ಬೆಂಗಳೂರು: ರೈತರ ಪ್ರತಿಭಟನೆ, ಹುಣಸೋಡು ಸ್ಫೋಟ, ಕೆಪಿಎಸ್‌ಸಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ, ಸಂಪುಟ ವಿಸ್ತರಣೆ ಮತ್ತು ಖಾತೆಗಾಗಿ ಹಗ್ಗ ಜಗ್ಗಾಟಗಳ ನಡುವೆ ಗುರುವಾರ ರಾಜ್ಯ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದೆ. ಸರಕಾರದ ಮೇಲೆ ಮುಗಿಬೀಳಲು ವಿಪಕ್ಷಗಳು ಸಜ್ಜಾಗುತ್ತಿದ್ದರೆ, ತಿರುಗೇಟು ನೀಡಲು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ.
7 ದಿನ ನಡೆಯಲಿರುವ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡಿಸಿ ಅನುಮೋದನೆ ಪಡೆಯಬೇಕಿದೆ. ಲವ್ ಜೆಹಾದ್ ಕಾನೂನು ಪ್ರಸ್ತಾವದ ಸಾಧ್ಯತೆಯೂ ಇದೆ. ಹೀಗಾಗಿ ವರ್ಷದ ಮೊದಲ ಅಧಿವೇಶನ ವಾಕ್ಸಮರ – ಕೋಲಾಹಲಕ್ಕೆ ಸಾಕ್ಷಿಯಾಗಬಹುದು.
ವಿಧಾನಪರಿಷತ್‌ನ ಉಪ ಸಭಾಪತಿ ಚುನಾವಣೆಯೂ ನಿಗದಿಯಾಗಿದೆ. ವಿಧಾನಪರಿಷತ್‌ನಲ್ಲಿ ನಡೆದ ಕಹಿ ವಿದ್ಯಮಾನಗಳ ಕುರಿತು ಸದನ ಸಮಿತಿ ವರದಿ ಸಲ್ಲಿಸಿದೆ. ವರದಿ ಮಂಡನೆಯಾದರೆ ಪರಿಷತ್‌ನಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಬಹುದು.
60 ದಿನ ಕಲಾಪ? :
ವರ್ಷಕ್ಕೆ 60 ದಿನ ಅಧಿವೇಶನ ನಡೆಸಬೇಕು ಎಂದು ತೀರ್ಮಾನ ಮಾಡಲಾಗಿದ್ದರೂ 2002ರಿಂದ ಇದು ವರೆಗೆ ಅಷ್ಟು ದಿನ ನಡೆದೇ ಇಲ್ಲ. ಈ ವರ್ಷವಾದರೂ 60 ದಿನ ಅಧಿವೇಶನ ನಡೆಯುತ್ತದೆಯೇ ಎಂಬ ಪ್ರಶ್ನೆ ಇದೆ.