ಹೊಸದಿಲ್ಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಇಂದು ದೇಶಾದ್ಯಂತ ಹೆದ್ದಾರಿ ತಡೆ ಚಳುವಳಿ ನಡೆಸಲಿದ್ದಾರೆ. ರಾಜ್ಯದಲ್ಲೂ ರೈತರು ಬೆಂಬಲ ನೀಡಿದ್ದು, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಮೂರು ತಾಸು ಬಂದ್ ಮಾಡಲಿದ್ದಾರೆ.
ದೇಶವ್ಯಾಪಿ ರೈತರ ‘ಚಕ್ಕಾ ಜಾಮ್’ ಹಿನ್ನೆಲೆಯಲ್ಲಿ ದೆಹಲಿಯ ಪ್ರತಿಭಟನಾ ಸ್ಥಳಗಳ ಸಮೀಪವಿರುವ ಎಲ್ಲ ಗಡಿಗಳಲ್ಲೂ ಪೊಲೀಸರು ಬಿಗಿಭದ್ರತೆ ಏರ್ಪಡಿಸಿದ್ದಾರೆ. ಜ.26ರ ಮಾದರಿ ಹಿಂಸಾಚಾರ ನಡೆಯದಂತೆ ತಡೆಯಲು ಈ ಮಟ್ಟದ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ದೆಹಲಿ ಪೊಲೀಸ್ ಪಿಆರ್‌ಒ ಚಿನ್ಮಯ್ ಬಿಸ್ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ:ಟೂಲ್ ಹಿಂದೆ ಖಲಿಸ್ಥಾನ : ಪಿಜೆಎಫ್ ಸ್ಥಾಪಕ ಧಾಲಿವಾಲ್ ಟೂಲ್‌ಕಿಟ್ ಸೃಷ್ಟಿಕರ್ತ
ಮಧ್ಯಾಹ್ನ 12 ಗಂಟೆಯಿಂದ ಮೂರು ಗಂಟೆಯವರೆಗೆ ಹೆದ್ದಾರಿ ತಡೆಗೆ ನಿರ್ಧರಿಸಲಾಗಿದೆ. ಮೂರು ಗಂಟೆಗೆ ರಸ್ತೆ ತಡೆ ಮುಗಿಯುವ ಸಂಕೇತವಾಗಿ ಒಂದು ನಿಮಿಷದ ಕಾಲ ವಾಹನಗಳ ಹಾರ್ನ್ ಮಾಡಲಾಗುತ್ತದೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಪೊಲೀಸರ ವಿರುದ್ಧ ವದಂತಿ ಹಬ್ಬಿಸುವವರ ಮೇಲೆ ಕ್ರಮ ಕೈಗೊಳ್ಳುವ ಸಲುವಾಗಿ ಸಾಮಾಜಿಕ ಜಾಲತಾಣಗಳ ಮೇಲೂ ಕಣ್ಣಿಡಲಾಗಿದೆ. ಇನ್ನೊಂದೆಡೆ, ದೆಹಲಿ-ಎನ್‌ಸಿಆರ್ ಪ್ರದೇಶ, ಉತ್ತರಪ್ರದೇಶ, ಉತ್ತರಾಖಂಡದಲ್ಲಿ ಹೆದ್ದಾರಿ ತಡೆ ನಡೆಸಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಪೊಲೀಸರೇ ಹೆದ್ದಾರಿಗಳನ್ನು ಬ್ಲಾಕ್ ಮಾಡಿರುವ ಕಾರಣ ನಾವು ಇಲ್ಲಿ ರಸ್ತೆ ತಡೆ ನಡೆಸಲ್ಲ. ಬದಲಿಗೆ, ಆಯಾ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುತ್ತೇವೆ ಎಂದಿದ್ದಾರೆ.
ರಾಷ್ಟ್ರ ರಾಜಧಾನಿಯ ಎಲ್ಲಾ ಗಡಿ ಭಾಗದಲ್ಲಿ ಭಾರಿ ಪೊಲೀಸ್ ಭದ್ರತೆ ಮಾಡಲಾಗಿದೆ. ಸುಮಾರು 40 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಮೆಟ್ರೋ ಸ್ಟೇಷನ್ ಗಳಲ್ಲೂ ಎಚ್ಚರಿಕೆ ವಹಿಸಲಾಗಿದೆ. ದಿಲ್ಲಿಯ ಹಲವು ಭಾಗಗಳಲ್ಲಿ ಪ್ಯಾರಾ ಮಿಲಿಟರಿ ಪಡೆಗಳನ್ನೂ ನಿಯೋಜಿಸಲಾಗಿದೆ.
ಇದನ್ನೂ ಓದಿ: ಕೃಷಿ ಕಾಯ್ದೆ ಖಂಡಿಸಿ ಇಂದು ರೈತರಿಂದ ಕರ್ನಾಟಕ ಸಹಿತ ದೇಶವ್ಯಾಪಿಯಾಗಿ ಹೆದ್ದಾರಿ ಬಂದ್
ಜ.26 ರಂದು ಕೆಂಪು ಕೋಟೆಯಲ್ಲಿ ನಡೆದ ಘಟನೆಯ ಕಾರಣದಿಂದ ಇಂದು ಅದರ ಸುತ್ತ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಗಾಜಿಪುರ ಗಡಿಯಲ್ಲಿ ಬ್ಯಾರಿಕೇಡ್, ನೀರಿನ ಟ್ಯಾಂಕರ್ ಗಳನ್ನು ಇರಿಸಲಾಗಿದೆ.