ಚಾಮರಾಜನಗರ: ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿದ್ದ ಜಿಲ್ಲಾಸ್ಪತ್ರೆ ಸೋಮವಾರದಿಂದ ಮತ್ತೆ ಕಾರ್ಯಾರಂಭ ಮಾಡಲಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರ ಕಟ್ಟುನಿಟ್ಟಿನ ಸೂಚನೆ ಫಲ ನೀಡಿದ್ದು, ಸಿಮ್ಸ್ ಕ್ಯಾಂಪಸ್‌ನಿಂದ ಸ್ಥಳಾಂತರಗೊಂಡು ತನ್ನ ಹಳೆಯ ಕಟ್ಟಡದಲ್ಲಿ ಜಿಲ್ಲಾಸ್ಪತ್ರೆ ಪುನಾರಂಭಗೊಳ್ಳುತ್ತಿದೆ.
ಇದನ್ನೂ ಓದಿ:ಭಾರತೀಯ ನೌಕಾಪಡೆಯ ಮೂರನೇ ರಹಸ್ಯ ಯುದ್ಧನೌಕೆ “ತಾರಾಗಿರಿ” ಅನಾವರಣ
ಹೊರ ರೋಗಿಗಳ ವಿಭಾಗ, ಸ್ಕ್ಯಾನಿಂಗ್, ಎಕ್ಸರೇ, ಇಂಜೆಕ್ಷನ್ ಮತ್ತಿತರ ವಿಭಾಗಗಳು ಸೋಮವಾರದಿಂದ ಆರಂಭಗೊಳ್ಳಲಿವೆ. ಎರಡು ಮೂರು ದಿನಗಳ ಬಳಿಕ ತುರ್ತು ಚಿಕಿತ್ಸಾ ವಿಭಾಗವೂ ಕಾರ್ಯಾರಂಭ ಮಾಡಲಿದೆ.
ಜಿಲ್ಲಾಸ್ಪತ್ರೆಯಲ್ಲಿ ಈ ಮೊದಲು 27 ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಲ್ಲಿ ಬಹುತೇಕ ವೈದ್ಯರು ಹಾಗೂ ಸಿಮ್ಸ್ ವೈದ್ಯರು ಸಹ ಜಿಲ್ಲಾಸ್ಪತ್ರೆಯಲ್ಲಿ ಪಾಳಿಯ ಮೇಲೆ ಕರ್ತವ್ಯ ನಿರ್ವಹಿಸಲಿದ್ದಾರೆ.
ಶನಿವಾರ ನಗರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಜಿಲ್ಲಾಸ್ಪತ್ರೆಯನ್ನು ಮತ್ತೆ ಹಳೆಯ ಕಟ್ಟಡಕ್ಕೆ ಸ್ಥಳಾಂತರಗೊಳಿಸುವಂತೆ ಆರೋಗ್ಯ ಇಲಾಖೆ ಮತ್ತು ಸಿಮ್ಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಸಚಿವರ ನಿರ್ದೇಶನದಂತೆ ಜಿಲ್ಲಾಸ್ಪತ್ರೆಯ ಹಳೆಯ ಕಟ್ಟಡ ಸೋಮವಾರ ಬೆಳಗ್ಗೆಯಿಂದ ಕಾರ್ಯಾರಂಭ ಮಾಡಲಿದೆ. ಹೊರ ರೋಗಿಗಳ ವಿಭಾಗದಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾ ಸರ್ಜನ್ ಡಾ. ಕೃಷ್ಣಪ್ರಸಾದ್ ಪತ್ರಿಕೆಗೆ ತಿಳಿಸಿದರು.
ಜಿಲ್ಲಾಸ್ಪತ್ರೆಯನ್ನು ಸಿಮ್ಸ್ ಉದ್ಘಾಟನೆಗೊಂಡ ಬಳಿಕ ನಗರದಿಂದ 7 ಕಿ.ಮೀ. ದೂರದ ಎಡಬೆಟ್ಟದಲ್ಲಿರುವ ಸಿಮ್ಸ್ ಆವರಣಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಇದರಿಂದ ರೋಗಿಗಳಿಗೆ ತೀವ್ರ ರೀತಿಯ ಅನಾನುಕೂಲ ಉಂಟಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರ ಕಾಳಜಿಯಿಂದಾಗಿ ಜಿಲ್ಲಾಸ್ಪತ್ರೆ ತನ್ನ ಹಳೆಯ ಕಟ್ಟಡಕ್ಕೆ ಮರಳಿದ್ದು, ಹರ್ಷ ತಂದಿದೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.