕಾ-26.5 ಓವರ್‌ಗಳಲ್ಲಿ 2 ವಿಕೆಟಿಗೆ 196 (ಚಾಮರಿ ಅತಪಟ್ಟು ಔಟಾಗದೆ 140, ನೀಲಾಕ್ಷಿ ಡಿ ಸಿಲ್ವ ಔಟಾಗದೆ 48). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಚಾಮರಿ ಅತಪಟ್ಟು.