Advertisement

ಚಳ್ಳಕೆರೆ ಬಿಇಒ ಕಚೇರಿಗೆ ಚಿತ್ರಕಲೆ ಚಿತ್ತಾರ

03:49 PM Jun 11, 2018 | |

ನಾಯಕನಹಟ್ಟಿ: ಶತಮಾನ ಕಂಡ ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಚಳ್ಳಕೆರೆ ತಾಲೂಕಿನ ಕಲಾ ಶಿಕ್ಷಕರು ಚಿತ್ರಕಲೆಯ ಸ್ಪರ್ಶ ನೀಡಿದ್ದಾರೆ. ಬಿಇಒ ಕಚೇರಿ, ದ್ವಾರದಲ್ಲಿಯೇ ಸುಂದರ ಚಿತ್ರಗಳಿಂದ ಗಮನ ಸೆಳೆಯುತ್ತದೆ.
ಸಾಂಪ್ರದಾಯಿಕ ಶೈಲಿಯಾದ “ವರ್ಲಿ’ ವಿಧಾನ ಇಲ್ಲಿ ಬಳಕೆಯಾಗಿದೆ.  ನಾನಾ ರೀತಿಯ ರೇಖೆಗಳು, ಒಂದೇ ರೀತಿಯ ಬಣ್ಣ ಬಳಸಿಕೊಂಡು ಚಿತ್ರಗಳನ್ನು ರಚಿಸಿರುವುದು ವಿಶೇಷ. ಈ ಎಲ್ಲ ಕಲಾ ಚಿತ್ರಗಳನ್ನು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರೇ ಚಿತ್ರಿಸಿರುವುದು ವಿಶೇಷ. “ವರ್ಲಿ’ ಕಲೆ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

Advertisement

ಆಡಳಿತ ಹಾಗೂ ಕಾರ್ಯನಿರ್ವಹಣೆ ಮಾದರಿ ತಮ್ಮ ಕಚೇರಿಯಿಂದಲೇ ಆರಂಭವಾಗಬೇಕು ಎನ್ನುವ ದೃಷ್ಟಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್‌. ವೆಂಕಟೇಶಪ್ಪ ತಮ್ಮ ಕಚೇರಿಯನ್ನು ಕಲೆಯಿಂದ ಸಿಂಗರಿಸಿದ್ದಾರೆ. 

1908ರಲ್ಲಿ ನಿರ್ಮಾಣಗೊಂಡ ಸರಕಾರಿ ಶಾಲೆ ಕಳೆದ 20 ವರ್ಷಗಳಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಾಗಿ ಪರಿವರ್ತನೆಯಾಗಿದೆ. ಇದಕ್ಕೆ ಹೊಂದಿಕೊಂಡಂತೆ ಹಿಂಭಾಗದಲ್ಲಿ ಶತಮಾನದ ಸರಕಾರಿ ಶಾಲೆ ಕಾರ್ಯನಿರ್ವಹಿಸುತ್ತಿದೆ. 110 ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಕಟ್ಟಡ ಇದೀಗ ಅತ್ಯಾಧುನಿಕ ಕಲೆಯಿಂದ ಗಮನ ಸೆಳೆಯುತ್ತಿದೆ.

ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಾಣಗೊಂಡ ಕಟ್ಟಡಕ್ಕೆ ಚಿತ್ರಗಳ ಚಿತ್ತಾರ ಮೆರುಗು ನೀಡಿದೆ.  ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತಾಲೂಕಿನ ಎಲ್ಲ ಶಿಕ್ಷಕರು ಭೇಟಿ ನೀಡುತ್ತಿರುತ್ತಾರೆ. ಹಾಗಾಗಿ ಶಿಕ್ಷಕರಿಗೂ ಈ ಕಚೇರಿ ಮಾದರಿಯಾಗಿರಬೇಕು. ಆದ್ದರಿಂದ ಕಲಾ ಶಿಕ್ಷಕರು ಕಚೇರಿ ವಿಶಿಷ್ಟವಾಗಿ ಕಾಣುವಂತೆ ಮಾಡಬೇಕು, ಇದಕ್ಕೆ ಅಗತ್ಯವಿರುವ ಬಣ್ಣ ಮತ್ತಿತರ ವಸ್ತುಗಳನ್ನು ನೀಡುವುದಾಗಿ ಬಿಇಒ, ಕಲಾ ಶಿಕ್ಷಕರ ಮುಂದೆ ಪ್ರಸ್ತಾಪ ಇಟ್ಟರು. ಈ ಪ್ರಸ್ತಾಪಕ್ಕೆ ಸ್ಪಂದಿಸಿದ 12 ಕಲಾ ಶಿಕ್ಷಕರು ಬಿಇಒ ಕಚೇರಿಯನ್ನು ಚಿತ್ರಗಳಿಂದ ಸಿಂಗರಿಸಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತಮ್ಮ ಕೌಶಲ್ಯವನ್ನು ಚಿತ್ರಗಳ ಮೂಲಕ ಅಭಿವ್ಯಕ್ತಗೊಳಿಸಿದ್ದಾರೆ.

ವಿವಿಧ ಪ್ರೌಢಶಾಲೆಗಳ ಕಲಾ ಶಿಕ್ಷಕರಾದ ಎಚ್‌. ರವಿಕುಮಾರ್‌, ಅಶೋಕ್‌ಕುಮಾರ್‌, ಡಿ.ಎಸ್‌. ಬಸವರಾಜ್‌, ಟಿ. ಮುಕ್ಕಣ್ಣ, ಉದಯ್‌ಕುಮಾರ್‌, ಗೋಪಿ ನಾಯ್ಕ, ಎಂ.ಕೆ. ರೂಪಾ, ಕೆ.ಟಿ. ಕರಿಗೌಡ, ಯೋಗೀಶ್‌, ಮಲ್ಲನಗೌಡರ್‌, ಹಾಲೇಶ್‌, ಆರ್‌. ರಂಗಪ್ಪ ಚಿತ್ರ ರಚನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 

Advertisement

ಶಾಲೆಗೆ ಮಾತ್ರ ಸೀಮಿತವಾಗಿದ್ದ ಕಲಾ ಶಿಕ್ಷಕರು ಉತ್ಸಾಹದಿಂದ ತಮ್ಮ ಇಲಾಖೆಯ ಕಚೇರಿಯನ್ನು ಚಿತ್ರಗಳಿಂದ ಸಿಂಗರಿಸಿದ್ದಾರೆ. ಬಿಇಒ ಕಚೇರಿ ನವವಧುವಿನಂತೆ ಕಂಗೊಳಿಸುತ್ತಿದ್ದು, ಬಿಇಒ ಹಾಗೂ ಕಲಾ ಶಿಕ್ಷಕರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವರ್ಲಿ ಕಲಾ ವಿಧಾನವನ್ನು ಇಲ್ಲಿ ಪರಿಚಯಿಸುವುದು ಹಾಗೂ ಶತಮಾನದ ಕಟ್ಟಡಕ್ಕೆ ಹೊಸ ರೂಪ ನೀಡುವ ಉದ್ದೇಶ
ಹೊಂದಿದ್ದೇವೆ. ತಾಲೂಕಿನ 12 ಕಲಾ ಶಿಕ್ಷಕರು ಉತ್ತಮವಾಗಿ ಸ್ಪಂದಿಸಿದ್ದಾರೆ. ಇವರ ಕಲೆ ಹಾಗೂ ಸೃಜನಶೀಲತೆಯನ್ನು ಬಳಸಿಕೊಂಡು ಕಚೇರಿ ಹಾಗೂ ಸರಕಾರಿ ಶಾಲೆಗಳನ್ನು ಅಂದಗೊಳಿಸುವ ಉದ್ದೇಶವಿದೆ.
 ಸಿ.ಎಸ್‌. ವೆಂಕಟೇಶ್‌, ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ.

ಸಾಂಪ್ರದಾಯಿಕ ಕಲೆಯನ್ನು ಇಲ್ಲಿ ಪರಿಚಯಿಸಲಾಗಿದೆ. ಕಟ್ಟಡವನ್ನು ಸಂಪೂರ್ಣವಾಗಿ ಕಲ್ಲಿನಿಂದ ಕಟ್ಟಿದ್ದು, ಹೊರಮೈ ನುಣುಪಾಗಿಲ್ಲ. ಹೀಗಿದ್ದರೂ ಕಲಾಕೃತಿಗಳು ಉತ್ತಮವಾಗಿ ಮೂಡಿ ಬಂದಿವೆ. ಶಾಲೆಗೆ ಸೀಮಿತವಾಗಿದ್ದ ನಮಗೆ ಹೊಸ ಅನುಭವ ಉಂಟಾಗಿದೆ. ಬಿಇಒ ಮಾರ್ಗದರ್ಶದಲ್ಲಿ ಕಲಾ ಶಿಕ್ಷಕರು ಖುಷಿಯಿಂದ ಕಲಾಕೃತಿಗಳನ್ನು ರಚಿಸಿದ್ದೇವೆ.
 ಎಂ.ವೈ. ಅಶೋಕ್‌ಕುಮಾರ್‌, ಕಲಾ ಶಿಕ್ಷಕರು

Advertisement

Udayavani is now on Telegram. Click here to join our channel and stay updated with the latest news.

Next